ನಟಿ ಕಲ್ಕಿ ಕೊಚ್ಲಿನ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ ಮತ್ತು ಎನ್‌ಡಿಟಿವಿ ಸೇರಿ ಹಲವು ಜಾಲತಾಣಗಳು ವರದಿ ಮಾಡಿವೆ. #notesfromapregnantdiary ಮೂಲಕ ತಾಯಿಯಾಗುವ ನಿರೀಕ್ಷೆ ಹಂಚಿಕೊಳ್ಳುತ್ತಿದ್ದಕಲ್ಕಿ ಕೊಯ್ಲಿನ್ಅಥವಾ ಆಕೆಯ ಬಾಯ್‌ಫ್ರೆಂಡ್ ಗಯ್ ಹರ್ಷ್‌ಬರ್ಗ್ ಏನನ್ನೂ ಹೇಳಿಲ್ಲ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕಲ್ಕಿ ಕೊಯ್ಲಿನ್ ತಾನು ಗರ್ಭವತಿಯಾಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಸಾಕಷ್ಟು ಚಿತ್ರಗಳನ್ನೂ ಪೋಸ್ಟ್ ಮಾಡಿದ್ದರು. ನೀರಿನಲ್ಲಿ ಮಗುವಿಗೆ ಜನ್ಮ ನೀಡುವ ವಿಧಾನ (ವಾಟರ್ ಬರ್ತ್ ಮೆಥಡ್) ಆರಿಸಿಕೊಂಡಿದ್ದೇನೆ ಎಂದು ಧೈರ್ಯವಾಗಿ ಘೋಷಿಸಿಕೊಂಡಿದ್ದರು.
ಕಳೆದ ವಾರವಷ್ಟೇ ಬರೆದುಕೊಂಡಿದ್ದ ಪೋಸ್ಟ್‌ನಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ತಾಯಿ ಮನಸ್ಸಿನ ಭಾವನೆಗಳನ್ನು ಕಲ್ಕಿಮುಕ್ತವಾಗಿ ಹಂಚಿಕೊಂಡಿದ್ದರು. #notesfromapregnantdiary ಹ್ಯಾಷ್‌ಟ್ಯಾಗ್‌ನೊಂದಿಗೆ ಪೋಸ್ಟ್ ಆಗುತ್ತಿದ್ದ ಚಿತ್ರ ಮತ್ತು ಬರಹಗಳು ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತ್ತು.
‘ನಿರೀಕ್ಷೆಯೆಂಬುದು ಬಲೂನಿಂತೆ ಊದಿಕೊಂಡಿದೆ. ಪ್ರಸೂತಿಯ ಮಾಹಿತಿ ರಾಶಿ ಬೀಳುತ್ತಿದೆ. ಈಗಾಗಲೇ ತಾಯಂದಿರಾದವರು ಕೊಡುವ ಅಂತ್ಯವಿಲ್ಲದ ಸಲಹೆಗಳು, ವಾಟ್ಸ್ಯಾಪ್ ತಂದು ಎಸೆಯುವ ಅಗಾಧ ವಿಷಯಗಳ ನಡುವೆ ನಾನು ನನ್ನದೇ ಕಥೆಗಾಗಿ ಕಾಯುತ್ತಿದ್ದೇನೆ. ಅದನ್ನು ಈವರೆಗೆ ಯಾರೂ ಹೇಳಿರಲು ಸಾಧ್ಯವಿಲ್ಲ’ ಎಂದು ಕಲ್ಕಿಹೇಳಿಕೊಂಡಿದ್ದರು.
ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಈ ಹಿಂದೆ ಕಲ್ಕಿ ಮದುವೆಯಾಗಿದ್ದರು. 2015ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು.
2009ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಚಿತ್ರ ಡೇವ್ ಡಿ ಮೂಲಕ ಚಿತ್ರರಂಗಕ್ಕೆ ಬಂದ ಕಲ್ಕಿ ಮಾರ್ಗರಿಟಾ ವಿತ್ ಎ ಸ್ಟ್ರಾ, ಯೆ ಜವಾನಿ ಹೈ ದಿವಾನಿ, ಜಿಂದಗಿ ನ ಮಿಲೇಗಿ ದುಬಾರಾ, ಶೈತಾನ್ ಮತ್ತು ದಟ್ ಗರ್ಲ್ ಇನ್ ಯೆಲ್ಲೊ ಬೂಟ್ಸ್ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ಹೆವೆನ್ ವೆಬ್ ಸೀರೀಸ್ ಮತ್ತು ನೆಟ್‌ಫ್ಲಿಕ್ಸ್‌ನ ಸೇಕ್ರೆಡ್ ಗೇಮ್ಸ್–2 ಸರಣಿಗಳಲ್ಲಿ ಅಭಿನಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.