ADVERTISEMENT

ಜೀವನ ಪಾಠದ ‘ಯಾನ’

ಕೆ.ಎಂ.ಸಂತೋಷ್‌ ಕುಮಾರ್‌
Published 12 ಜುಲೈ 2019, 19:03 IST
Last Updated 12 ಜುಲೈ 2019, 19:03 IST
   

* ಸಿನಿಮಾ: ಯಾನ
* ನಿರ್ಮಾಣ: ಹರೀಶ್‌ ಶೇರಿಗಾರ್‌, ಶರ್ಮಿಳಾ ಶೇರಿಗಾರ್‌
* ನಿರ್ದೇಶನ: ವಿಜಯಲಕ್ಷ್ಮಿ ಸಿಂಗ್‌
* ತಾರಾಗಣ: ವೈಭವಿ, ವೈನಿಧಿ, ವೈಸಿರಿ, ಚಕ್ರವರ್ತಿ, ಅಭಿಷೇಕ್‌, ಸುಮುಖ,ಅನಂತ್‌ ನಾಗ್‌, ಸುಹಾಸಿನಿ, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರವಿಶಂಕರ್‌.

ಸಂಗೀತವೇ ಬದುಕೆನ್ನುವ ನಗರದ ಹುಡುಗಿ ಮಾಯಾ (ವೈಭವಿ), ಆರ್ಕಿಟೆಕ್ಟ್‌ ಓದಲು ಬರುವ ಹಳ್ಳಿಯ ಹುಡುಗಿ ಅಂಜಲಿ (ವೈಸಿರಿ) ಹಾಗೂ ಯಾರೇ ತಪ್ಪೆಸಗಿದರೂ ಅದರ ವಿರುದ್ಧ ಸಿಡಿದೇಳುವ ಬಿಂದಾಸ್‌ ಹುಡುಗಿ ನಂದಿನಿ (ವೈನಿಧಿ) ಈ ಮೂವರು ಒಂದೇ ಕಾಲೇಜಿನ ವಿದ್ಯಾರ್ಥಿನಿಯರು. ಭಿನ್ನ ನೆಲೆಯಿಂದ ಬಂದರೂ ಚಿತ್ರದ ಮಧ್ಯಂತರದಲ್ಲಿ, ಒಂದೇ ದೋಣಿಯ ಪಯಣಿಗರಂತೆ ಒಟ್ಟುಗೂಡಿ,ಬದುಕಿನ ನಿಜವಾದ ಪಯಣ ಶುರು ಮಾಡುತ್ತಾರೆ. ಈ ಮೂವರು ತಾವುಮಾಡದ ತಪ್ಪಿಗೆ ನೋವುಣ್ಣುವುದು,ಅದರಿಂದ ಹೇಗೆ ಹೊರಬರುತ್ತಾರೆ, ಏನು ಸಾಧಿಸುತ್ತಾರೆ ಎನ್ನುವುದೇ ‘ಯಾನ’ ಸಿನಿಮಾದ ಕಥಾಹಂದರ.

ಕಥೆಯಲ್ಲಿ ಗಟ್ಟಿತನ ಇಲ್ಲ. ಕ್ಷಣ ಕ್ಷಣಕ್ಕೂ ಕುತೂಹಲ, ರೋಮಾಂಚನ ಮೂಡಿಸುವುದಿಲ್ಲ. ಆದರೆ ಒಂದು ತಣ್ಣನೆಯ ಹಿತಾನುಭವ ನೀಡುತ್ತದೆ ಸಿನಿಮಾ. ಕಥೆಯ ಜೊತೆಗೆ ಪ್ರೇಕ್ಷಕರೂ ಪ್ರವಾಸ ಕೈಗೊಂಡಂತೆ ಭಾಸವಾಗುತ್ತದೆ. ಇಂದಿನ ಯುವಜನರಿಗೆ ಏನು ಹೇಳಬೇಕಾಗಿದೆ ಎನ್ನುವ ಸಂದೇಶವನ್ನು ಒಂದಿಷ್ಟು ರೊಮ್ಯಾಂಟಿಕ್ಕಾಗಿ, ತಮಾಷೆಯಾಗಿ, ಅರ್ಥಪೂರ್ಣವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಮಾಡಿದ್ದಾರೆ. ಆದರೆ ಸಂಭಾಷಣೆಯಲ್ಲಿ ಇಲ್ಲದ ಚುರುಕುತನ ಈ ಯತ್ನಕ್ಕೆ ಅಡ್ಡಿಯಾಗಿದೆ. ಆರಂಭದಲ್ಲಿ ಚಿತ್ರಕಥೆ ಲಂಗುಲಗಾಮಿಲ್ಲದೆ ಎಲ್ಲೆಲ್ಲೋ ಸಾಗಿ ಬೋರ್‌ ಹೊಡೆಸುತ್ತದೆ.

ADVERTISEMENT

ಆದರೆ ಈ ಸಿನಿಮಾದಲ್ಲಿ ಮಚ್ಚು–ಲಾಂಗು ಇಲ್ಲ, ಬಂದೂಕಿನ ಗುಂಡಿನ ಮೊರೆತವಿಲ್ಲ, ನಾಯಕ ಮತ್ತು ಖಳನಾಯಕನ ನಡುವೆ ಫೈಟ್‌ ಇಲ್ಲ. ಪ್ರೇಕ್ಷಕರಿಗೆ ಕಿಕ್ಕೇರಿಸುವಂತಹ ಐಟಂ ಸಾಂಗ್‌ಗಳೂ ಇಲ್ಲ ಎನ್ನುವುದು ಇವತ್ತಿನ ಮಟ್ಟಿಗೆ ಹೆಗ್ಗಳಿಕೆಯೇ. ಹಾಗೆ ನೋಡಿದರೆ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಅವರ ಪ್ರಯತ್ನ ಸದಭಿರುಚಿಯದ್ದೇ. ಯುವಜನರಿಗೆ, ಅದರಲ್ಲೂ ಕಾಲೇಜು ಹುಡುಗ–ಹುಡುಗಿಯರಿಗೆ ಯಾನ ಇಷ್ಟವಾಗಬಹುದು. ಕುಟುಂಬ ಸಮೇತ ಕುಳಿತು ಮುಜುಗರವಿಲ್ಲದೆ ಸಿನಿಮಾ ನೋಡಲು ಅಡ್ಡಿ ಇಲ್ಲ.ಮನರಂಜನೆ, ಗ್ಲ್ಯಾಮರ್‌, ಭಾವತೀವ್ರತೆಯ ಸನ್ನಿವೇಶಗಳಿಗೆ ಕೊರತೆ ಇಲ್ಲ.

ವಿಜಯಲಕ್ಷ್ಮಿ ಸಿಂಗ್‌ ಮತ್ತು ಜೈಗದೀಶ್‌ ದಂಪತಿಯ ಪುತ್ರಿಯರಾದ ವೈಭವಿ, ವೈನಿಧಿ, ವೈಸಿರಿಗೆಇದುಮೊದಲ ಚಿತ್ರವೆನಿಸುವುದಿಲ್ಲ. ಅಷ್ಟರಮಟ್ಟಿಗೆ ನಟನೆ, ನೃತ್ಯದಲ್ಲಿ ಪಳಗಿದವರಂತೆ ಕಾಣಿಸಿದ್ದಾರೆ. ನಾಯಕಿಯರ ಪ್ರಧಾನ ಚಿತ್ರ ಆಗಿರುವುದರಿಂದ ನಾಯಕ ನಟರಾದ ಚಕ್ರವರ್ತಿ, ಅಭಿಷೇಕ್‌ ಮತ್ತು ಸುಮುಖ ಅವರಿಗೆ ನಟನೆಗೆ ಕಡಿಮೆ ಅವಕಾಶ ಸಿಕ್ಕಿದೆ. ಆದರೂ ಸಿಕ್ಕ ಅವಕಾಶದಲ್ಲೇ ಭರವಸೆ ಮೂಡಿಸುತ್ತಾರೆ.

ಜವಾಬ್ದಾರಿಯುತ ತಂದೆ–ತಾಯಿಯ ಪಾತ್ರದಲ್ಲಿ ಸುಹಾಸಿನಿ ಮತ್ತು ಅನಂತ್‌ ನಾಗ್‌ ನಟನೆ ಮನಸಿನಲ್ಲಿ ಉಳಿಯುತ್ತದೆ. ಚಿಕ್ಕಣ್ಣ, ಸಾಧುಕೋಕಿಲ, ರವಿಶಂಕರ್‌, ರಂಗಾಯಣ ರಘು, ಓಂಪ್ರಕಾಶ್‌ ರಾವ್‌ ಅವರ ಪಾತ್ರಗಳು, ಕೃತಿಯೊಂದರ ಒಟ್ಟಂದ ಹೆಚ್ಚಿಸಲು ಪುಟಗಳ ಮಧ್ಯೆ ಜೋಡಿಸಿದ ವರ್ಣಚಿತ್ರಗಳಂತೆ ಇವೆ. ಜೋಷೌ ಶ್ರೀಧರ್‌ ಸಂಗೀತ ನಿರ್ದೇಶನದ ಹಾಡುಗಳು ಕೇಳುವಂತಿವೆ.ಕರಂ ಚಾವ್ಲಾ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗೆ ಸಹ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.