ಚಿತ್ರ: ಕಬೀರ್ ಸಿಂಗ್ (ಹಿಂದಿ)
ನಿರ್ಮಾಣ: ಮುರಾದ್ ಖೇತಾನಿ, ಅಶ್ವಿನ್, ಭೂಷಣ್ ಕುಮಾರ್, ಕೃಷಣ್ ಕುಮಾರ್
ನಿರ್ದೇಶನ: ಸಂದೀಪ್ ರೆಡ್ಡಿ ವಂಗಾ
ತಾರಾಗಣ: ಶಾಹಿದ್ ಕಪೂರ್, ಕೈರಾ ಅಡ್ವಾಣಿ, ಅರ್ಜನ್ ಬಾಜ್ವಾ, ಸೋಹಂ ಮಜುಂದಾರ್, ಕಾಮಿನಿ ಕೌಶಲ್, ಸುರೇಶ್ ಒಬೆರಾಯ್, ಆದಿಲ್ ಹುಸೇನ್.
ದಕ್ಷಿಣ ಭಾರತದ ನಿರ್ದೇಶಕರು ಆಗೀಗ ಹಿಂದಿ ಸಿನಿಮಾರಂಗದವರಿಗೆ ಇಷ್ಟವಾಗುತ್ತಿರುತ್ತಾರೆ. ‘ಗಜನಿ’ ನಿರ್ದೇಶಿಸಿದ್ದ ಎ.ಆರ್. ಮುರುಗದಾಸ್ ದೊಡ್ಡ ಬಜೆಟ್‌ನಲ್ಲಿ ಅದೇ ಸಿನಿಮಾವನ್ನು ಹಿಂದಿಯಲ್ಲಿ ರೀಮೇಕ್ ಮಾಡಿ ಗೆದ್ದ ಮಾದರಿ ನೆನಪಿಸಿಕೊಳ್ಳಬಹುದು. ಈಗ ಸಂದೀಪ್ ರೆಡ್ಡಿ ವಂಗಾ ಅವರ ಸರದಿ. ತೆಲುಗಿನಲ್ಲಿ ಯಶಸ್ವಿಯಾಗಿದ್ದ ‘ಅರ್ಜುನ್ ರೆಡ್ಡಿ’ಯನ್ನು ‘ಕಬೀರ್ ಸಿಂಗ್’ ಆಗಿ ಹಿಂದಿಯಲ್ಲಿ ಇದೇ ನಿರ್ದೇಶಕರು ತೆರೆಗೆ ತಂದಿದ್ದಾರೆ. ಅಲ್ಲಿ ತೆಲುಗು, ತುಳು ಸಂಸ್ಕೃತಿಗಳ ಜಾತಿಭೇದದಿಂದಾಗಿ ನಾಯಕ–ನಾಯಕಿಯ ನಡುವೆ ಬಿರುಕನ್ನು ಸೃಷ್ಟಿಸಿದ್ದರೆ, ಇಲ್ಲಿ ಪಂಜಾಬಿ ನೆಲದ ಎರಡು ಭಿನ್ನ ಸಮುದಾಯಗಳ ಜಾತಿ ಕಂದಕದ ಭಗ್ನಪ್ರೇಮವಾಗುವಂತೆ ಮಾಡಿದ್ದಾರೆ. ಈ ‘ಕಾಸ್ಮೆಟಿಕ್’ ಬದಲಾವಣೆಯನ್ನು ಹೊರತುಪಡಿಸಿದರೆ ತೆಲುಗು ಚಲನಚಿತ್ರದ ಯಥಾವತ್ ಪ್ರತಿ ಇದು.
ಮೂಗಿನ ಮೇಲೆ ಮುಂಗೋಪ ಕೂರಿಸಿಕೊಂಡ ನೇರ ನುಡಿ–ನಡೆಯ, ಭಗ್ನಪ್ರೇಮಿ ವೈದ್ಯನ ಕಥಾನಕವಿದು; ಹೊಸ ಸಹಸ್ರಮಾನದ ‘ದೇವದಾಸ್’ ಮಾದರಿ. ಏಕಸಾಲಿನ ಕಥೆ ಮಾಮೂಲೇ. ಆದರೆ, ಸಣ್ಣಪುಟ್ಟ ವಿವರಗಳನ್ನೊಳಗೊಂಡ ಅತಿ ಸಾವಧಾನದ ವಿಶ್ಲೇಷಣಾತ್ಮಕ ಪಾತ್ರಗಳಿಂದ, ಸಂವಾದಕ್ಕೆ ಇಂಬುಗೊಡುವಂಥ ಸಂಭಾಷಣೆಗಳಿಂದ, ಆಗೀಗಷ್ಟೇ ದೃಶ್ಯತೀವ್ರತೆ ಹೆಚ್ಚಿಸಲು ಬಳಕೆಯಾಗುವ ಹಿನ್ನೆಲೆ ಸಂಗೀತದಿಂದ, ಕ್ಲೋಸಪ್ ದೃಶ್ಯಗಳಿಂದ ನೋಡಿಸಿಕೊಳ್ಳುವ ಸಿನಿಮಾ ಇದು.
ನಾಯಕನ ಪಾತ್ರ ಪೋಷಣೆಯಲ್ಲಿ ಪಥ ಬದಲಿಸಿಕೊಂಡ ಸಿನಿಮಾ ಇದು. ಜಾಣ ವಿದ್ಯಾರ್ಥಿ. ವೃತ್ತಿಯಲ್ಲಿ ಪ್ರಾಮಾಣಿಕ. ಆದರೂ ದೇವದಾಸ. ಸದಾ ಅಮಲಿನಲ್ಲಿದ್ದೂ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಬಲ್ಲ ತಜ್ಞವೈದ್ಯ. ಸಮಾಜದ ಕಟ್ಟಳೆಗಳಿಗೆ ಅಂಜದ ವ್ಯಕ್ತಿತ್ವ. ಇಂಥ ನಾಯಕನಿಗೆ ‘ಕೋಪ ನಿರ್ವಹಣೆ’ಯದ್ದೇ ಸಮಸ್ಯೆ. ಅದು ಅವನ ಹಾಗೂ ನಾಯಕಿಯ ಬದುಕಿನ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಿನಿಮಾ 172 ನಿಮಿಷಗಳ ದೀರ್ಘಾವಧಿಯಲ್ಲಿ ತೋರಿಸುತ್ತದೆ.
ಮೂಲ ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ವಂಗಾ ಅವರ ಕೈಲೇ ಈ ಸಿನಿಮಾದ ಲಂಗರೂ ಇದ್ದಿದ್ದರಿಂದ ಯಾವ ದೃಶ್ಯದಲ್ಲೂ ಹಿಡಿತ ತಪ್ಪಿಲ್ಲ. ಆದರೆ, ಹೋಲಿಕೆಯಲ್ಲಿ ನಾಯಕನ ಸ್ನೇಹಿತ ಹಾಗೂ ನಾಯಕಿ ಇಲ್ಲಿ ತುಸು ಮಂಕೆನಿಸುತ್ತಾರೆ. ನಾಯಕಿ ಕೈರಾ ಅಡ್ವಾಣಿ ಮುದ್ದುಮುಖದಲ್ಲಿ ಅಗತ್ಯ ಮುಗ್ಧತೆ ಇಲ್ಲ. ನಾಯಕ ಶಾಹಿದ್ ಪಾತ್ರವನ್ನು ಜೀವಿಸಿದ್ದಾರೆ. ಅವರು ಮೂಲ ಸಿನಿಮಾ ನಾಯಕ ವಿಜಯ್ ದೇವರಕೊಂಡಾ ಅವರನ್ನು ಅನುಕರಿಸಿಲ್ಲ.
ಸಂತಾನಕೃಷ್ಣನ್ ರವಿಚಂದ್ರನ್ ಸಿನಿಮಾಟೊಗ್ರಫಿ ಭಾವಗಳನ್ನು ಅಚ್ಚುಕಟ್ಟಾಗಿ ಹಿಡಿದುಕೊಟ್ಟಿದೆ. ಮೂಲ ಸಿನಿಮಾ ಗೀತಸಂಗೀತದ ಹೋಲಿಕೆಯಲ್ಲಿ ಇದು ಹಿಂದುಳಿದಿದೆ. ಅಜ್ಜಿಯ ಪಾತ್ರದಲ್ಲಿ ಕಾಮಿನಿ ಕೌಶಲ್ ಗಮನ ಸೆಳೆದರೆ, ಅಣ್ಣನಾಗಿ ಅರ್ಜನ್ ಬಾಜ್ವಾ ಪಾತ್ರ ನಿರ್ವಹಣೆ ಚೆನ್ನಾಗಿದೆ.
ಅಪ್ಪ–ಅಮ್ಮ, ಅಜ್ಜಿ–ಅಣ್ಣ, ಸ್ನೇಹಿತ ಹೀಗೆ ಎಲ್ಲ ಪಾತ್ರಗಳ ಪ್ರಶ್ನೆಗಳಿಗೆ ಒಳಗಾಗಿಯೂ ನಾಯಕ ದೀರ್ಘಾವಧಿ ಹಾದಿಗೆ ಮರಳದೇ ಇರುವುದು ಸಿನಿಮೀಯ ತರ್ಕದ ಲೋಪ. ನಾಯಕಿಯ ಪಾತ್ರದ ತೂಕ ಹೆಚ್ಚಿಸುವ ಅವಕಾಶಕ್ಕೆ ಮೂಲ ಸಿನಿಮಾದಲ್ಲಿ ಬೆನ್ನುಮಾಡಿದ್ದ ನಿರ್ದೇಶಕರಿಗೆ ಇಲ್ಲಿ ಅದನ್ನು ತಿದ್ದಿಕೊಳ್ಳುವ ಅವಕಾಶವಿತ್ತು. ಯಾಕೋ ಅವರು ಅಂಥ ಯಾವ ಬದಲಾವಣೆಯನ್ನೂ ಬಯಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.