ADVERTISEMENT

ಕಾಫಿರ್: ಒಂದು ಸುಂದರ ದೃಶ್ಯಕಾವ್ಯ

ವಿಜಯ್ ಜೋಷಿ
Published 19 ಸೆಪ್ಟೆಂಬರ್ 2019, 19:30 IST
Last Updated 19 ಸೆಪ್ಟೆಂಬರ್ 2019, 19:30 IST
‘ಕಾಫಿರ್’ ಪೋಸ್ಟರ್ ಎದುರು ದಿಯಾ ಮಿರ್ಜಾ
‘ಕಾಫಿರ್’ ಪೋಸ್ಟರ್ ಎದುರು ದಿಯಾ ಮಿರ್ಜಾ   

ಬಾಲಿವುಡ್‌ ನಟಿ ದಿಯಾ ಮಿರ್ಜಾ ಅವರ ನಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ನಿಕಷಕ್ಕೆ ಒಳಪಡಿಸಿರುವ ವೆಬ್ ಸರಣಿ ‘ಕಾಫಿರ್’. ಅಷ್ಟೇ ಅಲ್ಲ, ಕಾಶ್ಮೀರ, ಅಲ್ಲಿನ ಜನರ ಬದುಕಿನ ಕೆಲವು ಮುಖಗಳು, ಹುತಾತ್ಮ ಯೋಧರ ಸದಸ್ಯರು ಅನುಭವಿಸುವ ಸಂಕಟಗಳು, ವಿಚಾರಣೆಯೇ ಇಲ್ಲದೆ ಜೈಲಿನಲ್ಲಿ ದಿನ ಕಳೆಯುವ ಕೈದಿಗಳ ಮನಸ್ಸಿನ ತೊಳಲಾಟ... ಇವೆಲ್ಲ ಸೋನಮ್ ನಾಯರ್ ನಿರ್ದೇಶನದ ಈ ಸರಣಿಯ ಒಡಲಿನಲ್ಲಿ ಸಿಗುವ ಬಿಂಬಗಳು.

ಕೈನಾಜ್ ಅಖ್ತರ್ (ದಿಯಾ), ವೇದಾಂತ್ ರಾಥೋಡ್ (ಮೋಹಿತ್ ರೈನಾ) ಮತ್ತು ದಿಶಿತಾ ಜೈನ್ (ಸೆಹೆರ್ ಅಖ್ತರ್) ‘ಕಾಫಿರ್‌’ ಕಥೆಯ ಕೇಂದ್ರಗಳು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹುಟ್ಟಿ, ಮದುವೆಯಾಗಿ ವರ್ಷಗಳು ಕಳೆದರೂ ಮಕ್ಕಳಾಗದ ಕಾರಣಕ್ಕೆ ಗಂಡನಿಂದ ತಿರಸ್ಕೃತಳಾಗುವ ಕೈನಾಜ್, ಪ್ರಾಣ ಕಳೆದುಕೊಳ್ಳಲು ನದಿಗೆ ಜಿಗಿಯುತ್ತಾಳೆ. ಆದರೆ ಆಕೆ ಸಾಯುವುದಿಲ್ಲ. ಬದಲಿಗೆ, ನದಿ ಆಕೆಯನ್ನು ಭಾರತದ ಗಡಿಯೊಳಕ್ಕೆ ತಂದು ಬಿಡುತ್ತದೆ. ಅಧಿಕೃತ ದಾಖಲೆ ಇಲ್ಲದೆ ಭಾರತ ಪ್ರವೇಶಿಸಿದ ಕಾರಣ ಆಕೆಗೆ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ.

ವೇದಾಂತ್ ಒಬ್ಬ ಪತ್ರಕರ್ತ, ವಕೀಲ ಕೂಡ. ಶಿಕ್ಷೆಯ ಅವಧಿ ಮುಗಿದ ನಂತರವೂ ಜೈಲಿನಲ್ಲೇ ಇರುವ ಕೈನಾಜ್‌ ಕುರಿತು ವೇದಾಂತ್‌ಗೆ ಗೊತ್ತಾಗುತ್ತದೆ. ಆಕೆ ಜೈಲಿನಲ್ಲೇ ಒಂದು ಮಗುವಿಗೆ (ಸೆಹೆರ್‌) ಜನ್ಮ ನೀಡಿರುತ್ತಾಳೆ. ಕೈನಾಜ್‌ ಮತ್ತು ಸೆಹೆರ್‌ ಜೈಲಿನಿಂದ ಮುಕ್ತಿ ಪಡೆಯುವುದು, ಅವರು ತಮ್ಮ ಊರಿಗೆ ವಾಪಸ್‌ ಆಗುವುದು ಇದರ ಕಥೆ.

ADVERTISEMENT

ಎಂಟು ಕಂತುಗಳ ಇಡೀ ಸರಣಿಯನ್ನು ಸಹಜತೆಗೆ ಹತ್ತಿರವಾಗಿ ಸೆರೆ ಹಿಡಿದಿರುವುದು ಒಂದು ವಿಶೇಷ. ಈ ಸರಣಿಯು ಕೆಲವು ಸೂಕ್ಷ್ಮ ವಿಷಯಗಳ ಕುರಿತು ಆಳವಾದ ಅವಲೋಕನಕ್ಕೆ ಮನಸ್ಸನ್ನು ಹದಗೊಳಿಸುವ ಕೆಲಸ ಮಾಡುತ್ತದೆ. ಗಡಿಯಾಚೆಗೆ ಇರುವವರೆಲ್ಲರೂ ಭಯೋತ್ಪಾದಕರೇ, ಅನ್ಯಧರ್ಮದ ಎಲ್ಲರೂ ಭಯೋತ್ಪಾದನೆಗೆ ಬೆಂಬಲ ಕೊಡುತ್ತಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನವನ್ನು ಇದರಲ್ಲಿನ ಪಾತ್ರಗಳು ನಡೆಸಿವೆ. ‘ಕಾಫಿರ್‌’ ಎತ್ತಿರುವ ಕೆಲವು ಪ್ರಶ್ನೆಗಳು ಪ್ರಸಕ್ತ ಸಾಮಾಜಿಕ ಸಂದರ್ಭದಲ್ಲಿ ಕೆಲವರಿಗೆ ರುಚಿಸದೆಯೂ ಇರಬಹುದು – ಹಾಗಾಗಿಯೇ, ಈ ಸರಣಿಯ ಹೂರಣದ ಬಗ್ಗೆ ಕೆಲವು ಗುಂಪುಗಳು ತಕರಾರು ಎತ್ತಿರುವ ವರದಿಗಳು ಬಂದಿವೆ.

ಕೈನಾಜ್ ಮತ್ತು ವೇದಾಂತ್ ನಡುವೆ ಒಡನಾಟ ಹೆಚ್ಚಿದಂತೆಲ್ಲ, ಇಬ್ಬರ ನಡುವೆ ಪ್ರೇಮಕ್ಕೆ ಸನಿಹವಾದ ಸಂಬಂಧವೊಂದು ಶುರುವಾಗುತ್ತದೆ. ಆದರೆ, ಆ ಸಂಬಂಧವನ್ನು ಮಾಮೂಲಿ ಪ್ರೇಮದ ಸಂಬಂಧ ಆಗಿಸದೆಯೇ, ‘ಜನ ಒಂದಾಗಲು ಹೋರಾಟ ನಡೆಸುತ್ತಾರೆ, ಆದರೆ ನಮ್ಮದು ಬೇರೆ ಹೋಗಲು ನಡೆದ ಹೋರಾಟ’ ಎಂದು ಕೈನಾಜ್‌ಳ ಮೂಲಕ ಹೇಳಿಸುತ್ತಾರೆ ನಿರ್ದೇಶಕಿ ಸೋನಮ್. ಪಾತ್ರಗಳನ್ನು ಈ ರೀತಿ ಬೆಳೆಸಿರುವುದು ಈ ಸರಣಿಯಲ್ಲಿ ಉಲ್ಲೇಖಿಸಬೇಕಾದ ಅಂಶ. ಈ ಸರಣಿ ಈಗ ಕನ್ನಡದಲ್ಲಿ ಡಬ್ ಆಗಿ ಪ್ರಸಾರ ಆಗಿದೆ.

ಈ ಕಥೆಯು ಶೈನಾಜ್ ಎಂಬುವವಳ ಕಥೆಯನ್ನು ಆಧರಿಸಿದೆ ಎಂಬ ವರದಿಗಳು ಇವೆ. ಸರಣಿಯ ಎಂಟೂ ಕಂತುಗಳಲ್ಲಿ ಸ್ಥಾಯಿಯಾಗಿ ಕಾಣಿಸುವುದು ಹೆಣ್ಣಿನ ದನಿ. ಆ ದನಿಯೇ ಇಡೀ ಸರಣಿಯ ಶಕ್ತಿ ಕೂಡ ಹೌದು. ಒಂದು ವೇಳೆ, ನಿರ್ದೇಶಕರು ಈ ಸರಣಿಯನ್ನು ಕೈನಾಜ್ ಪಾತ್ರದ ವ್ಯಾಪ್ತಿಯನ್ನು ಕುಗ್ಗಿಸಲು ಅಥವಾ ವೇದಾಂತ್ ಪಾತ್ರದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಲು ಯತ್ನಿಸಿದ್ದರೆ, ಸರಣಿಗೆ ಈಗ ದಕ್ಕಿರುವ ಸೌಂದರ್ಯ ಬಹುಶಃ ದಕ್ಕುತ್ತಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.