ಭಾರತೀಯ ಮೂಲದ ಹುಡುಗನೊಬ್ಬ ದುಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ವಿಚಲಿತರಾದ ಕವಿರಾಜ್ ಅವರು ಸಿದ್ಧಪಡಿಸಿದ ಸಿನಿಮಾ ‘ಕಾಳಿದಾಸ ಕನ್ನಡ ಮೇಷ್ಟ್ರು’. ಕನ್ನಡ ಮೇಷ್ಟ್ರು ಈ ಚಿತ್ರದ ಒಂದು ಕೇಂದ್ರ. ಇನ್ನೊಂದು ಕೇಂದ್ರ ಇಂದಿನ ಶಿಕ್ಷಣ ವ್ಯವಸ್ಥೆ. ಈ ವ್ಯವಸ್ಥೆ ಇಂದಿನ ಮಕ್ಕಳ ಮನಸ್ಸಿನಲ್ಲಿ ಸೃಷ್ಟಿಸುತ್ತಿರುವ ಒತ್ತಡ ಕಥೆಯಲ್ಲಿ ವ್ಯಕ್ತವಾಗಿದೆ.
ಇವೆಲ್ಲ ವಿಚಾರಗಳನ್ನು ಹಂಚಿಕೊಂಡಿದ್ದು ನಿರ್ದೇಶಕ ಕವಿರಾಜ್. ಜಗ್ಗೇಶ್ ಈ ಚಿತ್ರದ ನಾಯಕ ನಟ. ಈ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ‘ನನ್ನ ಪ್ರಕಾರ, ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಬಿಳಿ ಹಾಳೆ ಮೇಲೆ ನಾನು ನನ್ನ ಆಲೋಚನೆಗಳನ್ನು ಹೇಗೆ ಬರೆದುಕೊಂಡಿದ್ದೆನೋ ಅದಕ್ಕಿಂತ ಹೆಚ್ಚು ಚೆನ್ನಾಗಿ ಬಿಳಿ ಪರದೆ ಮೇಲೆ ಮೂಡಿಬಂದಿದೆ. ಸಿನಿಮಾ ಹೇಗೆ ಮೈದಾಳಬಹುದು ಎಂಬುದು ನಮಗೆ ಸ್ಕ್ರಿಪ್ಟ್ ಸಿದ್ಧಪಡಿಸುವಾಗಲೇ ಗೊತ್ತಿರುತ್ತದೆ. ಸ್ಕ್ರಿಪ್ಟ್‌ಗೆ ದೃಶ್ಯ, ಸಂಗೀತ, ಸಂಭಾಷಣೆಗಳೆಲ್ಲ ಸೇರಿಕೊಂಡಾಗ ಸಿನಿಮಾ ಇನ್ನೂ ಚೆನ್ನಾಗಿ ಆಗುತ್ತದೆ. ಈ ಸಿನಿಮಾ ಕೂಡ ಹಾಗೇ ಆಗಿದೆ’ ಎಂದು ಖುಷಿ ಹಂಚಿಕೊಂಡರು ಕವಿರಾಜ್.
‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಕುಳಿತಿದ್ದ ಅವರಲ್ಲಿ, ‘ಶಿಕ್ಷಣ ವ್ಯವಸ್ಥೆಯ ಯಾವೆಲ್ಲ ಆಯಾಮಗಳ ಕುರಿತು ಈ ಸಿನಿಮಾ ಮಾತನಾಡುತ್ತದೆ’ ಎಂದು ಪ್ರಶ್ನಿಸಿದಾಗ: ‘ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು, ಮಕ್ಕಳ ಮೇಲೆ ಬೀಳುತ್ತಿರುವ ಹೊರೆ, ಅವರ ಮನಸ್ಸಿನಲ್ಲಿ ಸೃಷ್ಟಿಯಾಗುತ್ತಿರುವ ಒತ್ತಡ, ಶಿಕ್ಷಣವು ದಂಧೆಯಾಗಿರುವ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಕಾಳಿದಾಸನಿಗೆ (ಜಗ್ಗೇಶ್) ತನ್ನ ಮಗುವನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕು ಎಂಬ ಆಸೆ ಇರುತ್ತದೆ. ಕಾಳಿದಾಸ ಈ ಚಿತ್ರದಲ್ಲಿ ಸರ್ಕಾರಿ ಶಾಲೆಯ ಮೇಷ್ಟ್ರು. ಆ ಮೇಷ್ಟ್ರಿಗೆ ಎದುರಾಗುವ ತೊಂದರೆಗಳ ಸುತ್ತ ಸಿನಿಮಾ ಸಾಗುತ್ತದೆ’ ಎಂದರು.
ಶಿಕ್ಷಣ ವ್ಯವಸ್ಥೆ ಬಗ್ಗೆ ಕಮರ್ಷಿಯಲ್ ಸಿನಿಮಾ ಮಾಡುವುದಕ್ಕಿಂತ, ಸಾಕ್ಷ್ಯಚಿತ್ರ ಮಾಡಬಹುದಿತ್ತಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಕವಿರಾಜ್ ಅವರಲ್ಲೂ ಇದೇ ಪ್ರಶ್ನೆ ಮೂಡಿತ್ತು. ‘ಶಿಕ್ಷಣ ವ್ಯವಸ್ಥೆ ಬಗ್ಗೆ ಸಿನಿಮಾ ಮಾಡಬೇಕು ಎಂದು ನನಗೆ ಅನಿಸಿದ್ದು ಒಂದು ನೈಜ ಘಟನೆಯಿಂದಾಗಿ. ದುಬೈನಲ್ಲಿ ಭಾರತೀಯ ಮೂಲದ ಹದಿನಾರು ವರ್ಷ ವಯಸ್ಸಿನ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಅವನ ಆತ್ಮಹತ್ಯೆ ಪತ್ರ ಒಂದಿಷ್ಟು ದಿನಗಳ ನಂತರ, ಅವನ ರಸಾಯನ ವಿಜ್ಞಾನ ಉತ್ತರ ಪತ್ರಿಕೆಯಲ್ಲಿ ದೊರೆಯಿತು. ಅದೇ ನನಗೆ ಈ ಸಿನಿಮಾ ಮಾಡಲು ಒತ್ತಡ ಸೃಷ್ಟಿಸಿತು. ಶಿಕ್ಷಣ ವ್ಯವಸ್ಥೆ ನಮ್ಮ ಮಕ್ಕಳ ಮೇಲೆ ಎಷ್ಟೊಂದು ಒತ್ತಡ ಸೃಷ್ಟಿಸುತ್ತಿದೆ ಎಂದು ಅನಿಸಿತು. ಆದರೆ, ಇದು ಬಹಳ ಗಂಭೀರ ವಿಷಯ. ಇದನ್ನು ಎರಡೂವರೆ ಗಂಟೆ ಕುಳಿತು ವೀಕ್ಷಿಸುವುದು ಕಷ್ಟವಾಗಬಹುದು. ಹಾಗಾಗಿ, ಈ ವಿಚಾರವನ್ನು ಹಾಸ್ಯದ ಲೇಪದ ಜೊತೆ ನೀಡಿದರೆ ಹೇಗೆ ಎಂಬ ಆಲೋಚನೆ ಬಂತು’ ಎಂದು ಇದು ಸಿನಿಮಾ ಆಗಿ ಮೈದಳೆದಿದ್ದರ ಹಿಂದಿನ ಕಥೆ ಹೇಳಿದರು. ಕವಿರಾಜ್ ಈ ಚಿತ್ರದಲ್ಲಿ ಹಿಂದಿಯ ‘ಪಿಕೆ’ ಚಿತ್ರದ ಮಾದರಿ ಅನುಸರಿಸಿದ್ದಾರೆ. ಪಿಕೆ ಸಿನಿಮಾ ಮಾತನಾಡುವುದು ಗಂಭೀರ ವಿಚಾರದ ಬಗ್ಗೆ. ಆದರೆ, ಅದನ್ನು ವಿವರಿಸುವುದು ಹಾಸ್ಯದ ಧಾಟಿಯಲ್ಲಿ.
‘ನಮ್ಮ ಚಿತ್ರ ಒಂದು ಸಂದೇಶ ನೀಡುತ್ತದೆ. ಅದು ಸಿನಿಮಾ ಕೊನೆಯಲ್ಲಿ ಬರುವ ಎರಡು ಸಾಲುಗಳ ಸಂದೇಶ ಅಲ್ಲ. ಸಂದೇಶವು ಇಲ್ಲಿ ಬಹಳ ಗಟ್ಟಿಯಾಗಿ ಸಿನಿಮಾ ಕಥೆಯ ಮೂಲಕವೇ ವ್ಯಕ್ತವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.