ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಸಾರುವಂತಹ ಕಥಾವಸ್ತು ಹೊಂದಿರುವ ‘ಕನ್ನಡ್ ಗೊತ್ತಿಲ್ಲ...!’ ಸಿನಿಮಾ ಇದೇ 15ರಂದು ತೆರೆ ಕಾಣಲಿದೆ.
ಮರ್ಡರ್ ಮಿಸ್ಟ್ರಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದು, ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿತು. ಡಿಫರೆಂಟ್ ಮ್ಯಾನರಿಸಂ, ಪಂಚಿಂಗ್ ಡೈಲಾಗ್‌ಗಳಿಂದಲೇ ಹರಿಪ್ರಿಯಾ ಗಮನ ಸೆಳೆಯುವಂತಿದ್ದು, ಟ್ರೈಲರ್ ಚಿತ್ರರಸಿಕರ ಕುತೂಹಲ ಕೆರಳಿಸುವಂತಿದೆ.
‘ಕನ್ನಡ್ ಗೊತ್ತಿಲ್ಲ ಎನ್ನುವವರ ಮೇಲೆ ನಿಜವಾದ ಸರ್ಜಿಕಲ್ ಸ್ಟ್ರೈಕ್ ಮಾಡಿದಂತಿದೆ.ಕನ್ನಡ ಕಲಿತೇ ತೀರು ಎನ್ನುವ ಸಂದೇಶ ನೀಡಲಿದೆ ಚಿತ್ರ’ ಎನ್ನುವ ಅಭಿಮಾನದಿಂದಲೇ ಮಾತು ಆರಂಭಿಸಿದರು ನಿರ್ಮಾಪಕ ಕುಮಾರ ಕಂಠೀರವ.
‘ನಾವು ಕನ್ನಡಿಗರು ಬೆಂಗಳೂರಿನಲ್ಲಿ ಅನ್ಯಭಾಷಿಗರ ನಡುವೆ ಕಳೆದು ಹೋಗಿದ್ದೇವೆ. ನಮ್ಮ ಸಂಸ್ಕೃತಿ, ನೆಲ, ಭಾಷೆ ಕೂಡ ನಮಗೆ ಮುಖ್ಯವೆನ್ನುವುದನ್ನು ಚಿತ್ರದ ಮೂಲಕ ಅರ್ಥಮಾಡಿಸುವ ಪ್ರಯತ್ನವಿದು. ಚಿತ್ರಮಂದಿರದಿಂದ ದೂರ ಉಳಿದಿರುವ ಹೆಣ್ಣುಮಕ್ಕಳನ್ನು ಮತ್ತೆ ಚಿತ್ರಮಂದಿರದತ್ತ ಸೆಳೆಯುವ ಉದ್ದೇಶ ಕೈಗೂಡಲೆನ್ನುವ ಆಶಯ ನಮ್ಮದು’ ಎನ್ನುವ ಮಾತು ಸೇರಿಸಿದರು ಕಂಠೀರವ.
ನಿರ್ದೇಶಕ ಮಯೂರ ರಾಘವೇಂದ್ರ, ನಾಯಕಿ ಪ್ರಧಾನಚಿತ್ರ ಮಾಡುವ ಕನಸು ಮೊದಲಿನಿಂದಲೂ ಇತ್ತು. ಅದು ಹರಿಪ್ರಿಯ ಅವರಿಂದ ನೆರವೇರಿತು. ಕನ್ನಡ್ ಗೊತ್ತಿಲ್ಲ ಎಂದು ತಾತ್ಸರದಿಂದ ಮಾತನಾಡುವವರಿಗೆ ಕನ್ನಡ ಕಲಿಯುವಂತೆಸಂದೇಶ ನೀಡಲು ಪರಿಣಾಮಕಾರಿ ಮಾಧ್ಯಮ ಸಿನಿಮಾ ಬಳಸಿಕೊಂಡಿದ್ದೇನೆ. ವಾಣಿಜ್ಯ ಮಂಡಳಿಯವರು ಚಿತ್ರದ ಟೈಟಲ್ ಕೇಳಿ ಮೊದಲು ಅನುಮತಿ ನೀಡಲು ನಿರಾಕರಿಸಿದರು. ನಂತರ ಕಥೆ ವಿವರಿಸಿದ ಮೇಲೆ ಮಂಡಳಿಯವರೇ ‘ಕಣಕಣದಲ್ಲೂ ಕನ್ನಡ’ ಸಬ್ ಟೈಟಲ್ ಇಡಲು ಸಲಹೆ ಕೊಟ್ಟರು. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ’ ಎಂದರು.
ನಾಯಕಿ ಹರಿಪ್ರಿಯ, ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ 6ನೇ ಸಿನಿಮಾ ಇದು. ಬೇರೆ ಬೇರೆ ಜಾನರ್ ಸಿನಿಮಾಗಳಲ್ಲಿ ನಟಿಸಿದ್ದೇನೆ. ಎಲ್ಲರಿಗೂ ಕನ್ನಡದ ಮೇಲೆ ಪ್ರೀತಿ ಹುಟ್ಟಸುವಂತಹ ಚಿತ್ರವಿದು. ಪ್ರೇಕ್ಷಕರನ್ನುಕುರ್ಚಿಯ ತುದಿಯಲ್ಲಿ ಕೂರಿಸಿಕೊಂಡು ನೋಡಿಸಿಕೊಳ್ಳಲಿದೆ ಎಂದರು.
ಚಿತ್ರದಲ್ಲಿ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿರುವ ಸುಧಾರಾಣಿ,ನನ್ನ ಪಾತ್ರ ಚಿಕ್ಕದಾಗಿದ್ದರೂ ತುಂಬಾ ಚೊಕ್ಕವಾಗಿದೆ. ವಿಭಿನ್ನವಾಗಿದೆ. ಪಾತ್ರಕ್ಕೆ ಸಾಕಷ್ಟು ಮಹತ್ವ ಇದೆ.ಟ್ರೈಲರ್ ಕೂಡ ತುಂಬಾ ಚೆನ್ನಾಗಿದೆ. ಚಿತ್ರ ಬಿಡುಗಡೆ ಎದುರು ನೋಡುತ್ತಿದ್ದೇನೆ ಎಂದರು.
ನಟ ರೋಹಿತ್, ‘ನನ್ನ ಪಾತ್ರವೂ ಚಿಕ್ಕದಾಗಿದ್ದರೂ ಇಡೀ ಚಿತ್ರಕ್ಕೆ ತಿರುವು ಕೊಡುವ ಪಾತ್ರ.ಕನ್ನಡ್ ಗೊತ್ತಿಲ್ಲ...! ಎನ್ನುವುದು ಬೆಂಗಳೂರಿನ ಇಂದಿನ ಸಮಸ್ಯೆ. ಛಾಯಾಗ್ರಾಹಕಗಿರಿಧರ್ ದಿವಾನ್ ಅವರು ನನ್ನನ್ನು ಅದ್ಭುತವಾಗಿ ತೋರಿಸಿದ್ದಾರೆ. ನಿರ್ದೇಶಕರಿಗೆ ಕನ್ನಡದ ಮೇಲಿರುವ ಲವ್ ಸ್ಟೋರಿಯ ಚಿತ್ರವಿದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮಿಡಿ ನಟ ಪವನ್,ಪೊಲೀಸ್ ಕಾನ್ಸ್‌ಟೆಬಲ್ ಪಾತ್ರ ನನ್ನದು. ಈ ಸಿನಿಮಾ ನೋಡಿದ ಮೇಲೆ ಕನ್ನಡ ಮಾತಾಡಲೇಬೇಕೆಂದು ಅನ್ಯ ಭಾಷಿಗರು ಬದಲಾಗುವುದು ಖರೆ. ಅಷ್ಟೊಂದು ಒಳ್ಳೆಯ ಕಥೆ ಇರುವ ಚಿತ್ರವಿದು ಎಂದರು.
ಈ ಚಿತ್ರಕ್ಕೆ ಗಿರಿಧರ್ ದಿವಾನ್ ಛಾಯಾಗ್ರಹಣ, ಸಂಕಲನ ಮಾಡಿದ್ದು,ನಕುಲ್ ಅಭ್ಯಂಕರ್ಸಂಗೀತ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.