ADVERTISEMENT

ಕಲ್ಕಿ ಕಂಡುಕೊಂಡ ಸತ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:15 IST
Last Updated 17 ಏಪ್ರಿಲ್ 2019, 14:15 IST
ಕಲ್ಕಿ ಕೊಚೆನ್‌ (ಚಿತ್ರ ಕೃಪೆ: ಟ್ವಿಟರ್)
ಕಲ್ಕಿ ಕೊಚೆನ್‌ (ಚಿತ್ರ ಕೃಪೆ: ಟ್ವಿಟರ್)   

ಹಿಂದಿಯಿಂದ ತಮಿಳಿಗೆ ವಲಸೆ ಬಂದಿದ್ದಾರೆ ನಟಿ ಕಲ್ಕಿ ಕೊಚೆಲಿನ್‌. ಹಿರಿಯ ನಟ ಅಜಿತ್‌ ನಾಯಕನಟರಾಗಿರುವ ‘ನೇ್ಕೊಂಡ ಪಾರ್ವೈ’ ಚಿತ್ರದಲ್ಲಿ ಕಲ್ಕಿಗೆ ಸಣ್ಣದೊಂದು ಪಾತ್ರ ಸಿಕ್ಕಿದೆ. ಬಾಲಿವುಡ್‌ನಿಂದ ಕಾಲಿವುಡ್‌ಗೆ ಪಾದ ವಿಸ್ತರಿಸಿಕೊಳ್ಳಲು ಇಷ್ಟು ಸಾಕು ಎಂದು ಅವರು ಸಮಾಧಾನಪಟ್ಟುಕೊಂಡಿದ್ದಾರೆ.

ಕಲ್ಕಿ ಈ ಚಿತ್ರದ ಒಂದು ಹಾಡಿನಲ್ಲಿ ಬಂದು ಹೋಗುತ್ತಾರೆ ಅಷ್ಟೇ. ಆದರೆ ಅದು ಕಲ್ಕಿಯ ಕಾಲಿವುಡ್‌ ಎಂಟ್ರಿಗೆ ನಿರ್ಮಿಸಿದ ವೇದಿಕೆ ಎಂಬುದು ಗಮನಾರ್ಹ ಸಂಗತಿ.

ಕಲ್ಕಿ, ವೃತ್ತಿಪರತೆಯಿಂದ ಯಾವಾಗಲೂ ಗಮನ ಸೆಳೆಯುತ್ತಾರೆ. ಆದರೆ ಈಗ ಅವರಿಗೊಂದು ಜ್ಞಾನೋದಯವಾಗಿದೆ. ಮೊಬೈಲ್‌ ಮಾಯೆಯಿಂದ ದೂರವಿದ್ದರೆ ಇನ್ನಷ್ಟು ಕ್ರಿಯೇಟಿವ್‌ ಆಗಿ ಕೆಲಸ ಮಾಡಬಹುದು!

ADVERTISEMENT

ಮೊಬೈಲ್ ಮಾಯೆ ಅವರ ಗಮನ ಸೆಳೆದದ್ದು ‘ಎಮ್ಮಾ ಆ್ಯಂಡ್‌ ಏಂಜೆಲ್‌’ ಎಂಬ ಇಂಗ್ಲಿಷ್‌ ಚಿತ್ರದಲ್ಲಿ ನಟಿಸಿದ ಬಳಿಕವಂತೆ. ಮಾತು ಬಾರದ ಬರಹಗಾರ್ತಿಯ ಪಾತ್ರ ಕಲ್ಕಿ ಅವರದು. ಚಿತ್ರದಲ್ಲಿ ಅವರ ಸಂಗಾತಿ ಒಂದು ನಾಯಿ! ಮಾತು ಬಾರದ ಕಾರಣ ನಾಯಿಯೊಂದಿಗೆ ಸಂವಹನಕ್ಕೆ ಸಂಜ್ಞೆಗಳ ಮೊರೆಹೋಗಬೇಕಿತ್ತು. ಮಾತಿಲ್ಲದೆಯೂ ಅತ್ಯಂತ ಪರಿಣಾಮಕಾರಿಯಾಗಿ ಸಂವಹನ, ಸಂಪರ್ಕ ಸಾಧ್ಯ ಎಂಬ ಸತ್ಯ ಅವರಿಗೆ ಆಗ ಅರ್ಥವಾಯಿತಂತೆ!

ಕಲ್ಕಿ, ಪ್ರಸ್ತುತ ಸುದ್ದಿಯಲ್ಲಿರುವುದು ಅವರು ಮಾಡುತ್ತಿರುವ ‘ಮೇಡ್‌ ಇನ್‌ ಹೆವನ್‌’ ವೆಬ್‌ ಸರಣಿಯ ಕಾರಣಕ್ಕೆ. ‘ದೇವ್‌ ಡಿ’ ಮೂಲಕ ಹಿಂದಿ ಚಿತ್ರರಂಗಕ್ಕೆ 2011ರಲ್ಲಿ ಕಾಲಿಟ್ಟ ಕಲ್ಕಿಗೆ ನಿರೀಕ್ಷೆಯಂತೆ ಆಫರ್‌ಗಳು ಸಿಗಲಿಲ್ಲ. ಮಧ್ಯೆ ನಿರ್ದೇಶಕ ಅನುರಾಗ್‌ ಕಶ್ಯಪ್‌ ಜತೆ ಮದುವೆಯೂ ಆಯಿತು ವಿಚ್ಛೇದನವೂ ಆಯಿತು. ವಿವಾಹ ವಿಚ್ಛೇದನದ ಬಳಿಕ ವೃತ್ತಿರಂಗದಲ್ಲಿ ಸಾಕಷ್ಟು ಅವಹೇಳನಗಳನ್ನು ಅನುಭವಿಸಬೇಕಾಯಿತು. ನೇರ ಮತ್ತು ನಿಷ್ಠುರ ನಡೆ ನುಡಿಯಿಂದ ಬಿ ಟೌನ್‌ನಲ್ಲಿ ಆಗೀಗ ಸುದ್ದಿಯಾಗುತ್ತಿದ್ದ ಕಲ್ಕಿ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಇತರ ನಟಿಯರಿಗಿಂತ ಭಿನ್ನವಾಗಿ ಅಭಿವ್ಯಕ್ತಿಗೊಂಡವರು. ಅಸಹಜವಾದ ಬಿಳಿ ಬಣ್ಣದಿಂದಾಗಿ ಸಣ್ಣ ವಯಸ್ಸಿನಿಂದಲೂ ಕಲ್ಕಿ ‘ಬಾಡಿ ಶೇಮಿಂಗ್‌’ ಎದುರಿಸಬೇಕಾಗಿ ಬಂದಿತ್ತಂತೆ.

ಹೀಗೆ, ಹಳೆಯ ನೋವುಗಳು ಧುತ್ತನೆ ಎದುರು ನಿಂತಾಗ ಅವರು ನೆನಪಿಸಿಕೊಳ್ಳುವುದು ‘ಎಮ್ಮಾ....’ ಚಿತ್ರದಲ್ಲಿನ ನಾಯಿಯೊಂದಿಗಿನ ಮೌನ ಸಂಭಾಷಣೆಯನ್ನು! ಮಾತಿಲ್ಲದ, ಮೊಬೈಲ್‌ ಫೋನ್‌ ಇಲ್ಲದ ಗಳಿಗೆಗಳು ಧ್ಯಾನದಂತಿರುತ್ತವೆ ಎಂಬುದು ಅವರ ವಿಶ್ಲೇಷಣೆ. ಅಂದ ಹಾಗೆ ‘ಎಮ್ಮಾ...’ ನಿರ್ದೇಶಿಸಿದವರು ತಮಿಳಿನ ನಿರ್ದೇಶಕ ಆರ್.ಅರವಿಂದ್‌.

‘ಎಮ್ಮಾ ಆ್ಯಂಡ್ ಏಂಜೆಲ್‌’ ಚಿತ್ರೀಕರಣ ಈಗಷ್ಟೇ ಮುಗಿಸಿಬಂದಿರುವ ಕಲ್ಕಿ ತಮಿಳಿನ ಹಾಡಿನ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ ತೆರೆಕಂಡ ಸೂಪರ್‌ ಹಿಟ್‌ ಚಿತ್ರ ‘ಗಲ್ಲಿ ಬಾಯ್‌’ನಲ್ಲಿ ಕಲ್ಕಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.