ಕೊರೊನಾದಿಂದ ಗುಣಮುಖರಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು, ಸೋಂಕು ತಗುಲಿದ ಸಂದರ್ಭದಲ್ಲಿ ತಮ್ಮ ಸುತ್ತ ಆವರಿಸಿದ್ದ ನಕಾರಾತ್ಮಕತೆ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ನನ್ನ ವಿರುದ್ಧ ತಪ್ಪು ಮಾಹಿತಿ ಹರಡಲಾಗಿತ್ತು. ಪ್ರಯಾಣದ ಇತಿಹಾಸದ ಬಗ್ಗೆಯೂ ವದಂತಿಗಳನ್ನು ಹರಡಲಾಗಿತ್ತು. ಆದರೆ ಸತ್ಯ ಒಂದಲ್ಲ ಒಂದು ದಿನ ಬಹಿರಂಗವಾಗಲಿದೆ ಎಂದು ನಂಬಿದ್ದೆ’ ಎಂದು ಅವರು ಹೇಳಿದ್ದಾರೆ. ಜತೆಗೆ, ಕೊರನಾ ಬಗ್ಗೆ ನಿರ್ಲಕ್ಷ್ಯ ವಹಿಸಿ ಪಾರ್ಟಿ ಮಾಡಿದ್ದಾರೆ, ಪ್ರಯಾಣದ ಮಾಹಿತಿ ನೀಡಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಕುರಿತು ಹಲವು ಕಥೆಗಳು ಸೃಷ್ಟಿಯಾಗಿರುವುದು ನನಗೆ ತಿಳಿದಿದೆ. ಕೆಲವೊಂದಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಸೇರಿಸಿ ವದಂತಿ ಹರಡಲಾಗಿತ್ತು. ನಾನು ಮೌನವಾಗಿದ್ದುದೇ ಇದಕ್ಕೆ ಕಾರಣ ಎಂಬುದು ನನಗೆ ತಿಳಿದಿದೆ. ನಾನು ತಪ್ಪು ಮಾಡಿದ್ದೇನೆ ಎಂಬ ಕಾರಣಕ್ಕೆ ನಾನು ಮೌನವಾಗಿದ್ದುದಲ್ಲ. . ಸತ್ಯ ಒಂದಲ್ಲ ಒಂದು ದಿನ ಹೊರಬಲಿದೆ ಎಂದು ನಂಬಿದ್ದೆ. ಸಂಕಷ್ಟದ ಸಂದರ್ಭದಲ್ಲಿ ಜತೆಗಿದ್ದ ಕುಟುಂಬದವರು, ಸ್ನೇಹಿತರು ಎಲ್ಲರಿಗೂ ಧನ್ಯವಾದಗಳು. ಇಂತಹ ಸಂದರ್ಭದಲ್ಲಿ ನೀವೆಲ್ಲರೂ ಸುರಕ್ಷಿತರಾಗಿದ್ದೀರಿ ಎಂದು ನಾನು ಆಶಿಸುತ್ತೇನೆ ಮತ್ತು ಅದಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಅವರು ಬರೆದಿದ್ದಾರೆ.
‘ಬ್ರಿಟನ್‌ನಿಂದ ಮಾರ್ಚ್ 10ರಂದು ವಾಪಸಾದ ಬಳಿಕ ಮುಂಬೈಯಲ್ಲಿ ಮತ್ತು ಲಖನೌನಲ್ಲಿ ದೇಶಿ ಪ್ರಯಾಣಕ್ಕೆ ಸ್ಕ್ರೀನಿಂಗ್ ಇರಲಿಲ್ಲ. ಯಾವುದೇ ಪಾರ್ಟಿಯನ್ನೂ ನಾನು ಆಯೋಜಿಸಿಲ್ಲ. ಮಾರ್ಚ್ 14 ಮತ್ತು 15ರಂದು ಸ್ನೇಹಿತರು ಕರೆದಿರುವ ಕಾರಣ ಅವರ ಜತೆ ಊಟಕ್ಕೆ ತೆರಳಿದ್ದೆ’ ಎಂದು ಕನಿಕಾ ಸ್ಪಷ್ಟಪಡಿಸಿದ್ದಾರೆ.
‘ಲಖನೌನಲ್ಲಿ ತಂದೆ–ತಾಯಿ ಜತೆ ಇದ್ದೇನೆ. ಬ್ರಿಟನ್, ಮುಂಬೈ ಅಥವಾ ಲಖನೌನಲ್ಲಿ ನನ್ನ ಸಂಪರ್ಕದಲ್ಲಿದ್ದ ಯಾವೊಬ್ಬ ವ್ಯಕ್ತಿಗೂ ಕೊರೊನಾ ಲಕ್ಷಣಗಳಿರಲಿಲ್ಲ. ಅವರೆಲ್ಲ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರೇ ಆಗಿದ್ದಾರೆ.
ಬ್ರಿಟನ್‌ನಿಂದ ಮಾರ್ಚ್ 10ರಂದು ವಾಪಸಾದಾಗ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ಗೆ ಒಳಪಟ್ಟಿದ್ದೆ.
‘ಆ ಸಂದರ್ಭದಲ್ಲಿ ಕೊರೊನಾ ಕ್ವಾರಂಟೈನ್‌ಗೆ ಒಳಗಾಗುವುದಕ್ಕೆ ಸಂಬಂಧಿಸಿ ಯಾವುದೇ ಮಾರ್ಗಸೂಚಿಯನ್ನು ಬ್ರಿಟನ್ ಬಿಡುಗಡೆ ಮಾಡಿರಲಿಲ್ಲ (ಮಾರ್ಚ್ 18ರಂದು ಬಿಡುಗಡೆಯಾಗಿತ್ತು). ಹೀಗಾಗಿ ನನಗೆ ಯಾವುದೇ ಅನಾರೋಗ್ಯದ ಲಕ್ಷಣ ಇಲ್ಲದ್ದರಿಂದ ಕ್ವಾರಂಟೈನ್ ಆಗಿರಲಿಲ್ಲ. ಕುಟುಂಬದವರನ್ನು ಭೇಟಿಯಾಗುವುದಕ್ಕಾಗಿ ಮಾರ್ಚ್ 11ರಂದು ಲಖನೌಗೆ ತೆರಳಿದೆ. ಬಳಿಕ 14 ಮತ್ತು 15ರಂದು ಸ್ನೇಹಿತರ ಜತೆ ಊಟಕ್ಕೆ ತೆರಳಿದ್ದೆ. ನಾನು ಯಾವುದೇ ಪಾರ್ಟಿ ಆಯೋಜಿಸಿಲ್ಲ. ಮಾರ್ಚ್ 17 ಮತ್ತು 18ರಂದು ನನ್ನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವು. ಹಾಗಾಗಿ ಆಗ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟೆ. ಮಾರ್ಚ್ 20ರಂದು ಸೋಂಕು ದೃಢಪಟ್ಟಿತ್ತು’ ಎಂದು ಕನಿಕಾ ಉಲ್ಲೇಖಿಸಿದ್ದಾರೆ.
ಮೂರು ಬಾರಿ ಕೊರೊನಾ ಪರೀಕ್ಷಾ ವರದಿ ನೆಗಟಿವ್ ಬಂದಿರುವ ಬಗ್ಗೆಯೂ ಉಲ್ಲೇಖಿಸಿರುವ ಅವರು, ಕೊರೊನಾಗೆ ಚಿಕಿತ್ಸೆ ನೀಡಿದ, ಆರೈಕೆ ಮಾಡಿದ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ‘ವೈದ್ಯರು, ದಾದಿಯರು ನನಗೆ ಮಾನಸಿಕವಾಗಿ ಧೈರ್ಯ ಹೇಳಿದ್ದಾರೆ. ಅವರೆಲ್ಲರಿಗೂ ವಿಶೇಷವಾಗಿ ಧನ್ಯವಾದಗಳು’ ಎಂದು ಅವರು ಉಲ್ಲೇಖಿಸಿದ್ದಾರೆ.
‘ಈ ವಿಚಾರಗಳನ್ನು ಎಲ್ಲರೂ ಪ್ರಾಮಾಣಿಕತೆಯಿಂದ ಗಮನಿಸಬಹುದು ಅಂದುಕೊಂಡಿದ್ದೇನೆ. ವ್ಯಕ್ತಿಯೊಬ್ಬರ ವಿರುದ್ಧ ಹರಡಿದ ವದಂತಿ, ತಪ್ಪು ಕಲ್ಪನೆಗಳು ವಾಸ್ತವವನ್ನು ಬದಲಾಯಿಸಲಾರದೆಂದು ಭಾವಿಸುತ್ತೇನೆ’ ಎಂದು ಅವರು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.