ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ಚಿತ್ರೀಕರಣ ಪೂರ್ಣವಾಗಿದೆ. ಉಪೇಂದ್ರ ಅವರ ಜನ್ಮದಿನದ(ಸೆ.18) ಪ್ರಯುಕ್ತ ಸೆ.17ರಂದು ಚಿತ್ರದ ಟೀಸರ್ ಬಿಡುಗಡೆಗೊಳಿಸುವುದಾಗಿ ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.
2021ರ ಸೆ.18ರಂದು ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡವು, ದೀಪಾವಳಿಗೆ ಟೀಸರ್ ಬಿಡುಗಡೆಗೊಳಿಸುವುದಾಗಿ ಘೋಷಿಸಿತ್ತು. ಆದರೆ ಚಿತ್ರೀಕರಣ ವಿಳಂಬವಾದ ಕಾರಣ ಟೀಸರ್ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಸತತ ಎರಡು ವರ್ಷ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡವು ಇದೀಗ ಟೀಸರ್ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗದಿಪಡಿಸಿದೆ. ಸೆ.17ರ ಸಂಜೆ 5 ಗಂಟೆಗೆ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತೇವೆ ಎಂದಿದ್ದಾರೆ ಚಂದ್ರು.
ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ‘ಭಾರ್ಗವ್ ಭಕ್ಷಿ’ ಎಂಬ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ‘ಕಬ್ಜ’ ಕೋಟೆಯಲ್ಲಿ ‘ಮಧುಮತಿ’ಯಾಗಿ ಬಹುಭಾಷಾ ನಟಿ ಶ್ರಿಯಾ ಸರಣ್ ಬಣ್ಣಹಚ್ಚಿದ್ದಾರೆ. ಬಾಲಿವುಡ್ನ ಖ್ಯಾತ ನಟ ನವಾಬ್ ಶಾ ಹಾಗೂ ಕೆ.ಜಿ.ಎಫ್ ಸಿನಿಮಾದಲ್ಲಿ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ ಲಕ್ಷ್ಮೀಶ ಲಕ್ಷ್ಮಣ್, ತಮಿಳಿನ ‘ಐ’ ಚಿತ್ರದ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ರಾಹುಲ್ ದೇವ್, ಸುನೀಲ್ ಪುರಾಣಿಕ್, ಪ್ರಮೋದ್ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಕಬ್ಜ’ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.