ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರು ನಾಸ್ಟಾಲ್ಜಿಕ್ ಮೂಡಿನಲ್ಲಿದ್ದರು. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೊದ ವೇದಿಕೆಯಲ್ಲಿ ನಿಂತಿದ್ದ ಅವರಿಗೆ, ತಮ್ಮ ನಿರ್ದೇಶನದ ‘ಭಾಗ್ಯರಾಜ್’ ಸಿನಿಮಾದ ಧ್ವನಿಮುದ್ರಿಕೆಯೂ ಇಲ್ಲೇ ಬಿಡುಗಡೆಯಾಗಿತ್ತು ಎಂಬ ಸಂಗತಿ ತುಸು ಭಾವುಕತೆಗೆ ದೂಡಿತ್ತು. ‘ನಾನು ಹೀಗೆ ಒಂದು ವೇದಿಕೆಯ ಮೇಲೆ ನಿಂತು ಎರಡೂವರೆ ವರ್ಷ ಆದವು. ಈಗಿನ ಪರಿಸ್ಥಿತಿಗೂ ಆಗಿನ ಪರಿಸ್ಥಿತಿಗೂ ಇರುವ ಒಂದು ಮುಖ್ಯ ವ್ಯತ್ಯಾಸ: ಈಗ ಹೆಂಡತಿಯಾಗಿರುವವಳು ಆಗ ಗರ್ಲ್‌ಫ್ರೆಂಡ್ ಆಗಿದ್ದಳು’ ಎಂದು ತುಸು ತಮಾಷೆಯಾಗಿಯೇ ಮಾತಿಗಾರಂಭಿಸಿದರು.
ಅದು ಅವರ ನಿರ್ದೇಶನದ ಹೊಸ ಸಿನಿಮಾ ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ಟ್ರೇಲರ್ ಬಿಡುಗಡೆ ಮಾಡಲು ಸುಮನ್ ನಗರಕರ್, ಯೋಗಿ, ರಘುನಂದನ ಮತ್ತು ರಾಧಿಕಾ ಚೇತನ್ ಕಾರ್ಯಕ್ರಮದಲ್ಲಿದ್ದರು. ಇದು ಪಕ್ಕಾ ಹಳ್ಳಿ ಸೊಗಡಿನ ಕಥೆ ಎಂಬುದು ಟ್ರೇಲರ್ ನೋಡಿದರೆ ತಿಳಿಯುವಂತಿತ್ತು. ಹಾಗೆಯೇ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳು ಇರುವ ಸುಳಿವೂ ಅದರಲ್ಲಿತ್ತು.
ಅನೂಷ್ ಶೆಟ್ಟಿ ಎಂಬ ಯುವ ಬರಹಗಾರರ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಸಿನಿಮಾ ಆಗಿಸುತ್ತಿದ್ದಾರೆ ದೀಪಕ್. ಹನಗೋಡು ಎಂಬ ಹಳ್ಳಿಯಲ್ಲಿಯೇ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ‘ಆ ಹಳ್ಳಿಯಲ್ಲಿ ಒಂದು ಬೆಟ್ಟ ಇರುತ್ತದೆ. ಆ ಬೆಟ್ಟದಲ್ಲಿ ದರೋಡೆಕೋರರು ಇದ್ದಾರೆ ಎಂಬ ವದಂತಿ ಇರುತ್ತದೆ. ಅದೇ ಭಯದಿಂದ ಇಡೀ ಹಳ್ಳಿಯ ಜನರು ಸಂಜೆಯಾದ ಮೇಲೆ ಯಾರೂ ಹೊರಗಡೆ ಅಡ್ಡಾಡುವುದಿಲ್ಲ. ಈ ದರೋಡೆಕೋರರ ಕಥೆ ಮತ್ತು ಹಳ್ಳಿಯ ಎರಡು ಬೀದಿಗಳ ಹುಡುಗರ ನಡುವಿನ ಜಟಾಪಟಿ, ಜತೆಗೊಂದು ಲವ್ ಸ್ಟೋರಿ ಇಟ್ಟುಕೊಂಡು ಸಿನಿಮಾ ಹೆಣೆದಿದ್ದೇವೆ’ ಎಂದು ವಿವರಿಸಿದರು ನಿರ್ದೇಶಕರು.
‘ರಾಮಾ ರಾಮಾ ರೇ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಟರಾಜ್ ಅವರು ಈ ಚಿತ್ರದ ನಾಯಕ. ‘ರಾಮಾ ರಾಮಾ ರೇ’ ಚಿತ್ರದಲ್ಲಿ ನನಗೆ ಜಾಸ್ತಿ ಡೈಲಾಗ್‌ಗಳು ಇರಲಿಲ್ಲ. ಆದರೆ ಈ ಚಿತ್ರದಲ್ಲಿ ಉದ್ದುದ್ದ ಡೈಲಾಗ್‌ಗಳಿವೆ. ಡಾನ್ಸ್ ಮಾಡಿದ್ದೇನೆ. ಇಷ್ಟಪಟ್ಟು ಮಾಡುತ್ತಿರುವ ಪಾತ್ರವಿದು’ ಎಂದರು.
ಕಿರುತೆರೆ ನಟಿ ಶ್ವೇತಾ ಆರ್. ಪ್ರಸಾದ್ ಈ ಚಿತ್ರದ ಮೂಲಕ ಹಿರಿತೆರೆಗೆ ಲಗ್ಗೆಯಿಡುತ್ತಿದ್ದಾರೆ. ‘ಕಾದಂಬರಿ ಆಧಾರಿತ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಎಲ್ಲ ಕಲಾವಿದರ ಕನಸು. ಈ ಕನಸು ನನ್ನ ಮೊದಲ ಸಿನಿಮಾದಲ್ಲಿಯೇ ನನಸಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದರು ಶ್ವೇತಾ.
ಹೇಮಂತ್ ಸುಶೀಲ್ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು ಹತ್ತೇ ದಿನಗಳಲ್ಲಿ ಎಂಟು ಕೆ.ಜಿ. ಇಳಿಸಿಕೊಂಡು ಸಣ್ಣಗಾಗಿದ್ದಾರಂತೆ. ‘ಇಡೀ ಚಿತ್ರದ ಚಿತ್ರೀಕರಣ ಮಂಡ್ಯದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಸಲಾಗಿದೆ. ಚಿತ್ರದಲ್ಲಿಯೂ ಮಂಡ್ಯದ ಭಾಷೆಯನ್ನೇ ಬಳಸಿಕೊಳ್ಳಲಾಗಿದೆ. ಅದೇ ಭಾಗದವನಾಗಿದ್ದರಿಂದ ನನಗೆ ಇನ್ನಷ್ಟು ಸುಲಭವಾಗಿ ಪಾತ್ರದಲ್ಲಿ ನಟಿಸಲು ಸಾಧ್ಯವಾಯಿತು’ ಎಂದರು ಅವರು.
ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಬ್ರಿಡ್ಜ್ ಸಿನಿಮಾಸ್’ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ‘ದರೋಡೆಕೋರರು’ ತೆರೆಗೆ ಬರಲು ಸಂಚು ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.