ಪ್ರಸ್ತುತ ಕಾಂತಾರ ಸಿನಿಮಾದ ಪ್ರೀಕ್ವೆಲ್ನಲ್ಲಿ ತೊಡಗಿಸಿಕೊಂಡಿರುವ ನಟ ರಿಷಬ್ ಶೆಟ್ಟಿ ಟಾಲಿವುಡ್ಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿರುವ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನಾಗಿ ರಿಷಬ್ ಬಣ್ಣಹಚ್ಚಿದ್ದಾರೆ.
ಇತ್ತೀಚೆಗೆ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ. ‘ಡಿವೈನ್ ಸ್ಟಾರ್’ ಎಂದೇ ಖ್ಯಾತಿ ಪಡೆದಿರುವ ರಿಷಬ್, ‘ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ’ ಎಂದಿದ್ದಾರೆ. 2024ರ ಆರಂಭದಲ್ಲಿ ಟಾಲಿವುಡ್ ಅಂಗಳದಲ್ಲಿ ಮೂಡಿಬಂದಿದ್ದ ತೇಜ್ ಸಜ್ಜಾ ನಟನೆಯ ‘ಹನುಮಾನ್’ ಸಿನಿಮಾ ಭಾರತದಾದ್ಯಂತ ಉತ್ತಮ ಗಳಿಕೆ ಮಾಡಿತ್ತು. ಇದೀಗ ಇದೇ ಸಿನಿಮಾದ ಸೀಕ್ವೆಲ್ ಮೂಡಿಬರುತ್ತಿದೆ.
‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರಿಷಬ್ ಶೆಟ್ಟಿ, ಇದೀಗ ಪೌರಾಣಿಕ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಫಸ್ಟ್ಲುಕ್ನಲ್ಲಿ ಕೈಯಲ್ಲಿ ರಾಮನ ವಿಗ್ರಹ ಹಿಡಿದು ಕುಳಿತ ಹನುಮಂತನಾಗಿ ರಿಷಬ್ ಕಾಣಿಸಿಕೊಂಡಿದ್ದಾರೆ. ‘ಜೈ ಹನುಮಾನ್’ ಸಿನಿಮಾವ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ನ ಭಾಗವಾಗಿ ತಯಾರಾಗಲಿದೆ. ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ದೊಡ್ಡ ಬಜೆಟ್ನಲ್ಲಿ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ನಡಿ ‘ಜೈ ಹನುಮಾನ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.