ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ‘ಜವಾನ್‘ ಚಿತ್ರ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದೀಗ ಭಾರತದಲ್ಲಿ ₹600 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ ಮೊದಲ ಹಿಂದಿ ಸಿನಿಮಾ ಎಂಬ ದಾಖಲೆಯೂ ಜವಾನ್ ಪಾಲಾಗಿದೆ.
ಸಿನಿಮಾ ಬಿಡುಗಡೆಯಾಗಿ 27ನೇ ದಿನ(ಅ.3) ಭಾರತದಲ್ಲಿ 2.50 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿದೆ ಎಂದು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮಾಹಿತಿ ನೀಡಿದೆ. ಆಟ್ಲಿ ನಿರ್ದೇಶನದ ಜವಾನ್ ಸಿನಿಮಾ ಭಾರತದಲ್ಲಿ ಈವರೆಗೆ ₹614.17 ಕೋಟಿ ಗಳಿಸಿದೆ. ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದು ವಿಶ್ವದಾದ್ಯಂತ ಈವರೆಗೆ ₹1068.58 ಕೋಟಿ ಸಂಗ್ರಹಿಸಿದೆ.
ಚಿತ್ರದಲ್ಲಿ ಶಾರುಖ್ ಜತೆಗೆ ವಿಜಯ್ ಸೇತುಪತಿ ಹಾಗೂ ನಯನತಾರಾ ನಟಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಹಾಗೂ ಸಂಜಯ್ ದತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೆ.7 ರಂದು ಬಿಡುಗಡೆಯಾದ ಜವಾನ್ ಸಿನಿಮಾ ಸೋಮವಾರ (ಅ.2) ರಂದು ₹550 ಕೋಟಿ ಗಡಿ ದಾಟಿದೆ ಎಂದು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದಿನ ಟ್ವಿಟ್ಟರ್)ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಲನಚಿತ್ರ ವಿಮರ್ಶಕರ ಪ್ರಕಾರ ಚಿತ್ರ ಬಿಡಿಗಡೆಯಾಗಿ 4ನೇ ವಾರವೂ ದಾಖಲೆಯ ಮೊತ್ತವನ್ನು ಸಂಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.