ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದ ‘ಜೋಗಿ’ ಸಿನಿಮಾ ತೆರೆ ಕಂಡು ಇಂದಿಗೆ(ಆಗಸ್ಟ್ 19) 14 ವರ್ಷ. ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್ ಅವರ ನಟನೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.
ಉತ್ತಮ ಸಂಗೀತದ ಜೊತೆಗೆ ತಾಯಿಯ ಸೆಂಟಿಮೆಂಟ್‌ಗೆ ನೋಡುಗರು ಫಿದಾ ಆಗಿದ್ದರು. ಪ್ರೇಮ್ ಮತ್ತು ಶಿವರಾಜ್‌ಕುಮಾರ್ ಅವರ ಕಾಂಬಿನೇಷನ್ ಚಂದನವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದು ಸುಳ್ಳಲ್ಲ. 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತ ದಿನ ಪೂರೈಸಿದ ಹೆಗ್ಗಳಿಕೆ ಈ ಚಿತ್ರದ್ದು. ಗಲ್ಲಾಪೆಟ್ಟಿಗೆಯಲ್ಲೂ ಜೋರಾಗಿಯೇ ಸದ್ದು ಮಾಡಿತ್ತು.
ಈ ಚಿತ್ರದ ಮೊದಲ ಶಾಟ್ ಶುರುವಾಗುವುದು ವರನಟ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರು ಜೋಳಿಗೆ ತುಂಬುವ ದೃಶ್ಯದ ಮೂಲಕ. ಜೋಗಿಯ ಅಮ್ಮನಾಗಿ ಅರುಂಧತಿ ನಾಗ್ ನಟಿಸಿದ್ದರು. ಮಗನ ಪಾತ್ರಕ್ಕೆ ಶಿವರಾಜ್‌ಕುಮಾರ್ ಜೀವ ತುಂಬಿದ್ದರು.
ವಿಶೇಷ ಪ್ರದರ್ಶನದಲ್ಲಿ ಚಿತ್ರರಂಗದ ಹಲವು ಕಲಾವಿದರು ‘ಜೋಗಿ’ ಸಿನಿಮಾ ವೀಕ್ಷಿಸಿದ್ದರು. ಶಿವರಾಜ್‌ಕುಮಾರ್ ಅವರ ನಟನೆ ಕಂಡು ಅಂದು ಅಣ್ಣಾವ್ರು ಮೌನಕ್ಕೆ ಶರಣಾಗಿದ್ದರಂತೆ. ಶಿವರಾಜ್‌ಕುಮಾರ್ ಅವರು ಕಣ್ಣೀರು ಹಾಕಿದ್ದನ್ನು ಮರೆಯಲು ಸಾಧ್ಯವಿಲ್ಲ.
ನಿರ್ದೇಶಕ ಪ್ರೇಮ್ ಅಂದಿನ ಕ್ಷಣಗಳನ್ನು ಟ್ವಿಟರ್‌ನಲ್ಲಿ ಮೆಲುಕು ಹಾಕಿದ್ದಾರೆ. ‘ಇಡೀ ಭಾರತೀಯ ಚಿತ್ರರಂಗವೇ ಒಂದು ಬಾರಿ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ #Jogiಗೆ ಇಂದು 14 ವರ್ಷ ತುಂಬಿದೆ. ನನ್ನ ಪ್ರೀತಿಯ ಅಣ್ಣ ಹ್ಯಾಟ್ರಿಕ್ ಹೀರೊ ಶಿವಣ್ಣ, ಅಶ್ವಿನಿ ಕಂಪನಿ, ಗುರುಕಿರಣ್ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಸದಾ ಕನ್ನಡ ಸಿನಿಮಾಗಳನ್ನು ಬೆಳೆಸಿ, ಪ್ರೋತ್ಸಾಹಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.