ನವದೆಹಲಿ: ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಯ ಹೊತ್ತಲ್ಲೇ ‘ಭಾರತ ಭಾಗ್ಯ ವಿಧಾತ’ ಎಂಬ ಹೊಸ ಚಿತ್ರವನ್ನು ಬಾಲಿವುಡ್ ನಟಿ, ಮಂಡಿ ಲೋಕಸಭೆ ಸಂಸದೆ ಕಂಗನಾ ರನೌತ್ ಘೋಷಿಸಿದ್ದಾರೆ.
ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಮನೋಜ್ ತಪಾಡಿಯಾ ಅವರು, ತೆರೆಮರೆಯ ಕಾರ್ಮಿಕರ ಸಾಹಸಮಯ ಜೀವನದ ಕಥೆಯನ್ನು ದೊಡ್ಡ ಪರದೆಯ ಮೇಲೆ ತರಲು ಯೋಚಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಂಗನಾ, ‘ಭಾರತ ಭಾಗ್ಯ ವಿಧಾತ’ ಚಿತ್ರದಲ್ಲಿ ತೆರೆಮರೆಯ ಹಿಂದೆ ಶ್ರಮಿಸುವ ನಿಜವಾದ ಹೀರೊಗಳ ಸಾಹಸಮಯ ಜೀವನ, ಅವರ ಧೈರ್ಯ, ಅಚಲವಾದ ನಂಬಿಕೆ ಕುರಿತ ನೈಜ ಚಿತ್ರಣವನ್ನು ಸಿನಿಮಾದಲ್ಲಿ ನೋಡಲಿದ್ದೀರಿ ಎಂದು ಬರೆದುಕೊಂಡಿದ್ದಾರೆ.
‘ಭಾರತ ಭಾಗ್ಯ ವಿಧಾತ’ ಚಿತ್ರವನ್ನು ಯುನೋಯಾ ಫಿಲ್ಮ್ಸ್ ಮತ್ತು ಫ್ಲೋಟಿಂಗ್ ರಾಕ್ಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಲಿದೆ.
ಪ್ರೇಕ್ಷಕರಿಗೆ ವಿಭಿನ್ನ ಹಾಗೂ ನೈಜ ಚಿತ್ರಗಳನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ನಿರ್ಮಾಪಕ ಆದಿ ಆರ್ಮಾ ತಿಳಿಸಿದ್ಧಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತವಾದ 'ಎಮರ್ಜೆನ್ಸಿ'ಗೆ ಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ಕಂಗನಾ, ಇಂದಿರಾ ಅವರ ಪಾತ್ರವನ್ನೂ ನಿಭಾಯಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 6ರಂದು ತೆರೆಗೆ ಬರಲು ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.