‘ಶಿಕ್ಷಣ ವ್ಯವಸ್ಥೆ ನಿಂತಿರುವುದು ನೆನಪಿನ ಶಕ್ತಿಯ ಮೇಲೆ. ಆದರೆ, ನಾವು ಮಕ್ಕಳಿಗೆ ಕೌಶಲ, ಬದುಕುವ ಕಲೆಯ ಬಗ್ಗೆ ಹೇಳಿಕೊಡುತ್ತಿಲ್ಲ’
–ಹೀಗೆಂದು ಅಸಮಾಧಾನ ತೋಡಿಕೊಂಡಿದ್ದು ನಿರ್ದೇಶಕ ಕವಿರಾಜ್. ‘ಶಿಕ್ಷಣ ವ್ಯವಸ್ಥೆಯು ಆಮೂಲಾಗ್ರವಾಗಿ ಬದಲಾಗಬೇಕು. ಹಾಗಾಗಿ, ಸರ್ಕಾರಿ ಶಾಲೆಯ ಶಿಕ್ಷಕರಿಗೆ ಇದು ಪರೀಕ್ಷೆಯ ಕಾಲ’ ಎಂದು ಮಾತು ವಿಸ್ತರಿಸಿದರು.
‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದ ಬಳಿಕ ಕವಿರಾಜ್ ನಿರ್ದೇಶಿಸುತ್ತಿರುವ ಎರಡನೇ ಚಿತ್ರ ‘ಕಾಳಿದಾಸ ಕನ್ನಡ ಮೇಷ್ಟ್ರು’. ಇದು ನವೆಂಬರ್ 15ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ಕೆಲವು ವರ್ಷದ ಹಿಂದೆ ದುಬೈನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಅವನ ಕೆಮಿಸ್ಟ್ರಿಯ ಉತ್ತರ ಪತ್ರಿಕೆಯಲ್ಲಿ ಡೆತ್‌ನೋಟ್ ಸಿಕ್ಕಿತಂತೆ. ಇದೇ ಈ ಸಿನಿಮಾ ನಿರ್ದೇಶನಕ್ಕೆ ಅವರಿಗೆ ಪ್ರೇರಣೆಯಾಯಿತಂತೆ.
‘ಈ ಚಿತ್ರದಿಂದ ಸರ್ಕಾರದ ಧೋರಣೆ ಬದಲಾಗದಿದ್ದರೂ, ಪೋಷಕರ ಮನಸ್ಸಿಗೆ ಕಥೆ ತಟ್ಟಲಿದೆ. ಅವರು ಸ್ವಲ್ಪಮಟ್ಟಿಗಾದರೂ ಬದಲಾಗಲಿದ್ದಾರೆ. ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎಂಬುದೇ ಸಿನಿಮಾದ ಆಶಯ. ಚಿತ್ರದಲ್ಲಿ ಕಾಮಿಡಿ, ಸಸ್ಪೆನ್ಸ್, ಫೈಟ್ ಎಲ್ಲವೂ ಇದೆ’ ಎಂದು ಮಾಹಿತಿ ನೀಡಿದರು ಕವಿರಾಜ್.ಸಿನಿಮಾದ ಕೇಂದ್ರಬಿಂದು ಕಾಳಿದಾಸ. ಆತ ಸರ್ಕಾರಿ ಶಾಲೆಯ ಶಿಕ್ಷಕ. ಅವನಿಗೆ ಇಂಗ್ಲಿಷ್ ಬರುವುದಿಲ್ಲ. ಆತನ ಹೆಂಡತಿ ಇಂಗ್ಲಿಷ್ ಪ್ರೇಮಿ. ಆತನ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ತಲ್ಲಣವೇ ಚಿತ್ರದ ಕಥಾಹಂದರ. ಚಿತ್ರದ ಕೊನೆಯಲ್ಲಿ ಅದ್ಭುತವಾದ ಸಂದೇಶ ಕೂಡ ಇದೆಯಂತೆ.
ಮೇಷ್ಟ್ರು ಪಾತ್ರಕ್ಕೆ ಬಣ್ಣ ಹಚ್ಚಿರುವುದು ನಟ ಜಗ್ಗೇಶ್. ಅವರದು ಟಿಪಿಕಲ್ ಶಿಕ್ಷಕನ ಪಾತ್ರ. ‘ನಮ್ಮ ಕಾಲದಲ್ಲಿ ಶಿಕ್ಷಣ ದುಬಾರಿಯಾಗಿರಲಿಲ್ಲ. ಈಗ ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಲಕ್ಷಾಂತರ ರೂಪಾಯಿ ವ್ಯಯಿಸಬೇಕಿದೆ. ಪ್ರತಿವರ್ಷದ ಮೇ ತಿಂಗಳು ಬಂದಾಗಲೂ ಪೋಷಕರಲ್ಲಿ ಒತ್ತಡ ಶುರುವಾಗುತ್ತದೆ’ ಎಂದು ವಿಷಾದಿಸಿದರು. ‘ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಎಂಆರ್‌ಎಂ ಎಂಬ ಶಿಕ್ಷಕರಿದ್ದರು. ಅವರು ಈಗಲೂ ಇದ್ದಾರೆ. ನಾನೊಬ್ಬ ಕಲಾವಿದನಾಗುತ್ತೇನೆ ಎಂದು ಅಂದೇ ಅವರು ಹೇಳಿದ್ದರು. ಮಕ್ಕಳ ಪ್ರತಿಭೆ ಗುರುತಿಸುವ ಶಕ್ತಿ ಶಿಕ್ಷಕರಿಗೆ ಇದೆ’ಎಂದರು.
ಮೇಘನಾ ಗಾಂವ್ಕರ್ ಈ ಚಿತ್ರದ ಮೂಲಕ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಖುಷಿಯಲ್ಲಿದ್ದಾರೆ. ‘ನಾನು ಓದಿದ್ದು ವಸತಿಶಾಲೆಯಲ್ಲಿ. ಅಲ್ಲಿ ಕನ್ನಡ ಮಾತನಾಡಿದರೆ ಹೊಡೆಯುತ್ತಿದ್ದರು. ಸಿನಿಮಾಕ್ಕೆ ಬಂದ ಮೇಲೆ ನನಗೆ ಕನ್ನಡ ಭಾಷೆಯ ಮಹತ್ವದ ಅರಿವಾಯಿತು’ ಎಂದು ಹೇಳಿಕೊಂಡರು.ಚಿತ್ರದ ಎರಡು ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿದೆ. ಯು.ಆರ್. ಉದಯ್‌ಕುಮಾರ್ ಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.