ADVERTISEMENT

ಸೆ. 20ಕ್ಕೆ ಕೋರ್ಟ್‌ಗೆ ಗೈರಾದರೆ ಕಂಗನಾ ವಿರುದ್ಧ ವಾರಂಟ್

ನಟಿಯ ವಿರುದ್ಧ ಗೀತ ರಚನೆಕಾರ ಜಾವೇದ್ ಅಖ್ತರ್ ಕ್ರಿಮಿನಲ್ ಮಾನನಷ್ಠ ಮೊಕದ್ದಮೆ

ಪಿಟಿಐ
Published 14 ಸೆಪ್ಟೆಂಬರ್ 2021, 13:48 IST
Last Updated 14 ಸೆಪ್ಟೆಂಬರ್ 2021, 13:48 IST
ಕಂಗನಾ ರನೌತ್‌, ಜಾವೇದ್ ಅಖ್ತರ್
ಕಂಗನಾ ರನೌತ್‌, ಜಾವೇದ್ ಅಖ್ತರ್   

ಮುಂಬೈ: ಬಾಲಿವುಡ್ ಗೀತ ರಚನೆಕಾರ, ಸಾಹಿತಿ ಜಾವೇದ್ ಅಖ್ತರ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನಟಿ ಕಂಗನಾ ರನೌತ್‌ ವೈಯಕ್ತಿಕ ಹಾಜರಾತಿಯಿಂದ ವಿನಾಯ್ತಿ ಕೋರಿದ್ದರು. ಅವರ ಅರ್ಜಿಯನ್ನು ಮಾನ್ಯ ಮಾಡಿರುವ ಬಾಂಬೆ ಹೈಕೋರ್ಟ್, ಸೆ. 20ಕ್ಕೆ ನಟಿ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರ ವಿರುದ್ಧ ವಾರಂಟ್ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಕರಣ ನ್ಯಾಯಾಲಯದ ವಿಚಾರಣೆಗೆ ಬರುತ್ತಿದ್ದಂತೆಯೇ ಕಂಗನಾ ಪರ ವಕೀಲರು ನಟಿಗೆ ಆರೋಗ್ಯ ಸರಿಯಿಲ್ಲದಿರುವುದರಿಂದ ಹಾಜರಾತಿಗೆ ವಿನಾಯ್ತಿ ನೀಡಬೇಕೆಂದು ಕೋರಿದರು.

ನಟಿಯ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದ ವಕೀಲರು, ನಟಿಯು ತಮ್ಮ ಮುಂದಿನ ಚಿತ್ರದ ಪ್ರಚಾರಕ್ಕಾಗಿ ಪ್ರಯಾಣದಲ್ಲಿದ್ದಾರೆ. ಅಷ್ಟೇ ಅಲ್ಲ ಅವರಲ್ಲಿ ಕೋವಿಡ್‌–19 ಲಕ್ಷಣಗಳೂ ಕಾಣಸಿಕೊಂಡಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾವೇದ್ ಅಖ್ತರ್ ಪರ ವಕೀಲರು, ಇದು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುವ ತಂತ್ರ ಎಂದು ಆರೋಪಿಸಿದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಅವರು, ಸೆ. 20ರ ವಿಚಾರಣೆಗೆ ಕಂಗನಾ ಗೈರು ಹಾಜರಾದರೆ ಅವರ ವಿರುದ್ಧ ವಾರಂಟ್ ಹೊರಡಿಸಲಾಗುವುದು ಎಂದು ಹೇಳಿದರು.

ಟಿ.ವಿ. ಕಾರ್ಯಕ್ರಮವೊಂದರಲ್ಲಿ ಕಂಗನಾ ಅವರು ತಮ್ಮ ವಿರುದ್ಧ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿದ್ದಾರೆ. ಇದು ತಮ್ಮ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಜಾವೇದ್ ಅಖ್ತರ್ ಅವರು, ಕಳೆದ ನವೆಂಬರ್‌ನಲ್ಲಿ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.