ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ದೇಶ ಕಂಡ ವರ್ಣರಂಜಿತ ರಾಜಕಾರಣಿ. ಬಣ್ಣದಲೋಕ ಮತ್ತು ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ವಿಶಿಷ್ಟ ವ್ಯಕ್ತಿತ್ವ ‘ತಲೈವಿ’ಯದ್ದು. ನಿರ್ದೇಶಕ ಎ.ಎಲ್. ವಿಜಯ್ ಹಲವು ತಿಂಗಳುಗಳಿಂದ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದುದು ಎಲ್ಲರಿಗೂ ಗೊತ್ತು.
ಈ ಚಿತ್ರದ ಹೆಸರು ‘ತಲೈವಿ’. ಬಾಲಿವುಡ್ ನಟಿ ಕಂಗನಾ ರನೋಟ್ ಅವರು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈಗ ಈ ಚಿತ್ರದ ಟೀಸರ್ ಮತ್ತು ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, ಕಂಗನಾ ಅವರನ್ನು ಕಂಡು ಸಿನಿಪ್ರಿಯರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕಂಗನಾ ಲುಕ್‌ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ‘ಒಳ್ಳೆಯ ಮೇಕಪ್ ಕಲಾವಿದರು ಸಿಗಲಿಲ್ಲವೇ’ ಎಂದು ಕೆಲವರು ಟ್ವಿಟರ್‌ನಲ್ಲಿ ಗೇಲಿಯನ್ನೂ ಮಾಡಿದ್ದಾರೆ.
ಕಂಗನಾ ಟೀಸರ್‌ನಲ್ಲಿ ನಟಿಮತ್ತು ರಾಜಕಾರಣಿಯಾಗಿ ಎರಡು ಛಾಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರಕ್ಕೆ ‘ತಲೈವಿ’ ಎಂದು ಟೈಟಲ್ ಇಡಲಾಗಿದೆ. ಹಿಂದಿಯಲ್ಲಿ ‘ಜಯಾ’ ಎಂಬ ಶೀರ್ಷಿಕೆ ಅಂತಿಮಗೊಂಡಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವುದು ವಿಷ್ಣು ಇಂದೂರಿ ಹಾಗೂ ಶೈಲೇಶ್ ಸಿಂಗ್.
ಮೂರೂ ಭಾಷೆಯಲ್ಲಿ ಏಕಕಾಲಕ್ಕೆ 2020ರ ಜೂನ್ 26ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಜಯಲಲಿತಾ ಅವರ ಜೀವನದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್ ಅವರ ಪಾತ್ರ ಮಹತ್ವದ್ದಾಗಿದೆ. ಈ ಪಾತ್ರಕ್ಕೆ ನಟ ಅರವಿಂದ್ ಸ್ವಾಮಿ ಬಣ್ಣ ಹಚ್ಚಲಿದ್ದಾರೆ.
ಜಯಲಲಿತಾ ಅವರು ಕನ್ನಡ, ತೆಲುಗು, ತಮಿಳಿನ ಹಲವು ಸ್ಟಾರ್‌ನಟರ ಜೊತೆಗೆ ನಟಿಸಿದ್ದಾರೆ. ಆ ಪೈಕಿ ತೆಲುಗಿನ ಎನ್.ಟಿ. ರಾಮರಾವ್ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ‘ತಲೈವಿ’ಯಲ್ಲಿ ಅವರ ಪಾತ್ರವೂ ಇದೆಯಂತೆ. ಈ ಪಾತ್ರವನ್ನು ಎನ್‌ಟಿಆರ್ ಅವರ ಮೊಮ್ಮಗ ಜೂನಿಯರ್ ಎನ್‌ಟಿಆರ್ ಅವರಿಂದ ಮಾಡಿಸಲು ನಿರ್ಮಾಪಕರು ಮುಂದಾಗಿದ್ದರಂತೆ. ಆದರೆ, ಇದಕ್ಕೆ ಜೂನಿಯರ್ ಎನ್‌ಟಿಆರ್ ಒಪ್ಪಿಗೆ ನೀಡಿಲ್ಲ ಎಂಬ ಸುದ್ದಿಯೂ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.