ಚಂದನವನದಲ್ಲಿ ಬಹಳ ಸರಳ ಹಾಗೂ ಸಜ್ಜನಿಕೆಯ ನಟನೆಂದೇ ಗುರುತಿಸಿಕೊಂಡಿರುವ, ಜನಕ್ಕೆ ‘ಚಿನ್ನಾರಿಮುತ್ತ’ ಎಂದೇ ಚಿರಪರಿಚಿತರಾದ ನಟ ವಿಜಯ್ ರಾಘವೇಂದ್ರ ಅವರು ಇದೀಗ ಸಿಗರೇಟ್ ಚಟಕ್ಕೆ ಬಿದ್ದಿದ್ದಾರೆ! ಆದರೆ, ಇದು ನಿಜಜೀವನದಲ್ಲಿ ಅಲ್ಲ. ‘ಕದ್ದ ಚಿತ್ರ’ ಎಂಬ ವಿಭಿನ್ನವಾದ ಶೀರ್ಷಿಕೆ ಹೊಂದಿರುವ ಸಿನಿಮಾದಲ್ಲಿ ಲೇಖಕನ ಪಾತ್ರಕ್ಕೆ ವಿಜಯ್ ಬಣ್ಣಹಚ್ಚಿದ್ದು,ಸಿಗರೇಟ್ ಸೇದುತ್ತಾ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸುಹಾಸ್ ಕೃಷ್ಣ ನಿರ್ದೇಶನದ ಈ ಚಿತ್ರದ ಫಸ್ಟ್‌ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ಪಾತ್ರದ ಕುರಿತು ಮಾತನಾಡಿದ ವಿಜಯ್, ‘25 ವರ್ಷದಲ್ಲಿ ವಿಜಯ್ ರಾಘವೇಂದ್ರನ ಕೈಯಲ್ಲಿ ಇರದ ಸಿಗರೇಟ್ ಈಗೇಕೆ ಎನ್ನುವ ಪ್ರಶ್ನೆ ಬರುತ್ತದೆ. ಈ ಪಾತ್ರಕ್ಕೆ ನಾನು ಸರಿಹೋಗುತ್ತೇನೆಯೇ ಎನ್ನುವ ಪ್ರಶ್ನೆ ನನ್ನಲ್ಲಿಯೇ ಇತ್ತು. ಇದಕ್ಕೆ ಹಿಂದೆ ನಾನು ಸಿಗರೇಟ್ ಅಥವಾ ಮದ್ಯದ ಬಾಟಲ್ ಹಿಡಿದರೆ ಜನವೇ ಬೈಯುತ್ತಿದ್ದರು. ಬರದಿರುವ ಕೆಲಸ ಇವರಿಗೆ ಏಕೆ ಎನ್ನುತ್ತಿದ್ದರು. ಸಿಗರೇಟ್ ಸೇದುವುದು ಜೀವಕ್ಕೆ ಹಾನಿಕಾರಕ. ಆದರೆ ಕೆಲ ಪಾತ್ರ, ಕೆಲವರ ವ್ಯಕ್ತಿತ್ವ ಸಿಗರೇಟ್ ಜೊತೆಗೆ ಗುರುತಿಸಿಕೊಳ್ಳುತ್ತದೆ. ಚಿತ್ರದಲ್ಲಿ ನನ್ನ ಪಾತ್ರವೂ ಇದೇ ರೀತಿ ಇದೆ. ಕೃತಿ ಚೌರ್ಯದ ಕಥಾಹೊಂದಿರುವ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದು. ಪಾತ್ರಕ್ಕಾಗಿ ಸಿಗರೇಟ್ ಸೇದುವ ಅಭ್ಯಾಸ ಮಾಡಿದೆ. ಈ ಸಂದರ್ಭದಲ್ಲಿ ತಲೆಸುತ್ತು ಬಂದು ಬಿದ್ದಿರುವ ಘಟನೆಯೂ ಇದೆ. ಸಿಗರೇಟ್ ಸೇರುವ ವಿಡಿಯೊ ಮಾಡಿ ಮನೆಗೆ ಕಳುಹಿಸಿದಾಗ ಬೈಗುಳ ತಿಂದದ್ದೂ ಇದೆ’ ಎಂದರು.
‘ವಿಜಯ್ ರಾಘವೇಂದ್ರನ ಬಾಯಲ್ಲಿ ಸಿಗರೇಟ್ ಇದೆಯೇ? ಸಿಗರೇಟ್ ಹಿಡಿದುಕೊಳ್ಳವುದಕ್ಕೂ ಯೋಗ್ಯತೆ ಇರಬೇಕು. ಸಿಗರೇಟ್ ಮರ್ಯಾದೆಯನ್ನೂ ನಾನು ತೆಗೆದಿದ್ದೇನೆ. ಆದರೆ ಈ ಸಿನಿಮಾದಲ್ಲಿ ಪಾತ್ರಕ್ಕಾಗಿ ಈ ಅಭ್ಯಾಸ ಕಲಿತು ನಿಭಾಯಿಸಿದ್ದೇನೆ. ನಿಜಜೀವನದಲ್ಲಿ ಎಂದೂ ನಾನು ಸಿಗರೇಟ್ ಇಷ್ಟಪಟ್ಟವನಲ್ಲ, ಇಷ್ಟಪಡುವುದೂ ಇಲ್ಲ’ ಎನ್ನುತ್ತಾರೆ ವಿಜಯ್.
‘ಬೆಂಗಳೂರು, ವಯನಾಡ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರಕಥೆ ಬರೆಯುವ ಸಂದರ್ಭದಲ್ಲೇ ವಿಜಯ್ ರಾಘವೇಂದ್ರ ಅವರನ್ನು ಬೇರೆ ರೀತಿ ತೆರೆಯ ಮೇಲೆ ತೋರಿಸಬೇಕು ಎನ್ನುವ ಯೋಚನೆ ನಮ್ಮದಾಗಿತ್ತು. ಇದನ್ನು ನಾವು ಸಾಧಿಸಿದ್ದೇವೆ. ಇನ್ನು 8 ದಿನಗಳ ಚಿತ್ರೀಕರಣ ಬಾಕಿ ಇದೆ. ಸ್ಟೈಲ್, ನಡವಳಿಕೆಯಲ್ಲಿ ಬೇರೆಯೇ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ’ ಎಂದರು ಸುಹಾಸ್ ಕೃಷ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.