ಬೆಂಗಳೂರು: ಕುಂಗ್ ಫೂ ಸಿನಿಮಾ ಖ್ಯಾತಿಯ ನಟ ಜಾಕಿ ಚಾನ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದಾಗ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು ಎನ್ನುವ ಸಂಗತಿ ಸಾಮಾಜಿಕ ತಾಣಗಳಲ್ಲಿ ಚರ್ಚೆಗೆ ಒಳಗಾಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಮಾದಕವಸ್ತು ಹೊಂದಿದ್ದ ಆರೋಪದಲ್ಲಿ ಜೈಲು ಪಾಲಾಗಿರುವ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಜಾಕಿ ಚಾನ್ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಪ್ರಕರಣ?
ಜಾಕಿ ಚಾನ್ ಪುತ್ರ, ನಟ ಮತ್ತು ಗಾಯಕರಾಗಿರುವ ಜೇಸಿ ಅವರನ್ನು 2014ರ ಆಗಸ್ಟ್‌ನಲ್ಲಿ ಬೀಜಿಂಗ್‌ನ ಅಪಾರ್ಟ್‌ಮೆಂಟ್‌ನಲ್ಲಿ 100 ಗ್ರಾಂ ಮರಿಜುವಾನಾ ಹೊಂದಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.
ಈ ವಿಚಾರ ನಟ ಜಾಕಿ ಚಾನ್‌ಗೆ ತೀವ್ರ ಮುಜುಗರ ಉಂಟುಮಾಡಿತ್ತು. ಅಲ್ಲದೆ, ಮಾದಕವಸ್ತು ವಿರೋಧಿ ಅಭಿಯಾನದಲ್ಲೂ ಪಾಲ್ಗೊಂಡಿದ್ದ ಜಾಕಿ ಚಾನ್ ಅವರಿಗೆ ಪುತ್ರನೇ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ತೀವ್ರ ಅಘಾತ ಉಂಟುಮಾಡಿತ್ತು.
ಅದಾದ ಬಳಿಕ ಪ್ರಕರಣ ಕುರಿತಂತೆ ಜಾಕಿ ಚಾನ್, ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ಪೋಸ್ಟ್ ಒಂದನ್ನು ಮಾಡಿ, ಮೊದಲಿಗೆ ನಿಮ್ಮೆಲ್ಲರ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ. ಒಬ್ಬ ತಂದೆಯಾಗಿ ನನಗೆ ನಾಚಿಕೆಯಾಗುತ್ತಿದೆ. ಈ ಬಗ್ಗೆ ನಾನು ನಿಮ್ಮೆಲ್ಲರ ಕ್ಷಮೆ ಕೋರುತ್ತಿದ್ದೇನೆ. ಜೇಸಿ ತಾಯಿಯ ನೋವನ್ನು ನನಗೆ ಹೇಳಲಾಗುತ್ತಿಲ್ಲ. ನನ್ನ ಮಗನ ಕೃತ್ಯದ ಬಗ್ಗೆ ಅತೀವ ಕೋಪವಿದೆ, ಯುವಜನತೆ ಡ್ರಗ್ಸ್ ಚಟಕ್ಕೆ ಬಲಿಯಾಗಬೇಡಿ, ಜೇಸಿಯ ಪ್ರಕರಣ ನಿಮಗೆಲ್ಲ ಒಂದು ಪಾಠವಾಗಲಿ ಎಂದಿದ್ದರು.
ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ ಜಾಕಿ ಚಾನ್ ಪುತ್ರ ಜೇಸಿ ಕೂಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.
ಪ್ರಸ್ತುತ ಶಾರುಖ್ ಪುತ್ರ ಡ್ರಗ್ಸ್ ಹೊಂದಿರುವ ಆರೋಪದಲ್ಲಿ ಎನ್‌ಸಿಬಿ ವಶದಲ್ಲಿರುವ ಸಂದರ್ಭದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿರುವುದನ್ನು ಜನರು ಟೀಕಿಸಿ, ಜಾಕಿ ಚಾನ್ ಉದಾಹರಣೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.