ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
₹200 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿತ್ತು. ಇದರ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯ(ಇ.ಡಿ) ಎಫ್ಐಆರ್ನಲ್ಲಿ ಜಾಕ್ವೆಲಿನ್ ಅವರ ಹೆಸರನ್ನು ಸೇರಿಸಿದೆ. ಅಲ್ಲದೇ ಪೂರಕ ಚಾರ್ಜ್ ಶೀಟ್ ಕೂಡ ಸಲ್ಲಿಸಲಾಗಿದೆ. ಇದೀಗ ನಟಿ ತನ್ನ ವಿರುದ್ಧ ದಾಖಲಾಗಿರುವ ಚಾರ್ಜ್ ಶೀಟ್ ಮತ್ತು ಎಫ್‌ಐಆರ್ ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
‘ಸುಕೇಶ್ ಪ್ರಕರಣದಲ್ಲಿ ಜಾಕ್ವೆಲಿನ್ ಸಂತ್ರಸ್ತೆಯಾಗಿದ್ದಾರೆ. ವಂಚನೆಯಿಂದ ಹಣ ಗಳಿಸುವ ಉದ್ದೇಶ ಹೊಂದಿದ್ದ ಸುಕೇಶ್ ಮಾಡಿದ ಅಪರಾಧಗಳಿಗೆ ಜಾಕ್ವೆಲಿನ್ ಯಾವುದೇ ಸಹಾಯ ಮಾಡಿಲ್ಲ. ಹಾಗಾಗಿ ಅವರಿಗೆ ಶಿಕ್ಷೆಯಾಗಬಾರದು' ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
ಪ್ರಕರಣ ಸಂಬಂಧ (₹200 ಕೋಟಿ ವಂಚನೆ) 2022ರ ಆಗಸ್ಟ್ 17 ರಂದು, ಜಾಕ್ವೆಲಿನ್ ವಿರುದ್ಧ ಇ.ಡಿ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್ ಶೀಟ್ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ನಿಂದ ಜಾಕ್ವೆಲಿನ್ ದುಬಾರಿ ಉಡುಗೊರೆ ಪಡೆದಿದ್ದಾರೆ ಎನ್ನಲಾಗಿದೆ. ಈ ಉಡುಗೊರೆಗಳ ಮೌಲ್ಯ ₹ 71 ಲಕ್ಷ ಎಂದು ಹೇಳಲಾಗಿದೆ. ಬಳಿಕ ನಟಿಯ ₹7 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.