ADVERTISEMENT

ನಟ ರಜನಿಕಾಂತ್ ಅಭಿನಯದ ‘ಜೈಲರ್‌’ ಚಿತ್ರ ಆಗಸ್ಟ್‌ 10ರಂದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 16:43 IST
Last Updated 6 ಆಗಸ್ಟ್ 2023, 16:43 IST
‘ಜೈಲರ್’ ಚಿತ್ರದಲ್ಲಿ ತಮನ್ನಾ, ರಜನೀಕಾಂತ್
‘ಜೈಲರ್’ ಚಿತ್ರದಲ್ಲಿ ತಮನ್ನಾ, ರಜನೀಕಾಂತ್   

ರಜನಿಕಾಂತ್, ಶಿವರಾಜ್​ಕುಮಾರ್, ಮೋಹನ್​ಲಾಲ್ ಮುಖ್ಯಭೂಮಿಕೆಯಲ್ಲಿರುವ ‘ಜೈಲರ್’ ಚಿತ್ರ ಆಗಸ್ಟ್ 10ರಂದು ತೆರೆ ಕಾಣುತ್ತಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳು ತಮಿಳಿನ ಈ ಚಿತ್ರ ಬಿಡುಗಡೆಗೆ ಉತ್ಸಾಹ ತೋರಿದ್ದು, ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗದ ಸ್ಥಿತಿ ನಿರ್ಮಾಣಗೊಂಡಿದೆ.

ನಟ ಜಗ್ಗೇಶ್‌, ಡಾಲಿ ಧನಂಜಯ್‌ ಅಭಿನಯದ ‘ತೋತಾಪುರಿ–2’ ಚಿತ್ರತಂಡ ಆ.11ಕ್ಕೆ ತೆರೆಗೆ ಬರುವುದಾಗಿ ಹೇಳಿತ್ತು. ‘ಬಹುತೇಕ ಚಿತ್ರಮಂದಿರಗಳು ಜೈಲರ್‌ ಸಿನಿಮಾ ಪ್ರದರ್ಶನಕ್ಕೆ ಉತ್ಸುಕವಾಗಿವೆ. ಹೀಗಾಗಿ ಕನ್ನಡ ಸಿನಿಮಾಕ್ಕೆ ಶೋ ಸಿಗುವುದು ಕಷ್ಟವಾಗಿದೆ. ಹೀಗಾಗಿ ನಮ್ಮ ಚಿತ್ರ ಬಿಡುಗಡೆ ಕುರಿತು ಗೊಂದಲ ಬಗೆಹರಿದಿಲ್ಲ. ಇಂದು(ಆ.7) ಒಂದು ವಿತರಕ ತಂಡದ ಜೊತೆ ಸಭೆಯಿದೆ. ಅದರ ಬಳಿಕ ಚಿತ್ರ ಬಿಡುಗಡೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ‘ತೋತಾಪುರಿ’ ನಿರ್ಮಾಪಕ ಕೆ.ಎ.ಸುರೇಶ್.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್‌’ ತಮಿಳು ಅವತರಣಿಕೆಗೆ ಬೆಂಗಳೂರಿನಲ್ಲಿ ಈಗಾಗಲೇ 800ಕ್ಕೂ ಅಧಿಕ ಸ್ಕ್ರೀನ್‌ ಖಚಿತವಾಗಿದೆ. ಕನ್ನಡ ಡಬ್‌ ಆವೃತ್ತಿಗೆ 10ಕ್ಕಿಂತ ಕಡಿಮೆ ಸ್ಕ್ರೀನ್‌ಗಳಿವೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವೂ ವ್ಯಕ್ತವಾಗಿದೆ.

ADVERTISEMENT

‘ಚೆನ್ನೈ ಎವಿ ಮೀಡಿಯಾ ಚಿತ್ರ ಬಿಡುಗಡೆ ಮಾಡುತ್ತಿದೆ. ಕರ್ನಾಟಕದಲ್ಲಿ ಅವರಿಂದ ನಾವು ಸಬ್‌ ರಿಲೀಸ್‌ ಮಾಡುತ್ತಿದ್ದೇವೆ. ದೊಡ್ಡ ಕನ್ನಡ ಸಿನಿಮಾ ಇಲ್ಲ. ಜೈಲರ್‌ ಕ್ರೇಜ್‌ ಹೆಚ್ಚಿದೆ. ಆದಾಗ್ಯೂ ಉತ್ತಮವಾಗಿ ಕಲೆಕ್ಷನ್‌ ಮಾಡುತ್ತಿರುವ ಕನ್ನಡ ಚಿತ್ರಗಳಿಗೆ ತೊಂದರ ಮಾಡುವುದಿಲ್ಲ. ಬುಧವಾರದ ಹೊತ್ತಿಗೆ 300 ಸಿಂಗಲ್‌ ಸ್ಕ್ರೀನ್‌ ಸೇರ್ಪಡೆಯಾಗಬಹುದು. 80ಕ್ಕಿಂತ ಹೆಚ್ಚು ಮಲ್ಟಿಪ್ಲೆಕ್ಸ್‌ಗಳು ಸೇರಿ ಮೊದಲ ದಿನವೇ ರಾಜ್ಯದಲ್ಲಿ 2000ಕ್ಕೂ ಅಧಿಕ ಪ್ರದರ್ಶನದ ನಿರೀಕ್ಷೆಯಿದೆ’ ಎನ್ನುತ್ತಾರೆ ಜಯಣ್ಣ ಫಿಲ್ಮಸ್‌ನ ಬೋಗೇಂದ್ರ. 

‘ಜೈಲರ್‌’ ಆನ್‌ಲೈನ್‌ ಬುಕ್ಕಿಂಗ್‌ ಆರಂಭಗೊಂಡಿದ್ದು ಮೊದಲ ದಿನವೇ ಹಲವೆಡೆ ಹೌಸ್‌ಫುಲ್‌ ಆಗಿದೆ. ಹೀಗಾಗಿ ಕಳೆದೆರಡು ವಾರಗಳಲ್ಲಿ ತೆರೆಕಂಡ ಬಹುತೇಕ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರದ ಕೊರತೆ ಎದುರಾಗುವ ಭೀತಿ ಪ್ರಾರಂಭವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.