ಭೂಗತಲೋಕದ ವ್ಯಕ್ತಿಗಳ ಪಾತ್ರಗಳನ್ನೇ ತಮ್ಮ ಸಿನಿ ಬದುಕಿನುದ್ದಕ್ಕೂ ಮಾಡುತ್ತಲೇ ಬಂದ ನಟ ಆದಿತ್ಯ ಅವರು ‘ಮುಂದುವರಿದ ಅಧ್ಯಾಯ’ದಲ್ಲಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಭಿನ್ನ ಪಾತ್ರದ ಪರಕಾಯ ಪ್ರವೇಶ ಮತ್ತು ಸಿನಿಬದುಕಿನ ಅನುಭವಗಳನ್ನು ಸಿನಿಮಾ ಪುರವಣಿ ಜೊತೆ ತೆರೆದಿಟ್ಟಿದ್ದಾರೆ.
*‘ಮುಂದುವರಿದ ಅಧ್ಯಾಯ’ ನಿಮ್ಮ ಪ್ರಕಾರ ಏನು?
ನನ್ನ ಸಿನಿಮಾ ಬದುಕಿನ ಮುಂದುವರಿದ ಅಧ್ಯಾಯವೇ ಈ ಚಿತ್ರ. ಚಿತ್ರದಲ್ಲಿ ನನ್ನದು ತನಿಖಾಧಿಕಾರಿಯ ಪಾತ್ರ. ಶಿವರಾತ್ರಿಯ ರಾತ್ರಿ ನಡೆಯುವ ಘಟನೆಯೊಂದರ ತನಿಖೆಗೆ ಬರುವ ಅಧಿಕಾರಿ ನಾನು. ಪ್ರಕರಣ ನಿಗೂಢವಾಗುತ್ತಾ ಹೋಗುತ್ತದೆ. ಅದೇನಾಗುತ್ತದೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.
*ಟ್ರೇಲರ್‌ನಲ್ಲಿ ಒಂದು ಸಣ್ಣ ಸುಳಿವು ಇದ್ದಂತಿದೆ?
ಸಾಮಾನ್ಯವಾಗಿ ನೋಡಿದಾಗ ಹಾಗನ್ನಿಸುತ್ತದೆ. ನೋಡಿ ಒಬ್ಬ ವ್ಯಕ್ತಿ ಸತ್ತ ಮೇಲೆ ಅವನು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡುತ್ತಾರೆ. ಮಾತ್ರ ಅಲ್ಲ. ಅದೇ ವ್ಯಕ್ತಿ ಕೆಟ್ಟ ಕೆಲಸ ಮಾಡಿ ಸತ್ತರೆ ಸತ್ತ ಮೇಲೂ ಜನ ಛೀಮಾರಿ ಹಾಕ್ತಾರೆ.
*ತನಿಖಾಧಿಕಾರಿಯ ಪರಕಾಯ ಪ್ರವೇಶ ಹೇಗಿತ್ತು?
ಇದರಲ್ಲಿ ವಾಸ್ತವವಾಗಿ ನಾನು ನಟಿಸಲೇ ಇಲ್ಲ. ತುಂಬಾ ಮೌನ ವಹಿಸುವ ಪಾತ್ರ. ಮಾತು ತುಂಬಾ ಕಡಿಮೆ. ನಾಯಕನ ವೈಭವೀಕರಣದ ಮಾತು ಇಲ್ಲ. ನಿರ್ದೇಶಕರು ಈ ಪಾತ್ರವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಾಮಾನ್ಯ ಪಾತ್ರ ಇದು. ತುಂಬಾ ಹೋಂ ವರ್ಕ್ ಮಾಡಬೇಕಾಗಿ ಬರಲಿಲ್ಲ.
* ಇದುವರೆಗೆ ಭೂಗತ ಲೋಕದ ಕಥೆಗಳಲ್ಲೇ ಕಾಣಿಸಿಕೊಂಡಿದ್ದಿರಿ. ತನಿಖಾಧಿಕಾರಿಯ ಪಾತ್ರಕ್ಕೆ ಹೇಗೆ ಒಗ್ಗಿಕೊಂಡಿರಿ?
ಈ ಕಾರಣಕ್ಕೇ ಈ ಪಾತ್ರ ಹಾಗೂ ಚಿತ್ರ ಒಪ್ಪಿಕೊಂಡದ್ದು. ಭೂಗತ ಜನರ ಕಥಾ ವಸ್ತುಗಳನ್ನು ಮಾಡಿ ಮಾಡಿ ಬೇಜಾರಾಗಿತ್ತು. ಅದಕ್ಕೆ ಸ್ವಲ್ಪ ಭಿನ್ನವಾದ ಪಾತ್ರ ಮಾಡಬೇಕು ಅನಿಸಿತು. ಹಾಗಾಗಿ ಮಾಡಿದ್ದೇನೆ.
*ಈ ಚಿತ್ರ ನಾಯಕ ಪ್ರಧಾನ ಅಂದಿದ್ದೀರಲ್ಲಾ...?
ಹೌದು, ಈ ಚಿತ್ರದಲ್ಲಿ ನಾಯಕಿಯೇ ಇಲ್ಲ. ಏಕೆಂದರೆ ಹೀರೋಯನ್ ಟ್ರ್ಯಾಕ್ ಬೇಕು ಅನಿಸಲೇ ಇಲ್ಲ. ಇದೊಂದು ಮರ್ಡರ್ ಮಿಸ್ಟರಿಯ ಕಥೆ. ನಾಯಕಿ ಬಂದಳು ಅಂದರೆ ಲವ್, ರೊಮ್ಯಾನ್ಸ್ ತರಬೇಕಾಗುತ್ತದೆ. ಅದು ಈ ಕಥೆಗೆ ಅಗತ್ಯ ಅನಿಸಲಿಲ್ಲ. ಹಾಗಾಗಿ ಚಿತ್ರದಲ್ಲಿ ನಾಯಕಿ ಇಲ್ಲ. ಇದರಲ್ಲಿ ನಾನೇ ಒಂಟಿ ಸಲಗ.
*17 ವರ್ಷಗಳ ಸಿನಿಪಯಣವನ್ನು ನೆನಪಿಸಿದರೆ ಏನನ್ನಿಸುತ್ತದೆ?
ನಾನು ಮಾಡಿರುವ ಸಿನಿಮಾಗಳೇ ಕಡಿಮೆ. ಆದರೂ ಪ್ರತಿಯೊಂದು ಸಿನಿಮಾದಿಂದಲೂ ಕಲಿತಿದ್ದೇನೆ. ನನಗೆ ಹಿರಿಯರೇ ನಿರ್ದೇಶಕರಾಗಿ ಸಿಕ್ಕಿದ್ದಾರೆ. ಸುಮನಾ ಕಿತ್ತೂರು, ಎಂ.ಎಸ್.ರಮೇಶ್, ರವಿ ಶ್ರೀವತ್ಸ ಮೂರೂ ಜನ ನನ್ನ ಸಿನಿಬದುಕಿನಲ್ಲಿ ಒಳ್ಳೊಳ್ಳೆಯ ಸಿನಿಮಾ ಕೊಟ್ಟಿದ್ದಾರೆ. ಉಳಿದವರು ಕೊಟ್ಟಿಲ್ಲ ಅಂತ ಅಲ್ಲ. ಈ ಮೂವರು ಕೊಟ್ಟ ಚಿತ್ರಗಳು ನನಗೆ ಒಳ್ಳೆಯ ಅವಕಾಶ, ಗುರುತು ಕೊಟ್ಟಿವೆ.
*ಸಿನಿಬದುಕಿನಲ್ಲಿ ತಂದೆ ರಾಜೇಂದ್ರ ಸಿಂಗ್ ಬಾಬು ಅವರ ಪ್ರಭಾವ ಎಷ್ಟು
ಅವರ ಅನುಭವ ದೊಡ್ಡದು. ಮಾರ್ಗದರ್ಶನ ಮಾಡುತ್ತಿರುತ್ತಾರೆ. ನಿರಂತರ ಮಾರ್ಗದರ್ಶನ ಬೇಕೇ ಬೇಕು ಅಲ್ವಾ.
*ಆತಂಕಕಾರಿ ಕಾಲಘಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ನಿಮ್ಮ ನಿರೀಕ್ಷೆ ಏನು?
ಸಿನಿಮಾ ಜನರಿಗೆ ಇಷ್ಟವಾಗುತ್ತದೆ. ಅನ್ನುವ ಭರವಸೆ ಖಂಡಿತ ಇದೆ. ಜನ ಸಿನಿಮಾ ಹಾಲ್‌ಗೆ ಬರುತ್ತಿದ್ದಾರೆ. ರಾಬರ್ಟ್ ಚಿತ್ರವೇ ಉದಾಹರಣೆಯಾಗಿ ನಿಂತಿದೆ. ಸಾಕಷ್ಟು ದಾಖಲೆಗಳನ್ನೂ ಮುರಿದಿದೆ. ಈ ಚಿತ್ರಕ್ಕೂ ಪ್ರೋತ್ಸಾಹ ಸಿಗಲಿದೆ ಎಂಬ ನಿರೀಕ್ಷೆ ಇದೆ.
*ಆದಿತ್ಯ ಅವರ ಇನ್ನು ಮುಂದುವರಿದ ಅಧ್ಯಾಯಗಳು ಯಾವುವು?
ಇದಾದ ಬಳಿಕ ಎಸ್. ನಾರಾಯಣ್ ಅವರ ಜೊತೆ ಬಹು ನಿರೀಕ್ಷೆಯ ಸಿನಿಮಾ ಮಾಡುತ್ತಿದ್ದೇನೆ. ಸಾಕಷ್ಟು ಹಿಂದೆಯೇ ಅವರ ಜೊತೆ ಚಿತ್ರಗಳಲ್ಲಿ ಮಾಡಬೇಕಿತ್ತು. ಈಗ ಕಾಲ ಕೂಡಿ ಬಂದಿದೆ. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಒಂದು ಚಿತ್ರ ಮಾಡುತ್ತಿದ್ದೇನೆ. ಅಲ್ಲಿಯೂ ಪೊಲೀಸ್ ಅಧಿಕಾರಿಯ ಪಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.