ಬೆಂಗಳೂರು: ನಟ ಚೇತನ್ ಅಹಿಂಸಾ ಅವರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡುವ ಮೂಲಕ ಚೇತನ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಗಾಂಧಿವಾದ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಗಾಂಧೀಜಿಯವರ ‘ಧಾರ್ಮಿಕ ಸಾಮರಸ್ಯ’ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ ಎಂದು ಗುಡುಗಿದ್ದಾರೆ.
‘ಖಾಸಗಿಯಾಗಿ, ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ. ಸಾರ್ವಜನಿಕವಾಗಿ, ನಾವು ಜಾತ್ಯತೀತ ರಾಷ್ಟ್ರ –ಅಂದರೆ ಧರ್ಮದಿಂದ ದೂರ ಉಳಿಯುವುದಾಗಿದೆ. ‘ಧಾರ್ಮಿಕ ಸಾಮರಸ್ಯ’ ಎಂದರೆ ಅಸಮಾನತೆಯ ಸಂರಕ್ಷಣೆ. ಇದರಿಂದಾಗಿ ಗಾಂಧಿವಾದವನ್ನು ಕಿತ್ತೊಗೆಯಬೇಕು’ ಎಂದು ಚೇತನ್ ಬರದುಕೊಂಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ವಿ.ಡಿ ಸಾವರ್ಕರ್ ಜೊತೆಗೆ ಮಹಾತ್ಮಾ ಗಾಂಧೀಜಿ ಫೋಟೊವನ್ನು ತೆರವು ಮಾಡಬೇಕು ಎಂದು ಈಚೆಗೆ ಚೇತನ್ ಹೇಳಿಕೆ ನೀಡಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ನಟ ಚೇತನ್, ಸಾವರ್ಕರ್ ಮತ್ತು ಗಾಂಧೀಜಿ ಇಬ್ಬರ ಫೋಟೊ ತೆಗೆಯಬೇಕು ಎಂದು ಹೇಳಿದ್ದರು. ಸುವರ್ಣ ಸೌಧದಿಂದ ಸಾವರ್ಕರ್ ಫೋಟೊ ತೆಗೆದರೆ ಸೂಕ್ತ. ಅದನ್ನು ನನಗೆ ಬಿಟ್ಟರೆ ಇವತ್ತೇ ತೆಗೆಯುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಬಹುದು. ನಮ್ಮಂತ ಸಮಾನತಾವಾದಿಗಳಿಗೆ, ಸಾವರ್ಕರ್ ಮತ್ತು ಗಾಂಧಿ ಇಬ್ಬರೂ ಸೈದ್ಧಾಂತಿಕ ಶತ್ರುಗಳು’ ಎಂದು ಚೇತನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.