ಮಕ್ಕಳ ಮನಸ್ಸನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಹಾಗಾಗಿಯೇ, ‘ನೂಲಿನಂತೆ ಸೀರೆ; ಮಾಸ್ತರರಂತೆ ಮಕ್ಕಳು’ ಎಂಬ ನಾಣ್ಣುಡಿ ಹುಟ್ಟಿಕೊಂಡಿರುವುದು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮೇಷ್ಟ್ರು ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಆ ಕೊಂಡಿ ಈಗ ಸವಕಳಿಯ ಹಾದಿ ಹಿಡಿದಿದೆ.
ಮತ್ತೊಂದೆಡೆ ಹೊಸ ತಲೆಮಾರಿನ ಶಿಕ್ಷಕರು ಶೈಕ್ಷಣಿಕ ವ್ಯವಸ್ಥೆಯ ಸಮಸ್ಯೆ ಎದುರಿಸಲಾರದೆ ಹೈರಾಣಾಗುತ್ತಿದ್ದಾರೆ. ಇನ್ನೊಂದೆಡೆ ಪೋಷಕರೂ ದಿಕ್ಕೆಟ್ಟಿದ್ದಾರೆ. ಈ ಎರಡೂ ವರ್ಗದ ತೊಳಲಾಟದ ಚಿತ್ರಣವೇ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಕಥಾಹಂದರ. ಇದಕ್ಕೆ ಕಾಮಿಡಿ ಸ್ಪರ್ಶ ನೀಡಲಾಗಿದೆ. ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಕವಿರಾಜ್. ತೂಗುದೀಪ ಪ್ರೊಡಕ್ಷನ್‌ನಡಿ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರ ನಿರ್ದೇಶಿಸಿದ್ದ ಅವರಿಗೆ ಇದು ಎರಡನೇ ಚಿತ್ರ.
ಈಗಾಗಲೇ, ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ನೀಡಿದೆ. ನವೆಂಬರ್‌ನಲ್ಲಿ ಜನರ ಮುಂದೆ ಬರುವ ಇರಾದೆ ಚಿತ್ರತಂಡದ್ದು.
‘ಇದು ಕಮರ್ಷಿಯಲ್ ಚಿತ್ರವೂ ಹೌದು. ಜೊತೆಗೆ, ಕಲಾತ್ಮಕ ಸಿನಿಮಾದ ಸ್ಪರ್ಶವೂ ಇದೆ. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕಾಮಿಡಿ ರೂಪದಲ್ಲಿ ಹೇಳುತ್ತಿದ್ದೇವೆ. ಪ್ರಸ್ತುತ ಪೋಷಕರು ತಮ್ಮ ಸಾಮರ್ಥ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎನ್ನುತ್ತಾರೆ ಕವಿರಾಜ್.
‘ಶಿಕ್ಷಣ ವ್ಯವಸ್ಥೆಯಲ್ಲಿ ಏನೆಲ್ಲಾ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಮಧ್ಯಮವರ್ಗದ ಜನರು ಯಾವ ತೊಂದರೆ ಅನುಭವಿಸುತ್ತಿದ್ದಾರೆ. ಏನೆಲ್ಲಾ ಬದಲಾವಣೆಯಾಗಬೇಕು ಎನ್ನುವುದನ್ನು ಕಟ್ಟಿಕೊಟ್ಟಿದ್ದೇವೆ’ ಎಂದು ಮಾತು ವಿಸ್ತರಿಸುತ್ತಾರೆ.
ಜಗ್ಗೇಶ್ ಅವರದು ಇದರಲ್ಲಿ ಸರ್ಕಾರಿ ಕನ್ನಡ ಶಾಲೆಯ ಮೇಷ್ಟ್ರು ಪಾತ್ರ. ಅವರ ವೃತ್ತಿಬದುಕಿನ ಬಗ್ಗೆ ಕಥೆಯ ಎಳೆಯೊಂದು ಸಾಗುತ್ತಿರುತ್ತದೆ. ಇನ್ನೊಂದು ಎಳೆಯು ವೈಯಕ್ತಿಕ ಜೀವನ ಕುರಿತೂ ಸಾಗುತ್ತಿರುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಕಥೆ ಗಂಭೀರ ಸ್ವರೂಪ ಪಡೆಯುತ್ತದೆ. ಅದರ ಕ್ಯಾನ್ವಾಸ್ ದೊಡ್ಡದಾಗುತ್ತದೆ. ಸಿನಿಮಾ ನೋಡಿದ ಬಳಿಕ ಮಕ್ಕಳ ಶಿಕ್ಷಣ ಸಂಬಂಧ ಪೋಷಕರು ಸ್ವಲ್ಪವಾದರೂ ಬದಲಾಗುತ್ತಾರೆ. ಸರ್ಕಾರಕ್ಕೂ ಒಳ್ಳೆಯ ಸಂದೇಶ ಹೇಳಿದ್ದೇವೆ’ ಎಂದು ವಿವರಿಸುತ್ತಾರೆ.
ಕಪ್ಪುಬೋರ್ಡ್ ಮುಂದೆ ನಿಂತು ಜಗ್ಗೇಶ್ ಅವರು, ‘ಕನ್ನಡ ಅಂದ್ರೇ ಅವ್ವ; ಇಂಗ್ಲಿಷ್ ಅಂದ್ರೇ ದೆವ್ವ’ ಎಂದು ಬರೆದ ಸಾಲುಗಳು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿವೆ. ಅವರ ಇಮೇಜ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕಥೆ ಹೆಣೆಯಲಾಗಿದೆ.
ಮೇಘನಾ ಗಾಂವ್ಕರ್ ಈ ಚಿತ್ರದ ನಾಯಕಿ. ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಗುಂಡ್ಲುಪೇಟೆ ಛಾಯಾಗ್ರಹಣವಿದೆ. ಯು.ಆರ್. ಉದಯ್ ಕುಮಾರ್ ಆರ್ಥಿಕ ಇಂಧನ ಒದಗಿಸಿದ್ದಾರೆ. ಅಂಬಿಕಾ, ತಬಲ ನಾಣಿ, ಟಿ.ಎಸ್. ನಾಗಾಭರಣ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.