ನಟ ದರ್ಶನ್ ಅವರ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಮತ್ತು ಕೋಮಲ್ ಅಭಿನಯದ ‘ಕೆಂಪೇಗೌಡ 2’ ಚಿತ್ರ ಆಗಸ್ಟ್ 9ರಂದೇ ಬಿಡುಗಡೆಯಾಗುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಬಿಡುಗಡೆ ಸಂಬಂಧ ಕೋಮಲ್ ಮತ್ತು ಅವರ ಅಣ್ಣ ಜಗ್ಗೇಶ್ ಹಂಚಿಕೊಂಡಿರುವ ಅಭಿಪ್ರಾಯಕ್ಕೆ ದರ್ಶನ್ ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಕುರುಕ್ಷೇತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ನಿರ್ಮಾಪಕ ಮುನಿರತ್ನ ಘೋಷಿಸಿದ್ದರು. ಈ ನಡುವೆ ರಾಜ್ಯದಲ್ಲಿ ತಲೆದೋರಿದ ರಾಜಕೀಯ ಸ್ಥಿತ್ಯಂತರದಲ್ಲಿ ಅವರೂ ಭಾಗಿಯಾದರು.
ಆಗಸ್ಟ್ 15ರಂದು ಪ್ರಭಾಸ್ ನಟನೆಯ ತೆಲುಗಿನ ಬಿಗ್ ಬಜೆಟ್ ಚಿತ್ರ ‘ಸಾಹೊ’ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಡಿತ್ತು. ಹಾಗಾಗಿ, ‘ಮುನಿರತ್ನ ಕುರುಕ್ಷೇತ್ರ’ ಚಿತ್ರವನ್ನು ನಿಗದಿತ ದಿನಕ್ಕಿಂತ ಒಂದು ವಾರದ ಮೊದಲೇ ಅಂದರೆಆಗಸ್ಟ್ 2ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತು.
ಹಾಗಾಗಿ, ‘ಕೆಂಪೇಗೌಡ 2’ ಚಿತ್ರದಲ್ಲಿ ನಟಿಸಿರುವ ನಟ ಕೋಮಲ್ ಆಗಸ್ಟ್ 9ರಂದು ಜನರ ಮುಂದೆ ಬರಲು ನಿರ್ಧರಿಸಿದ್ದರು. ಈಗ ‘ಸಾಹೊ’ ಚಿತ್ರದ ಬಿಡುಗಡೆಯ ದಿನಾಂಕವು ತಾಂತ್ರಿಕ ಕಾರಣಗಳಿಂದಾಗಿ ಆಗಸ್ಟ್ ಅಂತ್ಯಕ್ಕೆ ಹೋಗಿದೆ. ಹಾಗಾಗಿ, ಈ ಹಿಂದೆ ಘೋಷಿಸಿದಂತೆ ‘ಮುನಿರತ್ನ ಕುರುಕ್ಷೇತ್ರ’ವು ಆಗಸ್ಟ್ 9ರಂದು ತೆರೆ ಕಾಣಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಇದು ಕೋಮಲ್ ಮತ್ತು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
‘ನಾನು ದರ್ಶನ್ ಸರ್ ಅವರ ಗಜ, ದತ್ತ ಸಿನಿಮಾದಲ್ಲೂ ನಟಿಸಿದ್ದೇನೆ. ನಾನಾಗಿಯೇ ಹುಡುಕಿಕೊಂಡು ಹೋಗಿ ಅವರ ಗಾಡಿಯ ಹತ್ತಿರ ಬಿದ್ದಿಲ್ಲ. ಹಾಗೆ ಮಾಡಿದ್ದರೆ ಅದು ನನ್ನ ತಪ್ಪು. ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ನನ್ನ ಮೇಲೆ ಗುದ್ದಿದ್ದಾರೆ. ಆದರೂ, ಪರವಾಗಿಲ್ಲ. ಜನರಿಗೆ ಯಾವ ಸಿನಿಮಾ ಇಷ್ಟವಾಗುತ್ತದೆಯೋ ಅದನ್ನು ನೋಡುತ್ತಿದ್ದಾರೆ. ‘ಮುನಿರತ್ನ ಕುರುಕ್ಷೇತ್ರ’ ಚಿತ್ರವನ್ನು ಮೊದಲು ನೋಡಲಿ. ಬಳಿಕ ನನ್ನ ಸಿನಿಮಾ ನೋಡಲಿ’ ಎಂದು ಕೋಮಲ್ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆ ನಟ ಜಗ್ಗೇಶ್, ‘ದರ್ಶನ ಜೊತೆ ನಟಿಸಿ ನನಗಿಂತ ದರ್ಶನನನ್ನು ಹೆಚ್ಚು ಪ್ರೀತಿಸುತ್ತಾನೆ ಕೋಮಲ್. ಅವನ ಅನಿಸಿಕೆ #ಕೆಂಪೇಗೌಡ 2 ಚಿತ್ರದ ಬಗ್ಗೆ. ಅಸಹಾಯಕತೆಯನ್ನು ಮನಬಿಚ್ಚಿ ಹೇಳಿದ್ದಾನೆ ಮಾಧ್ಯಮ ಮಿತ್ರರಿಗೆ. ಅವನು ನನ್ನಂತೆ ಕನ್ನಡಿಗರ ರಂಜಿಸಿದ ಕನ್ನಡದ ನಟ. ಉತ್ತಮ ಚಿತ್ರಕ್ಕಾಗಿ 3 ವರ್ಷ ಶ್ರಮಿಸಿದ್ದಾನೆ. ಅವನಿಗೂ ಶುಭವಾಗಲಿ ಎಂದು ಹರಸಿ’ ಎಂದು ಪ್ರತಿಕ್ರಿಯಿಸಿದ್ದಾರೆ.
ಜಗ್ಗೇಶ್ ಟ್ವೀಟ್‌ಗೆ ದರ್ಶನ್ ಅಭಿಮಾನಿ ಆರ್.ಎನ್. ಸಂತೋಷ್ ಪ್ರತಿಕ್ರಿಯಿಸಿರುವುದು ಹೀಗೆ: ‘ಸರ್ ನಾವು ಡಿ ಬಾಸ್ ಹೇಗೆ ಎಲ್ಲರಿಗೂ ಸಪೋರ್ಟ್ ಮಾಡುತಾರೋ ಅದೇ ರೀತಿ ನಾವು ಎಲ್ಲಾ ಕನ್ನಡದ ಸಿನಿಮಾಕ್ಕೆ ಸಪೋರ್ಟ್ ಮಾಡ್ತೀವಿ ಸರ್. ಫಸ್ಟ್ ಡೇ ಫಸ್ಟ್ ಶೋ ನರ್ತಕಿಯಲ್ಲಿ ಬಾಸ್ ಕುರುಕ್ಷೇತ್ರ ನೋಡುತ್ತೇವೆ. ಅಲ್ಲೇ ಪಕ್ಕದ ಸಂತೋಷ್ ಚಿತ್ರಮಂದಿರದಲ್ಲಿ ಕೆಂಪೇಗೌಡ 2 ಸಿನಿಮಾ ನೋಡುತೇವೆ ಬಿಡಿ ಸರ್.’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.