ADVERTISEMENT

‘ಕನಕಪುರ ಬಂಡೆ’ ‘ಕನಕಪುರ ಟು ಬೆಳಗಾಂ ಎಕ್ಸ್‌ಪ್ರೆಸ್‌’ ಹೆಸರಿನಲ್ಲಿ ಸಿನಿಮಾ!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 4:01 IST
Last Updated 25 ಸೆಪ್ಟೆಂಬರ್ 2019, 4:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕನಕಪುರ ಬಂಡೆ’ ಶೀರ್ಷಿಕೆಯನ್ನು ತಮಗೆ ಸಿನಿಮಾ ಮಾಡಲು ಕೊಡಬೇಕು ಎಂದು ವಕೀಲ ಎನ್.ಪಿ. ಅಮೃತೇಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.

‘ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕಳಕಳಿ ಇರುವ ಸಿನಿಮಾ ಮಾಡುತ್ತಿದ್ದೇವೆ. ಅದಕ್ಕೆ ಈ ಶೀರ್ಷಿಕೆ ಬೇಕು’ ಎಂದು ಅವರು ಮಂಡಳಿಯನ್ನು ಬುಧವಾರ ಕೋರಿದ್ದಾರೆ. ‘ಇದರಲ್ಲಿ ಮೂರು ಕಥೆಗಳು ಇರಲಿವೆ. ಯಾವುದೇ ವ್ಯಕ್ತಿಯನ್ನು ಕೇಂದ್ರೀಕರಿಸಿಕೊಂಡು ಸಿನಿಮಾ ಮಾಡುತ್ತಿಲ್ಲ’ ಎಂದು ಅಮೃತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಚಿತ್ರವನ್ನು ಎನ್. ನಾಗೇಶ್ ಎನ್ನುವವರು ನಿರ್ದೇಶಿಸಲಿದ್ದಾರೆ. ಅಮೃತೇಶ್ ಮತ್ತು ಕುಮಾರಿ ರಮ್ಯಾ ಎನ್ನುವವರು ಚಿತ್ರ ನಿರ್ಮಾಣಕ್ಕೆ ಹಣ ಹೂಡಲಿದ್ದಾರೆ. ‘ಶೀರ್ಷಿಕೆಯನ್ನು ಅಮೃತೇಶ್ ಅವರಿಗೆ ಇನ್ನೂ ನೀಡಿಲ್ಲ’ ಎಂದು ವಾಣಿಜ್ಯ ಮಂಡಳಿ ಮೂಲಗಳು ತಿಳಿಸಿವೆ.

ADVERTISEMENT

ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ವಶಕ್ಕೆ ಪಡೆದ ನಂತರ, ಕನ್ನಡದ ಹಲವು ವಿದ್ಯುನ್ಮಾನ ವಾಹಿನಿಗಳು ಶಿವಕುಮಾರ್ ಅವರ ಕುರಿತು ‘ಕನಕಪುರ ಬಂಡೆ’ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿವೆ.

ಅಮೃತೇಶ್ ಅವರು ‘ಕನಕಪುರ ಟು ಬೆಳಗಾಂ ಎಕ್ಸ್‌ಪ್ರೆಸ್‌’ ಹಾಗೂ ‘ಕನಕಪುರ ಕೆಂಪೇಗೌಡ’ ಎಂಬ ಶೀರ್ಷಿಕೆಗಳನ್ನೂ ಕೇಳಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.