ಬೆಂಗಳೂರು: ಕೋವಿಡ್ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು, ಚಿತ್ರರಂಗದ ಹಲವು ಕಲಾವಿದರಿಗೆ ಸೋಂಕು ದೃಢಪಟ್ಟಿದೆ. ಈ ಸಂದರ್ಭದಲ್ಲೇ ‘ತಮ್ಮ ಸಹೋದರ, ನಟ ಕೋಮಲ್ ಅವರಿಗೂ ಕೋವಿಡ್–19 ದೃಢಪಟ್ಟಿತ್ತು. ಸೋಂಕಿನಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಆತನ ಆರೋಗ್ಯ ಸುಧಾರಿಸಿದೆ’ ಎಂದು ನಟ ಜಗ್ಗೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
‘ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ. ಅದು ಒಂದೇ, ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ,ಪಕ್ಷಿ, ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗು ಕೇಡುಬಯಸದೆ, ಮೋಸವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗೆ ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆತಾಯಿಯನ್ನು ನೋಯಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ, ಅನ್ನಕೊಟ್ಟ ಶಾರದೆ ಸೇವೆ ನಿಷ್ಠೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದರೆ ಸಾವಿನ ಮನೆ ಕದ ತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು. ನನ್ನ ಈ ಬೇಡಿಕೆಗೆ ಬೃಂದಾವನದಿಂದ ಎದ್ದು ಬಂದ ರಾಯರು ಪಕ್ಕನಿಂತು ಅವನ ಉಳಿಸಿಬಿಟ್ಟರು. ಕೋಮಲ್ ಸುರಕ್ಷಿತವಾಗಿದ್ದಾನೆ’
‘ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಬೆಂಗಳೂರಿನ ಕಾರ್ಪೊರೇಷನ್‌ನಲ್ಲಿ ಸ್ವಂತ ವ್ಯವಹಾರ ಶುರುಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್‌ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಅದ ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು, ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ. ಅವನಿಗೆ ಚಿಕಿತ್ಸೆ ನೀಡಿದ ಡಾ.ಮಧುಮತಿ, ನಾದನಿ ಡಾ.ಲಲಿತ ಹಾಗೂ ನರ್ಸ್‌ಗಳ ಪಾದಕ್ಕೆ ನನ್ನ ನಮನ’ ಎಂದು ಟ್ವೀಟ್‌ನಲ್ಲಿ ಜಗ್ಗೇಶ್ ಉಲ್ಲೇಖಿಸಿದ್ದಾರೆ.
ಕೋಮಲ್ ಅವರ ಆರೋಗ್ಯದ ಇಷ್ಟು ಗಂಭೀರವಾಗಿದೆ ಎಂದುಜಗ್ಗೇಶ್ ಈವರೆಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ಈಗ ಅವರ ಆರೋಗ್ಯ ಸುಧಾರಿಸಿದ ಬಳಿಕ, ಕೋಮಲ್ ಅವರು ವೆಂಟಿಲೇಟರ್‌ನಲ್ಲಿ ಇರುವ ಚಿತ್ರವನ್ನೂಟ್ವೀಟ್ ಜೊತೆಗೆ ಜಗ್ಗೇಶ್ ಅಪ್‌ಲೋಡ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.