ಬೆಂಗಳೂರು: ಮಕ್ಕಳ ದಿನಾಚರಣೆಯಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿರುವ ನಟ ಜಗ್ಗೇಶ್, ಇಂದಿನ ಮಕ್ಕಳ ಸ್ಥಿತಿಯ ಬಗ್ಗೆಯೂ ಸಂಕ್ಷಿಪ್ತವಾಗಿ ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘61ವರ್ಷದ ಅಕ್ಕ ವಿಜಯಲಕ್ಷ್ಮಿ ಸೂರ್ಯೋದಯಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ಒಂದು ನಗುಮುಖದ ಸಂದೇಶ ಕಳಿಸುತ್ತಾಳೆ. ಆದರೆ ಇಂದು ಕಳುಹಿಸಿದ ಸಂದೇಶ ಒಂದು ಗಂಟೆ ಯಾವ ಕೆಲಸ ಮಾಡದಂತೆ ಕಣ್ಣು ಒದ್ದೆಮಾಡಿ ಕಟ್ಟಿಹಾಕಿತು. ಕಾರಣ, 59 ವರ್ಷದ ನಾನು ಹಾಗು ಅಕ್ಕ ಬಹುತೇಕ 20ವರ್ಷ ಜೊತೆಯಲ್ಲೆ ಬೆಳೆದವರು. ಅವಳ ಮದುವೆ ನಂತರ ನಾವು ನಮ್ಮ ಬದುಕು ಅಂತ ವಾರಕ್ಕೆ ಸಿಗುವ ಬಂಧುವಾದೆವು. ಇದೇ ಬದುಕು. ಇಂದು ಅಕ್ಕ ಕಳುಹಿಸಿದ ಈ ವಿಡಿಯೊ ನನ್ನನ್ನು 50 ವರ್ಷ ಹಿಂದಿನ ದಿನಕ್ಕೆ ಕರೆದೊಯ್ಯಿತು ಎಂದಿದ್ದಾರೆ.
ಅಂದಿನ ನಮ್ಮ ಆಟದ ವಸ್ತುಗಳು, ತಿಂಡಿಗಳು, ಅಮ್ಮನ ಒಲೆ, ತಾತ ನೀಡುತ್ತಿದ್ದ ಪೈಸೆಗಳು, ಒಟ್ಟು ಕುಟುಂಬದ ವ್ಯವಸ್ಥೆ, ತಾತ ಅಮ್ಮನ ಮಡಿಲು, ವಾಹನವಿಲ್ಲದ ರಸ್ತೆಗಳು, ರಾಜಣ್ಣನ ಕಪ್ಪುಬಿಳುಪಿನ ಚಿತ್ರಗಳು, ಓಡಾಡಿದ ಜಟಕಾ ಬಂಡಿ, ತಾತ ಅಪ್ಪನ ಭುಜದ ಮೇಲೆ ಕುಳಿತು ನೋಡಿದ ಕರಗ, ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ಕುಡಿಯುತ್ತಿದ್ದ ಬೆಳಗಿನ ಕಾಫಿ, ಸೌದೆ ಒಲೆ, ಹರಿದರೂ ಶುಭ್ರವಾಗಿದ್ದ ಸ್ಕೂಲ್ ಸಮವಸ್ತ್ರ, ಕೇಳುತ್ತಿದ್ದ ಗುರುರಾಜಲು ಹರಿಕಥೆ, ರಾತ್ರಿ ಹೊತ್ತು ಅಪ್ಪ ಕೊಡಿಸುತ್ತಿದ್ದ ತಾಟಿನುಂಗು, ಒಂದೇ ಚಾಪೆಯ ಮೇಲೆ ನಾವೆಲ್ಲರೂ ಮಲಗುತ್ತಿದ್ದ ರಾತ್ರಿಗಳು.. ಚಿತ್ರದ ಸನ್ನಿವೇಶದಂತೆ ಸರಿದು ಹೋಯಿತು!’
‘ಇಂದಿನ ಮಕ್ಕಳು ಈ ಸಂತೋಷ ಸುಖ ನೋಡಲಾಗದ ನತದೃಷ್ಟರು. ಆಧುನಿಕತೆಯ ಭರಾಟೆ, ವಿಡಿಯೊ ಗೇಮ್ಸ್, ಒಬ್ಬಂಟಿತನ, ಒಂದು ಮನೆಯಲ್ಲೆ ಇದ್ದರೂ ಪರಸ್ಪರ ಮಾತಾಡದೆ ಮೊಬೈಲ್‌ನಲ್ಲೆ ಮುಳುಗಿರುವ ಸಂತತಿಗಳು.ಒಟ್ಟಾರೆ ನಮ್ಮ ತಲೆಮಾರು ಕಡೆಯ ತಲೆಗಳು ಇಂಥ ಆನಂದ ಅನುಭವಿಸಿ ಇಂದಿನವರಿಗೆ ಹಂಚಲು ಉಳಿದಿರುವವರು. ನಮ್ಮ ತಲೆಮಾರು ಹೋದ ಮೇಲೆ ಇನ್ನು ಇರಬೇಕಿತ್ತು ಎಂದು ತಿಥಿ ಸಮಯದಲ್ಲಿ ಮಾತ್ರ ಪರಿತಪಿಸುತ್ತಾರೆ. ಇದೇ ಮನುಜ ಜನ್ಮ. ನಗುತ ಬಾಳಿ ಆಯುಷ್ಯ ಇರುವ ತನಕ’ ಎಂದು ಉಲ್ಲೇಖಿಸಿದ್ದಾರೆ ಜಗ್ಗೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.