ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರ ಇಂದು ತೆರೆಗೆ ಬಂದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ನಟಿ ಕಂಗನಾ ರನೌತ್ ಶಾರುಖ್ ಅಭಿನಯಕ್ಕೆ ಮಾರು ಹೋಗಿದ್ದು, ಅವರನ್ನು ‘ಸಿನಿಮಾ ದೇವರು’ ಎಂದು ಹೊಗಳಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ಜವಾನ್’ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
‘ತೊಂಬತ್ತರ ದಶಕದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡು ತಮ್ಮ ನಲವತ್ತು ಮತ್ತು ಐವತ್ತರ ವಯಸ್ಸಿನಲ್ಲಿಯೂ ಪ್ರೇಕ್ಷಕರಿಗೆ ಮನರಂಜನೆ ನೀಡಿ, ಇದೀಗ 60 ವಯಸ್ಸಿನಲ್ಲಿಯೂ ಮಾಸ್ ಸೂಪರ್ ಹೀರೋ ಆಗಿ ಪ್ರೇಕ್ಷಕರನ್ನು ರಂಜಿಸುವುದು ಸುಲಭದ ಮಾತಲ್ಲ’ ಎಂದು ಶಾರುಖ್ ಖಾನ್ ಅವರ ವೃತ್ತಿ ನಿಷ್ಠೆಯನ್ನು ಹೊಗಳಿದ್ದಾರೆ.
‘ಸಿನಿಮಾ ಆಯ್ಕೆ ಕುರಿತಂತೆ ಶಾರುಖ್ ಅವರನ್ನು ಅಪಹಾಸ್ಯ ಮಾಡುತ್ತಿದ್ದ ದಿನಗಳು ನನಗಿನ್ನೂ ನೆನಪಿದೆ. ಆದರೆ ಅವರ ಸಿನಿ ಹೋರಾಟ ಎಲ್ಲ ಕಲಾವಿದರಿಗೂ ಮಾದರಿಯಾಗಿದೆ. ಶಾರುಖ್ ಖಾನ್ ಚಿತ್ರರಂಗಕ್ಕೆ ಅಗತ್ಯವಿರುವ ಸಿನಿಮಾ ದೇವರು. ಕಿಂಗ್ ಖಾನ್ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಷ್ಟಾಂಗ ನಮಸ್ಕಾರಗಳು’ ಎಂದು ಹೇಳಿದ್ದಾರೆ.
ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ‘ಜವಾನ್’ ಬಿಡುಗಡೆಗೂ ಮುನ್ನವೇ ವಿಶ್ವದಾದ್ಯಂತ ₹51 ಕೋಟಿ ಗಳಿಸಿತ್ತು. ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತಮಿಳು ನಟಿ ನಯನತಾರಾ, ನಟ ವಿಜಯ್ ಸೇತುಪತಿ ಸೇರಿದಂತೆ ಪ್ರಮುಖ ನಟರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.