ADVERTISEMENT

ದ್ವಾರಕೀಶ್‌ 80ರ ಹರೆಯಕ್ಕೆ ಕಾಲಿಟ್ಟಾಗ ಪ್ರಜಾವಾಣಿ ಜತೆ ತೆರೆದಿಟ್ಟ ನೆನಪುಗಳ ರೀಲು

ಶರತ್‌ ಹೆಗ್ಡೆ
Published 16 ಏಪ್ರಿಲ್ 2024, 6:58 IST
Last Updated 16 ಏಪ್ರಿಲ್ 2024, 6:58 IST
ದ್ವಾರಕೀಶ್‌
ದ್ವಾರಕೀಶ್‌   

ಕನ್ನಡದ ಬೆಳ್ಳಿ ತೆರೆಯಲ್ಲಿ ಕಪ್ಪು ಬಿಳುಪು ಯುಗದಲ್ಲೇ ಹತ್ತಾರು ಹೊಸ ಪ್ರಯೋಗಗಳನ್ನು ಮಾಡಿದ ಹರಿಕಾರ, ನಾಡಿನ ನಗೆಗಾರ, ದಿಗ್ಗಜರಿಂದ ಹಿಡಿದು ಹೊಸ ತಲೆಮಾರಿನವರ ಜತೆಗೂ ಸಿನಿರಂಗದಲ್ಲಿ ಹೆಜ್ಜೆ ಹಾಕಿದ ನಟ, ನಿರ್ಮಾಪಕ ದ್ವಾರಕೀಶ್‌ ಅವರು 80ರ ಹರೆಯಕ್ಕೆ ಕಾಲಿಟ್ಟಾಗ 2022ರ ಸೆಪ್ಟೆಂಬರ್‌ 2ರಂದು ಪ್ರಜಾವಾಣಿ ಜೊತೆ ಮಾತನಾಡಿದ್ದರು. ಈ ಸಂದರ್ಶನವನ್ನು ಮರು ಓದಿಗೆ ಮತ್ತೆ ನೀಡಲಾಗಿದೆ.

80ರ ಬದುಕು ಹೇಗನ್ನಿಸುತ್ತಿದೆ?

ಅಚ್ಚರಿ, ಸಣ್ಣ ಬೇಸರ ಒಟ್ಟಿಗೇ ಆಗುತ್ತಿದೆ. ಇಷ್ಟು ಬೇಗ ಆಗಿ ಹೋಯ್ತಲ್ಲಾ ಅಂತ. ಬದುಕಿನಲ್ಲಿ ಸಾಕಷ್ಟು ಅನುಭವ, ಏಳು ಬೀಳುಗಳನ್ನು ಕಂಡಿದ್ದೇನೆ. ಅದೇ ಉತ್ಸಾಹದಲ್ಲೂ ಇದ್ದೇನೆ. ಈಗಲೂ ಸಿನಿಮಾ ಎಂದಾಗ ಪುಟಿದು ನಿಲ್ಲುವ ಚೈತನ್ಯ ಹೊಂದಿದ್ದೇನೆ.

ಸ್ಪೇರ್‌ ಪಾರ್ಟ್‌ ಅಂಗಡಿ ಇಟ್ಟಿದ್ದವರು ಸಿನಿಮಾ ಜಗತ್ತು ಪ್ರವೇಶಿಸಿದ ದಿನಗಳು ಹೇಗಿದ್ದವು?

ADVERTISEMENT

ನಾನು ಸಿನಿಮಾಕ್ಕೆ ಹೋಗುವುದು ನನ್ನ ಅಣ್ಣನಿಗೆ ಒಂದು ಚೂರೂ ಇಷ್ಟವಿರಲಿಲ್ಲ. ಅದಕ್ಕಾಗಿ ನನ್ನನ್ನು ಡಿಪ್ಲೊಮಾ ಇನ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ಗೆ (ಸಿಪಿಸಿ) ಸೇರಿಸಿದ್ದರು. ಮೈಸೂರಿನಲ್ಲಿ ಓದು ಮುಗಿದ ಬಳಿಕ ಅಣ್ಣ ನನಗಾಗಿ ಭಾರತ್‌ ಆಟೊ ಸ್ಪೇರ್‌ ಸ್ಟೋರ್ಸ್‌ ಎಂಬ ಅಂಗಡಿ ಹಾಕಿಕೊಟ್ಟಿದ್ದ. ತುಂಬಾ ಚೆನ್ನಾಗಿಯೇ ವ್ಯಾಪಾರ ನಡೆಯಿತು. ಈಗಲೂ ಅಣ್ಣನ ಮಕ್ಕಳು ಆ ವ್ಯವಹಾರ ಮುಂದುವರಿಸಿದ್ದಾರೆ. ಹಲವು ಶಾಖೆಗಳೂ ಇವೆ. ಉದ್ಯಮದಲ್ಲಿ ಒಳ್ಳೆಯ ಹೆಸರು ಮಾಡಿದ್ದಾನೆ. ಆದರೆ ನನಗೆ ಸಿನಿಮಾ ತುಡಿತ ಇತ್ತಲ್ಲಾ. ಹಾಗಾಗಿ ನಾನು, ಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ಪುಟ್ಟ ಪಾತ್ರಕ್ಕಾಗಿ ದುಂಬಾಲು ಬಿದ್ದಿದ್ದೆ. ಕೊನೆಗೂ ಸಿಕ್ಕಿತು. 1962ರಲ್ಲಿ ಸಿನಿಮಾದಲ್ಲೇ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಮದ್ರಾಸ್‌ಗೆ ಹೋದೆ. ಮಾವನೊಂದಿಗೆ ನೆಲೆಸಿದೆ. ನನ್ನ ಸಿನಿಮಾ ಗೀಳು ನೋಡಿದ ಅಣ್ಣ ನನ್ನನ್ನು ವ್ಯಾಪಾರದಿಂದ ಬಿಡಿಸಿದ. ಸುಮಾರು ಎರಡೂವರೆ ಸಾವಿರ ಕೊಟ್ಟು ನನ್ನನ್ನು ಕಳುಹಿಸಿದ. ಆ ಕಾಲದಲ್ಲಿ ಎಲ್ಲ ಹಿರಿಕಿರಿಯ ಕಲಾವಿದರು ಒಟ್ಟಿಗೇ ಇದ್ದೆವು. ಸಿನಿಮಾ ಕೈ ಹಿಡಿಯಿತು.

ಸಿನಿಮಾ ಕ್ಷೇತ್ರದ ಮಾನದಂಡಗಳಿಗೆ ಹೊರತಾದ ನಿಮ್ಮನ್ನು ಈ ಕ್ಷೇತ್ರ ಸ್ವೀಕರಿಸಿತೇ?

ಹಾಸ್ಯಗಾರನಿಗೇನು ಮಾನದಂಡ ಹೇಳಿ? ನಾನು ಬಂದದ್ದೇ ಹಾಸ್ಯ ಪಾತ್ರಕ್ಕಾಗಿ. ಒಂದೆರಡು ಚಿತ್ರಗಳಲ್ಲಿ ಪಾತ್ರ ಮಾಡಿದ ಬಳಿಕ ಅಂದರೆ ಚೆನ್ನೈಗೆ ಹೋದ ಮೂರೇ ವರ್ಷಗಳಲ್ಲಿ ನಾನು ನಿರ್ಮಾಪಕ ಎನಿಸಿಕೊಂಡೆ. ‘ಮಮತೆಯ ಮಡಿಲು’, ‘ಮೇಯರ್‌ ಮುತ್ತಣ್ಣ’, ‘ಕುಳ್ಳ ಏಜೆಂಟ್‌ 000’ ಇವೆಲ್ಲಾ ಜಯಭೇರಿ ಬಾರಿಸಿದ ಚಿತ್ರಗಳು. ಕುಳ್ಳ ಏಜೆಂಟ್‌... ಚಿತ್ರ ಸೆಟ್ಟೇರಿದಾಗ ನನಗೆ ಯಾವ ಹೆಸರು, ಗುರುತೂ ಇರಲಿಲ್ಲ. ಬಾಂಡ್‌ ಮಾದರಿಯ ಚಿತ್ರವದು. ಅದಕ್ಕಾಗಿ ನಾನು ಎದೆ ಮೇಲೆ ಡಾ.ರಾಜ್‌ಕುಮಾರ್ ಅವರ ಚಿತ್ರವಿರುವ ಅಂಗಿ ಧರಿಸಿದ್ದೆ. ಹೀಗೆ ಒಂದಿಷ್ಟು ಮಸಾಲೆ ಬೆರೆಸಲೇಬೇಕಾಯಿತು. ಚಿತ್ರವನ್ನು ಜನ ಸ್ವೀಕರಿಸಿದರು. ಚಿತ್ರ ಸುಮಾರು ಲಕ್ಷ ರೂಪಾಯಿಯಷ್ಟು ಗಳಿಸಿತು. ಆ ಬಳಿಕ ಡಾ.ರಾಜ್‌, ವಿಷ್ಣುವರ್ಧನ್‌, ರಜನಿಕಾಂತ್‌ ಅವರನ್ನು ಹಾಕಿಕೊಂಡು ಚಿತ್ರಗಳನ್ನು ಮಾಡಿದೆ. ಹಣ, ಕೀರ್ತಿ ಎಲ್ಲವೂ ಬಂದವು.

ಆರ್ಥಿಕ ಸಂಕಷ್ಟ, ಹೋರಾಟದ ಬದುಕೂ ನಿಮ್ಮದಾಯಿತಲ್ಲಾ? ಎಲ್ಲಿ ಲೆಕ್ಕಾಚಾರ ತಪ್ಪಿತು?

ನಾನು ಸಿನಿಮಾ ಮಾಡುತ್ತಲೇ ಹೋದೆ. ಬ್ಯಾಲೆನ್ಸ್‌ಷೀಟ್‌ ಮೇಲೆ ಗಮನ ಇರಲಿಲ್ಲ. ಒಂದು ಚಿತ್ರ ವಿಫಲವಾದರೆ ಇನ್ನೊಂದರಲ್ಲಿ ಬರುತ್ತದೆ ಎಂಬ ಆಶಾಭಾವ ಅಷ್ಟೇ ಇತ್ತು. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೇನೆ. ಮನೆ, ಕಾರು ಎಲ್ಲವನ್ನೂ ಮಾರಬೇಕಾಗಿ ಬಂತು. 1985ರ ಬಳಿಕ ನಾನು ನಿವೃತ್ತಿ ತೆಗೆದುಕೊಂಡಿದ್ದರೆ ಬಹುಶಃ ಬೆಂಗಳೂರಿನಲ್ಲಿ ಅತ್ಯಂತ ಶ್ರೀಮಂತರ ಪೈಕಿ ನಾನೂ ಒಬ್ಬನಾಗಿರುತ್ತಿದ್ದೆ. ಒಟ್ಟಿನಲ್ಲಿ ಚಿತ್ರ ನಿರ್ಮಿಸುವುದಷ್ಟೇ ಗುರಿ ಆಗಿತ್ತು. ಇದರಿಂದಾಗಿ ಹಲವರ ಮಾತುಗಳನ್ನು ಕೇಳಬೇಕಾಯಿತು. ಬದುಕಿನಲ್ಲಿ ಸಾಕಷ್ಟು ಹೋರಾಟ ನಡೆಸಬೇಕಾಯಿತು.

ಈಗ ಆರ್ಥಿಕ ಸ್ಥಿತಿ ಹೇಗಿದೆ?

ಚೆನ್ನಾಗಿಯೇ ಇದೆ. ಮಕ್ಕಳು, ಸೊಸೆ, ದುಡಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಹುಸ್ಕೂರು ರಸ್ತೆಯಲ್ಲಿ ಮನೆ ಕಟ್ಟಿದ್ದೇವೆ. ಎರಡನೇ ಪುತ್ರ ಯೋಗೀಶ ಸಿನಿಮಾ ಕ್ಷೇತ್ರದಲ್ಲಿದ್ದಾನೆ. ಬದುಕು ಹೀಗೆ ಸಾಗಿದೆ.

ಸಾಂಸಾರಿಕ ಬದುಕು?

ಸಾಂಸಾರಿಕ ಬದುಕು ಎಂದರೆ ನಾನು ತುಂಬಾ ನೆನಪಿಸಿಕೊಳ್ಳುವುದು ನನ್ನ ಪತ್ನಿ ಅಂಬುಜಾ. ನಾನೇನೇ ಆಗಿದ್ದರೂ ಅದರ ಹಿಂದಿದ್ದ ಸ್ಫೂರ್ತಿ, ಶಕ್ತಿ ಅವಳು. ಅವಳದ್ದು ಯಾವುದೇ ನಿರ್ಬಂಧಗಳಿಲ್ಲದ ಪ್ರೀತಿ. ಐವರು ಗಂಡುಮಕ್ಕಳನ್ನು ಕೊಟ್ಟಿದ್ದಾಳೆ. ನನ್ನ ಎಲ್ಲ ಒಳಿತು ಕೆಡುಕುಗಳಿಗೆ ಹೆಗಲು ಕೊಟ್ಟವಳು. ಇತ್ತೀಚೆಗೆ ಅಗಲಿದ್ದಾಳೆ. ಅವಳ ನೆನಪಿನಲ್ಲಿ ಕಾಲ ಕಳೆಯುತ್ತಿದ್ದೇನೆ.

ಬದುಕಿನಲ್ಲಿ ಆಶಾವಾದ ಎಂದರೆ?

ಅದು ಸಿನಿಮಾ. ಯಾವತ್ತಿದ್ದರೂ ಸಿನಿಮಾ. ನೀವು ನನ್ನ ಆರ್ಥಿಕ ಸ್ಥಿತಿ ನೋಡಬೇಡಿ. ನನ್ನ ಸಿನಿಮಾಗಳನ್ನು ನೋಡಿ. ಆ ಸಿನಿಮಾಗಳನ್ನು ನೋಡಿದಾಗ, ಆ ನೆನಪುಗಳನ್ನು ಮಾಡಿಕೊಂಡಾಗ ನನ್ನ ಬದುಕಿನಲ್ಲಿ ಆಶಾವಾದ ಮತ್ತೆ ಮತ್ತೆ ಮೂಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.