‘ಬೆಲ್‌ಬಾಟಂ’ ನಂತರ ನಿರ್ದೇಶಕ ಜಯತೀರ್ಥ ‘ಕೈವ’ನೊಂದಿಗೆ ಮತ್ತೆ ಬಂದಿದ್ದಾರೆ. ವಿಚಿತ್ರವಾಗಿರುವ ಚಿತ್ರದ ಶೀರ್ಷಿಕೆ ಓರ್ವ ವ್ಯಕ್ತಿಯ ಹೆಸರಂತೆ. ಚಿತ್ರದ ಆ್ಯಕ್ಷನ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಧನ್ವೀರ್, ಮೇಘ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
‘‘ಕೈವ’ 1983ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಇದೇ ವರ್ಷ ನಡೆದ ಗಂಗಾರಾಮ್ ಕಟ್ಟಡದ ದುರಂತಕ್ಕೂ ಚಿತ್ರದ ಕಥೆಗೂ ಸಂಬಂಧವಿದೆ’’ ಎಂದರು ನಿರ್ದೇಶಕ ಜಯತೀರ್ಥ.
ರವೀಂದ್ರಕುಮಾರ್ ನಿರ್ಮಾಣದ ಚಿತ್ರದಲ್ಲಿ ದಿನಕರ್ ತೂಗುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘು ಶಿವಮೊಗ್ಗ ಸೇರಿ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಅಜನೀಶ್ ಲೋಕನಾಥ್ ಸಂಗೀತ, ಶ್ವೇತಪ್ರಿಯ ಛಾಯಾಗ್ರಹಣ, ರಘು ನಿಡವಳ್ಳಿ ಸಂಭಾಷಣೆ ಚಿತ್ರಕ್ಕಿದೆ.
‘ಮೈಸೂರಿನಲ್ಲಿ ನಲವತ್ತೆಂಟು ದಿನಗಳ ಚಿತ್ರೀಕರಣ ನಡೆದಿದೆ. ಕೆಲವು ಭಾಗಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.