ADVERTISEMENT

ಜೋಕ್ವಿನ್‌ ಮತ್ತು ಜೋಕರ್‌

ಬಿ.ಎಂ.ಹನೀಫ್
Published 15 ಫೆಬ್ರುವರಿ 2020, 19:30 IST
Last Updated 15 ಫೆಬ್ರುವರಿ 2020, 19:30 IST
   
""

ನಿ ರೀಕ್ಷೆಯಂತೆ ಜೋಕ್ವಿನ್‌ ರಫಾಯೆಲ್‌ ಫೀನಿಕ್ಸ್ ‘ಆಸ್ಕರ್‌’ ಪ್ರಶಸ್ತಿ ಗೆದ್ದಿದ್ದಾನೆ!

‘ಜೋಕರ್‌’ ಚಿತ್ರದ ಆತನ ಮನೋಜ್ಞ ನಟನೆ ಪ್ರೇಕ್ಷಕರನ್ನು ಮಾತ್ರವಲ್ಲ, ಜ್ಯೂರಿಗಳನ್ನೂ ದಿಗ್ಭ್ರಮೆಗೆ ನೂಕಿದೆ. 2020ರ ‘ಅತ್ಯುತ್ತಮ ನಟ’ ಅಕಾಡೆಮಿ ಪ್ರಶಸ್ತಿ ಮುಡಿಗೇರಿದೆ. ಜಗತ್ತನ್ನು ನಗಿಸುತ್ತಾ ಮನಸೊಳಗೇ ಅಳುವ ಜೋಕರ್‌. ನಗುತ್ತಾ, ನಗಿಸುತ್ತಾ ಆತನ ಜೀವನವೇ ‘ಕಾಮಿಡಿ’ಯಾಗುತ್ತದೆ. ಮುಖವಾಡದೊಳಗಿನ ಭಾವನೆಗಳನ್ನು ಹತ್ತಿಕ್ಕಲಾಗದೆ ಆತ ಒಂದೇ ಸಮನೆ ಎಲ್ಲೆಂದರಲ್ಲಿ ನಗತೊಡಗುತ್ತಾನೆ. ಆಧುನಿಕ ಸಮಾಜ ತನ್ನ ಸುತ್ತಲಿರುವ ತಬ್ಬಲಿ ಜಗತ್ತನ್ನು ಕಣ್ಣೆತ್ತಿಯೂ ನೋಡದೆ ಹೇಗೆ ಹಾಸ್ಯದ ಅಮಲಲ್ಲಿ ತೇಲುತ್ತಿದೆ ಎನ್ನುವುದು ಆತನನ್ನು ತೀವ್ರವಾಗಿ ಕಾಡತೊಡಗಿ ಕ್ರೌರ್ಯಕ್ಕೆ ಮೊರೆ ಹೋಗುತ್ತಾನೆ.

ಟಿ.ವಿ. ಲೈವ್‌ ಷೋನಲ್ಲಿ ತನ್ನ ಸಂದರ್ಶನ ಮಾಡುವ ಆ್ಯಂಕರ್‌ನನ್ನೇ ಗುಂಡಿಕ್ಕಿ ಕೊಂದು ಬಿದ್ದು ಬಿದ್ದು ನಗುತ್ತಾನೆ. ಹಿಂಸೆಯ ತೆಕ್ಕೆಗೆ ಸಿಕ್ಕಿದ ಇಡೀ ನಗರ ಭುಗಿಲೆದ್ದ ಅಗ್ನಿಜ್ವಾಲೆಯಾಗುತ್ತದೆ. ಈ ಸಿನಿಮಾ ನೋಡಿದ ಬಳಿಕ, ಈ ಹಿಂದೆ ನೋಡಿದ ಬಹುತೇಕ ಜೋಕರ್‌ ಸಿನಿಮಾಗಳು ಕಣ್ಣಿಂದ ಮರೆಯಾಗಿವೆ. ಜೋಕರ್‌ ಎಂದೊಡನೆ ಕಣ್ಣಿಗೆ ಕಟ್ಟುವುದೀಗ ಜೋಕ್ವಿನ್‌ ಫೀನಿಕ್ಸ್‌ನ ವಿಷಾದವೇ ವಿನೋದವಾಗಿ ಗಹಗಹಿಸುವ ಆ ನಗು.

ADVERTISEMENT
ಜೋಕ್ವಿನ್‌ ರಫಾಯೆಲ್‌ ಫೀನಿಕ್ಸ್

‘ನಟನೆಯೆಂಬ ಅಭಿವ್ಯಕ್ತಿಯ ವಿಧಾನ ನನಗೆ ಅತ್ಯಂತ ವಿಶೇಷ ಬದುಕೊಂದನ್ನು ನೀಡಿದೆ. ಈ ಅಭಿವ್ಯಕ್ತಿ ಇಲ್ಲದೆ ಇದ್ದಿದ್ದರೆ ನಾನೆಲ್ಲಿರುತ್ತಿದ್ದೆನೋ ಗೊತ್ತಿಲ್ಲ. ಧ್ವನಿಯಿಲ್ಲದ ಜನರಿಗೆ ಧ್ವನಿಯಾಗಲು ನಟನೆಯು ನನಗೆ ಅವಕಾಶ ಒದಗಿಸಿದೆ’ ಎಂದಿದ್ದಾನೆ ಆಸ್ಕರ್‌ ಪ್ರಶಸ್ತಿ ಸ್ವೀಕರಿಸಿದ ಜೋಕ್ವಿನ್‌. ಆಸ್ಕರ್‌ ವೇದಿಕೆಯಲ್ಲಿ ಆತನಾಡಿದ ಮಾತುಗಳು ಹಾಲಿವುಡ್‌ನ ಮಹಾತಾರೆಯರ ಎದೆಗೆ ನಾಟುವಂತಿದ್ದವು. ‘ನಾವು ಲಿಂಗಭೇದ, ಜನಾಂಗವಾದ, ವಿಲಕ್ಷಣ ಹಕ್ಕು, ಪ್ರಾಣಿಹಕ್ಕುಗಳಿಗಾಗಿ ಮಾತನಾಡುತ್ತೇವೆ. ಎಲ್ಲವೂ ಅನ್ಯಾಯದ ವಿರುದ್ಧ ಪ್ರತಿಭಟನೆಯೇ. ಆದರೆ, ನಮ್ಮ ಮಹಾತಾರೆಯರು ಸ್ವಂತ ಜೆಟ್‌ ಬಳಸಿ ಪ್ರಯಾಣಿಸುವುದನ್ನು ನಿಲ್ಲಿಸಿದರೆ ಹವಾಮಾನ ಬದಲಾವಣೆಗೆ ದೊಡ್ಡ ಕೊಡುಗೆ ಸಲ್ಲಿಸಿದಂತಾಗುತ್ತದೆ’ ಎನ್ನುವುದು ಆತನ ನೇರಮಾತು.

ಜೋಕ್ವಿನ್‌ ಈ ಹಿಂದೆ ಮೂರು ಸಲ ಆಸ್ಕರ್‌ ಪ್ರಶಸ್ತಿಯನ್ನು ತಪ್ಪಿಸಿಕೊಂಡಿದ್ದಾನೆ. 2000ರಲ್ಲಿ ‘ಗ್ಲಾಡಿಯೇಟರ್‌’ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ; 2005ರಲ್ಲಿ ‘ವಾಕ್‌ ದಿ ಲೈನ್‌’ ಚಿತ್ರದಲ್ಲಿ ಅತ್ಯುತ್ತಮ ನಟನೆಗೆ; 2012ರಲ್ಲಿ ‘ದಿ ಮಾಸ್ಟರ್‌’ ಚಿತ್ರದಲ್ಲಿ ಮತ್ತೊಮ್ಮೆ ಅತ್ಯುತ್ತಮ ನಟ ಪ್ರಶಸ್ತಿಗೆ ಇವನ ಹೆಸರು ಅಂತಿಮ ಸುತ್ತಿಗೆ ಬಂದಿತ್ತು. ‘ವಾಕ್‌ ದಿ ಲೈನ್‌’ ಸಂಗೀತಗಾರ ಜಾನಿ ಕ್ಯಾಶ್‌ನ ಜೀವನ ಆಧರಿಸಿದ್ದರೆ, ‘ದಿ ಮಾಸ್ಟರ್‌’ ಕುಡುಕನಾದ ಮಾಜಿ ಸೈನಿಕನೊಬ್ಬನ ಹಳಹಳಿಕೆಯ ಕಥೆ. ಎರಡೂ ಚಿತ್ರಗಳಲ್ಲಿ ಜೋಕ್ವಿನ್‌ ಜೀವತುಂಬಿ ನಟಿಸಿದ್ದ. ನಾಮಕರಣಗೊಂಡೂ ಪ್ರಶಸ್ತಿ ಸಿಗಲಿಲ್ಲ. ಆಗ ನೀಡಿದ ಸಂದರ್ಶನವೊಂದರಲ್ಲಿ ‘ಆಸ್ಕರ್‌ ಪ್ರಶಸ್ತಿಯೇ ಬುಲ್‌ಷಿಟ್‌’ ಎಂದು ಕಿಡಿಕಾರಿದ್ದ. ಆದರೆ, ಕೆಲವೇ ದಿನಗಳಲ್ಲಿ ಬಹಿರಂಗ ಕ್ಷಮೆಯಾಚಿಸಿ, ‘ಆಸ್ಕರ್‌ ಪ್ರಶಸ್ತಿ ನಿಜಕ್ಕೂ ನಿರ್ಮಾಪಕರಿಗೆ ಅತ್ಯುತ್ತಮ ವೇದಿಕೆ’ ಎಂದು ಹೊಗಳಿದ.

‘ಜೋಕರ್‌’ ಚಿತ್ರದಲ್ಲಿ ಕಣ್ಣು, ಮುಖ ಮಾತ್ರವಲ್ಲ ಇಡೀ ದೇಹವನ್ನೇ ಪಾತ್ರಕ್ಕೆ ಅದ್ಭುತವಾಗಿ ದುಡಿಸಿಕೊಂಡಿದ್ದಾನೆ ಜೋಕ್ವಿನ್. ವಿಕ್ಷಿಪ್ತ ಜೋಕರ್‌ನ ಆ ಪಾತ್ರವೂ ಆತನ ವ್ಯಕ್ತಿತ್ವಕ್ಕೆ ಒಪ್ಪುವಂತಿತ್ತು. ನಿಜಜೀವನದಲ್ಲಿ ನಟನೆ ಎನ್ನುವುದು ಜೋಕ್ವಿನ್‌ಗೆ ಆತಂಕದ ವಿಷಯವೇ. ‘ಮರುದಿನ ಶೂಟಿಂಗ್‌ ಇದೆಯೆಂದರೆ ಹಿಂದಿನ ದಿನವೇ ನನ್ನ ಆತಂಕ ಶುರುವಾಗುತ್ತಿತ್ತು. ಕೆಲವೊಮ್ಮೆ ಹುಚ್ಚನಂತಾಡುತ್ತಿದ್ದೆ. ಸೆಟ್‌ನಲ್ಲಿ ಆತಂಕ ಹೆಚ್ಚಾಗಿ ಎದೆ, ಕುತ್ತಿಗೆಯೆಲ್ಲ ಬೆವರಿ ತೊಪ್ಪೆಯಾಗುತ್ತಿದ್ದೆ. ಕಾಸ್ಟೂಮ್‌ ಒದ್ದೆಯಾಗಿ ಹೊರಗೆ ಕಾಣಿಸಬಾರದೆಂದು ನಿರ್ದೇಶಕರು ಶರ್ಟಿನ ಒಳಗೆ ಪ್ಯಾಡ್‌ ಕಟ್ಟುತ್ತಿದ್ದರು..!’ ಎಂದು ಸಂದರ್ಶನವೊಂದರಲ್ಲಿ ಆತ ನೆನ‍ಪಿಸಿಕೊಂಡಿದ್ದಾನೆ.

ವೈಯಕ್ತಿಕ ಜೀವನದಲ್ಲಿ ಈತ ವೆಗಾನ್‌, ಅರ್ಥಾತ್‌ ಪ್ರಾಣಿಜನ್ಯ ಆಹಾರವನ್ನು ಮುಟ್ಟುವುದಿಲ್ಲ. ಹಾಲು, ಮಾಂಸ ಎಲ್ಲವೂ ವರ್ಜ್ಯ. ಪ್ರಾಣಿಯ ಚರ್ಮದಿಂದ ತಯಾರಿಸಿದ ಬೆಲ್ಟ್‌, ಜರ್ಕಿನ್‌ಗಳನ್ನು ಧರಿಸುವುದಿಲ್ಲ. ಸಿನಿಮಾದಲ್ಲಿ ಲೆದರ್‌ ಕಾಸ್ಟೂಮ್‌ ಬದಲಿಗೆ ಸಿಂಥೆಟಿಕ್‌ನಿಂದ ತಯಾರಿಸಿದ್ದನ್ನು ಕೊಡಿ ಎಂದು ನಿರ್ಮಾಪಕರಿಗೆ ಮೊದಲೇ ಮನವಿ ಮಾಡುತ್ತಾನೆ. ಹವಾಮಾನ ಬದಲಾವಣೆಯ ವಿಷಯಕ್ಕೆ ಸಂಬಂಧಿಸಿ ವಾಷಿಂಗ್ಟನ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಪೊಲೀಸರ ಬಂಧನಕ್ಕೂ ಒಳಗಾಗಿದ್ದ.

2008ರಲ್ಲಿ ಟಿ.ವಿ. ಷೋ ಒಂದರಲ್ಲಿ ಹಠಾತ್ತಾಗಿ ‘ಚಿತ್ರರಂಗದಿಂದ ನಿವೃತ್ತಿ ಆಗುತ್ತೇನೆ. ಟೂ ಲವರ್ಸ್‌ ನನ್ನ ಕೊನೇ ಸಿನಿಮಾ. ಇನ್ನು ಮುಂದೆ ರಾಪ್ಪರ್‌ ಆಗುತ್ತೇನೆ’ ಎಂದು ಘೋಷಿಸಿ ಅಚ್ಚರಿ ಹುಟ್ಟಿಸಿದ್ದ ಜೋಕ್ವಿನ್, ಎರಡು ವರ್ಷದ ಬಳಿಕ ಮತ್ತೆ ಟಿ.ವಿ.ಯಲ್ಲಿ ಬಂದು, ‘ಅದೊಂದು ಮೋಕ್ಯುಮೆಂಟರಿ ಅಷ್ಟೆ. ನಾನು ನಟನೆಗೆ ಸಿದ್ಧ’ ಎಂದ! ಪರಿಸರ ಸಂರಕ್ಷಣೆಗೆ ಜೋಕ್ವಿನ್‌ ಸದಾ ಬದ್ಧ. ಮೊದಲ ಚಿತ್ರ ‘ಸ್ಪೇಸ್‌ ಕ್ಯಾಂಪ್‌’ಗೆ ತನ್ನ ಹೆಸರನ್ನು ಲೀಫ್‌ ಫೀನಿಕ್ಸ್‌ ಎಂದು ಬದಲಿಸಿಕೊಂಡಿದ್ದ. ಈತನ ಸೋದರನ ಹೆಸರು ಸಮ್ಮರ್‌, ಸೋದರಿಯ ಹೆಸರು ರಿವರ್‌!

ಡಾಕ್ಯುಮೆಂಟರಿ ಮತ್ತು ಸಿನಿಮಾಗಳಲ್ಲಿ ದುಡಿದದ್ದನ್ನು ದತ್ತಿ ಸೇವೆಗೆ ಸುರಿಯುತ್ತಿದ್ದಾನೆ. ದಕ್ಷಿಣ ಆಫ್ರಿಕಾದ ಸೊವೆಟೊ ಶಾಲಾ ಮಕ್ಕಳಿಗೆ ದಿನವೂ ಊಟ ನೀಡುವ ‘ದಿ ಲಂಚ್‌ಬಾಕ್ಸ್‌ ಫಂಡ್‌’ನ ನಿರ್ದೇಶಕ. ಪ್ರಾಣಿಹಿಂಸೆ ವಿರುದ್ಧದ ‘ಪೆಟಾ’ದ ರಾಯಭಾರಿ. ಯೆಹೂದೀಯನಾಗಿ ಹುಟ್ಟಿದರೂ ಹೆಚ್ಚು ಧಾರ್ಮಿಕನಲ್ಲ. ಮ್ಯೂಸಿಕ್‌ ವಿಡಿಯೊ ನಿರ್ದೇಶಕನಾಗಿಯೂ ಪ್ರಸಿದ್ಧ. ‘ವಾಕ್‌ ದಿ ಲೈನ್‌’ ಸಿನಿಮಾದ ಸೌಂಡ್‌ಟ್ರ್ಯಾಕ್‌ ಕಂಪೋಸಿಂಗ್‌ಗೆ ಗ್ರಾಮ್ಮಿ ಪ್ರಶಸ್ತಿಯನ್ನೂ ಗೆದ್ದಿದ್ದಾನೆ. 2006ರಲ್ಲಿ ಹಾಲಿವುಡ್‌ನಲ್ಲಿ ಈತ ಡ್ರೈವ್‌ ಮಾಡುತ್ತಿದ್ದ ಕಾರು ಪಲ್ಟಿ ಹೊಡೆದು ಗ್ಯಾಸೊಲಿನ್‌ ಸೋರುತ್ತಿದ್ದ ಕಾರಿನೊಳಗೆ ಸಿಗರೇಟು ಹಚ್ಚಲು ಹೋಗಿ ಸತ್ತೇ ಬಿಡುತ್ತಿದ್ದ. ಸಕಾಲದಲ್ಲಿ ಅಲ್ಲಿದ್ದ ಜರ್ಮನ್‌ ನಿರ್ದೇಶಕ ಈತನ ಜೀವ ಉಳಿಸಿದ್ದ.

‘ಜೋಕರ್‌’ ಚಿತ್ರಕ್ಕಾಗಿ ನಿರ್ದೇಶಕ ಟಾಡ್‌ ಫಿಲಿಪ್ಸ್‌ 1981ರ ನ್ಯೂಯಾರ್ಕ್‌ ನಗರವನ್ನು ಮರುಸೃಷ್ಟಿ ಮಾಡಿದ್ದಾನೆ. ಎಲ್ಲೆಂದರಲ್ಲಿ ಕಸ, ಗೋಡೆಬರಹದ ಹಳೇ ಕಟ್ಟಡಗಳು, ರೈಲುನಿಲ್ದಾಣದ ಗಂವೆನ್ನುವ ಕತ್ತಲೆ, ಭ್ರಷ್ಟಾಚಾರ ಮತ್ತು ಮುಷ್ಕರದಿಂದ ಬಳಲಿದ ಅಂದಿನ ನ್ಯೂಯಾರ್ಕ್‌ ಅನ್ನು ಚಿತ್ರಕಥೆಗೆ ಮುಖಾಮುಖಿಯಾಗಿಸಿದ್ದಾನೆ. ಇಡೀ ನಗರವನ್ನು ಆವರಿಸಿದ ಹತಾಶೆಯನ್ನು ತನ್ನ ಹಾವಭಾವ ಮತ್ತು ಸಂಭಾಷಣೆಗಳಲ್ಲಿ ಪ್ರೇಕ್ಷಕರ ಹೃದಯಕ್ಕೆ ತಟ್ಟುವಂತೆ ಮುಟ್ಟಿಸಿದ್ದಾನೆ ಜೋಕ್ವಿನ್‌. ನಗಬೇಕೋ, ಅಳಬೇಕೋ ಎನ್ನುವುದು ಗೊತ್ತಾಗದೆ ಭಾರವಾದ ಹೃದಯದಿಂದ ಪ್ರೇಕ್ಷಕರು ಥಿಯೇಟರನ್ನು ಬೀಳ್ಕೊಡುತ್ತಾರೆ. ಒಟ್ಟು 11 ವಿಭಾಗಗಳಲ್ಲಿ ಆಸ್ಕರ್‌ಗೆ ನಾಮಿನೇಟ್‌ ಆಗಿತ್ತು ಈ ಸಿನಿಮಾ. ಅತ್ಯುತ್ತಮ ನಟ ಜೊತೆಗೆ ಅತ್ಯುತ್ತಮ ಒರಿಜಿನಲ್‌ ಸಂಗೀತಕ್ಕೆ ಹಿಲ್ಡರ್‌ ಗೋನ್‌ಡೊಟಿರ್‌ಗೂ ಆಸ್ಕರ್‌ ಲಭಿಸಿದೆ. ಸಿನಿಮಾದ ಒಟ್ಟು ಪರಿಣಾಮವನ್ನು ನೋಡಿದರೆ ಇದು ಅತ್ಯುತ್ತಮ ಸಿನಿಮಾ ಮತ್ತು ನಿರ್ದೇಶನದ ಪ್ರಶಸ್ತಿಯನ್ನೂ ಎತ್ತಿಕೊಳ್ಳಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.