ನಟ ಶಿವರಾಜ್‌ಕುಮಾರ್ ನಟನೆಯ ‘ಟಗರು’ ಸಿನಿಮಾದಲ್ಲಿ ‘ಡಾಲಿ’ ಪಾತ್ರದ ಮುಖಾಂತರ ಖಳನಟನಾಗಿ ಮಿಂಚಿದ್ದ ‘ನಟರಾಕ್ಷಸ’ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಟ ದುನಿಯಾ ವಿಜಯ್ ಅವರು ನಿರ್ದೇಶಿಸಿದ ‘ಸಲಗ’ ಸಿನಿಮಾದಲ್ಲಿ ‘ಸಾಮ್ರಾಟ್’ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದ ಧನಂಜಯ್, ಇದೀಗ ‘ಹೊಯ್ಸಳ’ ಎಂಬ ಚಿತ್ರದಲ್ಲಿ ಮತ್ತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಂಕ್ರಾಂತಿ ದಿನವೇ ಧನಂಜಯ್ ಅವರ 25ನೇ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿರುವ ಕೆಆರ್‌ಜಿ ಸ್ಟುಡಿಯೋಸ್, ತಮ್ಮ ಎರಡನೇ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದೆ.
ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಸ್ಸು ಗೆದ್ದ ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಚಿತ್ರವನ್ನು ನಿರ್ಮಾಣ ಮಾಡಿದ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ‘ಗೀತಾ’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಎನ್ ಅವರು ಈ ಚಿತ್ರದ ನಿರ್ದೇಶಕರು.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್. ಎಸ್. ಥಮನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆಯನ್ನು ಬರೆಯಲಿದ್ದಾರೆ.
ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಜಿಲ್ಲೆಯ ಹಲವೆಡೆ ನಡೆಯಲಿದ್ದು, ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಇದಾಗಿದೆ ಎಂದಿದೆ ಚಿತ್ರತಂಡ. ಎಪ್ರಿಲ್‌ನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದಲ್ಲಿ ನಟಿಸಲಿರುವ ಎಲ್ಲ ಕಲಾವಿದರ ಆಯ್ಕೆಯನ್ನು ಚಿತ್ರ ನಿರ್ಮಾಣ ತಂಡ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಕಲಾವಿದರನ್ನು ಪರಿಚಯಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.
ಧನಂಜಯ್ ಅವರು ನಟಿಸಿದ್ದ ತೆಲುಗಿನ ‘ಪುಷ್ಪ’ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಬಡವ ರಾಸ್ಕಲ್’ ಚಿತ್ರಗಳು ಯಶಸ್ಸು ಕಂಡಿವೆ. ಇದರ ಬೆನ್ನಲ್ಲೇ 25ನೇ ಚಿತ್ರದ ಘೋಷಣೆಯಾಗಿದೆ. ಶಿವರಾಜ್‌ಕುಮಾರ್ ನಟನೆಯ ‘ಬೈರಾಗಿ’ ಚಿತ್ರದಲ್ಲೂ ಧನಂಜಯ್ ಅವರು ನಟಿಸಿದ್ದು, ಇದರ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಅಗ್ನಿ ಶ್ರೀಧರ್ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ‘ಹೆಡ್‌ಬುಷ್’–ದಿ ರೈಸ್ ಆ್ಯಂಡ್ ರೈಸ್ ಆಫ್ ಬೆಂಗಳೂರು ಅಂಡರ್‌ವರ್ಲ್ಡ್’ ಚಿತ್ರದಲ್ಲಿ ಬೆಂಗಳೂರಿನ ಮೊದಲ ಅಂಡರ್‌ವರ್ಲ್ಡ್ ಡಾನ್ ಎಂ.ಪಿ ಜಯರಾಜ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದು, ಇದರ ಚಿತ್ರೀಕರಣವೂ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.