ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಪಕ ಹಾಗೂ ನಟರಿಗೆ ನೋಟಿಸ್ ನೀಡಲಾಗಿದೆ ಎಂದು ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ತಿಳಿಸಿದ್ದಾರೆ.
ಈ ಸಂಬಂಧ ಆಚಾರ್ಯ ಪ್ರಮೋದ್ ಕೃಷ್ಣಂ ಮಾತನಾಡಿರುವ ವಿಡಿಯೊವನ್ನು ಪಿಟಿಐ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
‘ನಮ್ಮ ಪವಿತ್ರ ಗ್ರಂಥಗಳನ್ನು ವಿರೂಪಗೊಳಿಸುವ ಹಕ್ಕು ಯಾರಿಗೂ ಇಲ್ಲ. ಹಿಂದೂ ಪುರಾತನ ಗ್ರಂಥಗಳ ಪಠ್ಯಗಳನ್ನು ವಿರೂಪಗೊಳಿಸುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಕಲ್ಕಿ ಅವತಾರವು ಭಗವಾನ್ ವಿಷ್ಣುವಿನ ಕೊನೆಯ ಅವತಾರವಾಗಿದೆ. ಆದರೆ ಈ ಚಿತ್ರದಲ್ಲಿ ಜನರಿಗೆ ತಪ್ಪು ಸಂದೇಶವನ್ನು ನೀಡಿದ್ದಾರೆ. ಹೀಗಾಗಿ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಮತ್ತು ಪವಿತ್ರ ಹಿಂದೂ ಗ್ರಂಥಗಳನ್ನು ತಿರುಚಿದ ಆರೋಪದಡಿ ಕಲ್ಕಿ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್, ನಿರ್ದೇಶಕ ನಾಗ ಅಶ್ವಿನ್ ಮತ್ತು ಅಭಿನಯಿಸಿದ ನಟರಿಗೂ ನೋಟಿಸ್ ಕಳುಹಿಸಲಾಗಿದೆ’ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಆಚಾರ್ಯ ಪ್ರಮೋದ್ ಕೃಷ್ಣಂ ಅವರ ವಕೀಲ ಉಜ್ವಲ್ ಆನಂದ್ ಶರ್ಮಾ ಅವರು ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಪಕರು, ನಿರ್ದೇಶಕ ಹಾಗೂ ನಟರಿಗೆ ಕಾನೂನಿನ ಪ್ರಕಾರ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ‘ಹುಚ್ಚು ಮನುಷ್ಯ’, ಅವರು ಕಾಂಗ್ರೆಸ್‌ನಲ್ಲಿ ಇರುವವರೆಗೂ ಕಾಂಗ್ರೆಸ್ ಅನ್ನು ಕಾಪಾಡಲು ಯಾರಿದಂಲೂ ಸಾಧ್ಯವಿಲ್ಲ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಿನ್ನೆಲೆ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.