ಚೆನ್ನೈ: ‘ಯಾರನ್ನೂ ಕೆಟ್ಟದಾಗಿ ಬಿಂಬಿಸುವ ಉದ್ದೇಶವಿಲ್ಲ. ಆದರೆ, ಚಿತ್ರದಲ್ಲಿನ ಯಾವುದೇ ದೃಶ್ಯವು ಯಾರಿಗಾದರೂ ನೋವು ಅಥವಾ ಅವರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ’ ಎಂದು ತಮಿಳಿನ ಜನಪ್ರಿಯ ಸಿನಿಮಾ ‘ಜೈ ಭೀಮ್’ ಚಿತ್ರದ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರು ಭಾನುವಾರ ಹೇಳಿದ್ದಾರೆ.
ಈ ಕುರಿತು ಎರಡು ಪುಟಗಳ ಹೇಳಿಕೆ ಬಿಡುಗಡೆ ಮಾಡಿರುವ ಜ್ಞಾನವೇಲ್ ಅವರು, ‘ಚಿತ್ರದಲ್ಲಿ ಅಗ್ನಿಕುಂಡವಿರುವ ಕ್ಯಾಲೆಂಡರ್‌ನ ದೃಶ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ವಿವಿಐಪಿಗಳಿಗಾಗಿ ಆಯೋಜಿಸಿದ್ದ ವಿಶೇಷ ಚಿತ್ರ ಪ್ರದರ್ಶನದಲ್ಲಿ ಕ್ಯಾಲೆಂಡರ್ ಬಗ್ಗೆ ಚಿತ್ರತಂಡದ ಸದಸ್ಯರು ಗಮನಿಸಿರಲಿಲ್ಲ. ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಬಿಡುಗಡೆಯಾದ ಒಂದು ದಿನದ ನಂತರ ಅಂದರೆ ನ.2ರಂದು ಸಮಸ್ಯೆಯನ್ನು ನಮ್ಮ ಗಮನಕ್ಕೆ ತರಲಾಯಿತು. ಕೂಡಲೇ ಕ್ಯಾಲೆಂಡರ್‌ನಲ್ಲಿದ್ದ ಅಗ್ನಿಕುಂಡದ ಬದಲಿಗೆ ಮತ್ತೊಂದು ಚಿತ್ರ ಹಾಕಲು ಕ್ರಮಕೈಗೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.
‘ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಅಂಥೋನಿಸಾಮಿ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಗುರುಮೂರ್ತಿ (ಪಿಎಂಕೆ ನಾಯಕ) ಎಂದು ಬದಲಾಯಿಸಿರುವುದು ಹಾಗೂ ಕ್ಯಾಲೆಂಡರ್‌ನ ಅಗ್ನಿಕುಂಡದ ದೃಶ್ಯವನ್ನು ತಮಿಳುನಾಡಿನ ಪ್ರಬಲ ವಣ್ಣಿಯಾರ್ ಸಮುದಾಯಕ್ಕೆ ಕಳಂಕ ತರುವಂತೆ ಚಿತ್ರಿಸಲಾಗಿದೆ’ ಎಂದು ಪಿಎಂಕೆ ಮತ್ತು ಅದರ ಮಾತೃಸಂಸ್ಥೆ ವಣ್ಣಿಯಾರ್ ಸಂಗಮ್ ಟೀಕಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿ ಜ್ಞಾನವೇಲ್ ಅವರು ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಿವಾದದ ಕುರಿತು ಪಿಎಂಕೆ ನಾಯಕ ಮತ್ತು ಕೇಂದ್ರದ ಮಾಜಿ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ನಟ ಸೂರ್ಯ ಅವರಿಗೆ ಪತ್ರ ಬರೆದಿದ್ದಾರೆ.
‘ಚಿತ್ರದ ವಿವಾದದಿಂದಾಗಿ ನಿರ್ಮಾಪಕ ಮತ್ತು ನಟ ಸೂರ್ಯ ಅವರಿಗೆ ತೊಂದರೆಯಾಗಿದ್ದಕ್ಕಾಗಿ ವಿಷಾದಿಸುವೆ’ ಎಂದೂ ಜ್ಞಾನವೇಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.