ADVERTISEMENT

ಮೆಟ್ರೊ ಘೋಷಣೆಯ ಹಿಂದಿನ ಶಾರೀರದ ಶರೀರ ಇನ್ನು ನೆನಪು ಮಾತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2024, 18:54 IST
Last Updated 11 ಜುಲೈ 2024, 18:54 IST
ಅಪರ್ಣಾ
ಅಪರ್ಣಾ   

ಬೆಂಗಳೂರು: ‘ಮುಂದಿನ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ.., ಬಾಗಿಲುಗಳು ಎಡಕ್ಕೆ ತೆರೆಯುತ್ತವೆ’ ಮೆಟ್ರೊದಲ್ಲಿ ಪ್ರಯಾಣಿಸುವವರಿಗೆ ಚಿರಪರಿಚಿತ ಧ್ವನಿಯಿದು. 

ಗುರುವಾರ ರಾತ್ರಿ ಈ ಧ್ವನಿ ಮೆಟ್ರೋದಲ್ಲಿ ಮೊಳಗುತ್ತಲೇ ಇತ್ತು. ಆದರೆ ಆ ಶಾರೀರದ ಹಿಂದಿನ ಶರೀರವನ್ನು ಮಾತ್ರ ಅಪರ್ಣಾ ತೊರೆದಿದ್ದರು. ಕಲಾವಿದೆಯಾಗಿ, ನಿರೂಪಕಿಯಾಗಿ ಮನೆಮಾತಾಗಿದ್ದ ಅಪರ್ಣಾ ಇನ್ನು ನೆನಪು ಮಾತ್ರ.

ದೀರ್ಘಕಾಲದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್‌ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್‌ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. 

ಅಚ್ಚ ಕನ್ನಡದ ನಿರೂಪಕಿ ಎಂದೇ ಹೆಸರಾಗಿದ್ದ ಅಪರ್ಣಾ ವಸ್ತಾರೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ನಿರೂಪಕಿ ಕಾಣಿಸಿಕೊಂಡಿದ್ದರು. ನಿರೂಪಕಿಯಾಗಿ ಸರಿಸುಮಾರು ಮೂರು ದಶಕಗಳನ್ನು ಪೂರೈಸಿರುವ ಅಪರ್ಣಾ ನಟಿಯಾಗಿಯೂ ಕನ್ನಡಿಗರಿಗೆ ಚಿರಪರಿಚಿತರು.

ಮುಕ್ತ–ಮುಕ್ತ, ಮೂಡಲಮನೆ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಇವರು, ಮಸಣದ ಹೂವು ಚಿತ್ರದ ಮೂಲಕ ಬೆಳ್ಳಿ ತರೆಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ 28ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಪರ್ಣಾ ಬಣ್ಣ ಹಚ್ಚಿದ್ದರು. 

ಗಂಭೀರ ನಿರೂಪಕಿಯಾಗಿದ್ದ ಅಪರ್ಣಾ ಅವರ ಹೊಸ ಮುಖ ತೆರೆದುಕೊಂಡಿದ್ದು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್‌ ಮೂಲಕ. ವರಲಕ್ಷ್ಮಿ ಪಾತ್ರದಲ್ಲಿ ಹಾಸ್ಯ ಭರಿತವಾಗಿ ನಟಿಸಿ ಕನ್ನಡದ ಮನಸ್ಸುಗಳಿಗೆ ಕಚಗುಳಿ ಇಟ್ಟಿದ್ದರು.

ಇನ್ನು ಬೆಂಗಳೂರಿಗರಿಗೆ ಅದರಲ್ಲೂ ಮೆಟ್ರೊ ಪ್ರಯಾಣಿಕರಿಗೆ ಅಪರ್ಣಾ ಧ್ವನಿ ದಿನನಿತ್ಯದ ಆಲಾಪ. 2011ರಲ್ಲಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಮೆಟ್ರೊ ರೈಲಿನ ಪ್ರಕಟಣೆಗಳಲ್ಲಿ ಕೇಳಿಸುವುದು ಅಪರ್ಣಾ ಧ್ವನಿ. ಮೆಟ್ರೊ ಹತ್ತುವ, ಇಳಿಯುವ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡುವ ಘೋಷಣೆಗಳು ಕೇಳಿಬರುತ್ತಿದ್ದುದು ಅಪರ್ಣಾ ಅವರದ್ದೇ. ಆದರೆ ಇಂದು ಆ ಮಧುರ ಧ್ವನಿ ಹೊತ್ತ ಶರೀರ ಇಹಲೋಕ ತ್ಯಜಿಸಿದೆ. ಕೇಳುಗರಿಗೆ ಆಲಾಪ ಮಾತ್ರ ಶಾಶ್ವತವಾಗಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.