ಬೆಂಗಳೂರು: ಇತ್ತೀಚೆಗೆ ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಜಗ್ಗಿ ವಾಸುದೇವ್ ಅವರು ನವದೆಹಲಿಯ ಇಂದ್ರಪ್ರಸ್ಥದ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಈ ಬಗ್ಗೆ ದುಃಖ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು, ಸದ್ಗುರುವನ್ನು ಐಸಿಯು ಮೇಲೆ ನೋಡಿ ನನಗೆ ನಿಂತ ನೆಲವೇ ಕುಸಿದಂತಾಗಿತ್ತು. ಆಕಾಶ ಮೇಲೆ ಬಿದ್ದಂತಾಗಿತ್ತು, ಅವರನ್ನು ನೋಡಿ ನಂಬಲಸಾಧ್ಯವಾಗಿತ್ತು ಎಂದು ಹೇಳಿದ್ದಾರೆ.
ಅವರು ಎಕ್ಸ್ ಮಾಧ್ಯಮದಲ್ಲಿ ಸದ್ಗುರು ಬೇಗ ಚೇರಿಸಿಕೊಳ್ಳಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.
‘ನಾನು ಮೊದಲು ಅವರನ್ನು ನೋಡಿದಾಗ, ಅವರು ನಮ್ಮಂತೆ ರಕ್ತ, ಮಾಂಸ ತುಂಬಿದ ದೇಹ ಹೊಂದಿರುವ ಮನುಷ್ಯ ಅಲ್ಲ ಎಂದುಕೊಂಡಿದ್ದೆ’ ಎಂದಿದ್ದಾರೆ. ‘ಶಸ್ತ್ರಚಿಕಿತ್ಸೆ ನಂತರ ಅವರನ್ನು ನೋಡಿ ನಾನು ದೇವರೇ ಕುಸಿದು ಬಿದ್ದಿದ್ದಾನೆ ಎಂದು ನನಗೆ ತೋರಿತು. ಅವರು ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆಂದು ನಾನು ಭಾವಿಸಿದ್ದೇನೆ’ ಎಂದು ಹೇಳಿದ್ದಾರೆ.
ಮಿದುಳಿನ ಹೊರ ಸ್ನಾಯುವಿನಲ್ಲಿ ರಕ್ತ ಸಂಗ್ರಹಗೊಂಡಿದ್ದರಿಂದಾಗಿ ಬಳಲುತ್ತಿದ್ದ ಸದ್ಗುರು ಅವರಿಗೆ ಮಾರ್ಚ್ 17ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಈಚೆಗೆ 4 ವಾರಗಳಿಂದ ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ನೋವಿನಲ್ಲೂ ಅವರು ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮಾರ್ಚ್ 8ರ ಮಹಾಶಿವರಾತ್ರಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು.
ತಲೆನೋವು ಮತ್ತಷ್ಟು ತೀವ್ರಗೊಂಡಾಗ ಮಾರ್ಚ್ 15ರಂದು ಹಿರಿಯ ನರರೋಗ ತಜ್ಞ ಡಾ. ವಿನಿತ್ ಸೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಕೂಡಲೇ ವೈದ್ಯರು ಎಂಆರ್‌ಐ ಮಾಡಿ ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.