ಬೆಂಗಳೂರು: ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ಸೆಪ್ಟೆಂಬರ್ 30 ರಂದು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ನಾಗಭೂಷಣ್, ‘ನಾನು ಹಿಟ್ ಆ್ಯಂಡ್ ರನ್ ಮಾಡಿಲ್ಲ. ಇದೊಂದು ಆಕಸ್ಮಿಕ ಘಟನೆ. ಅಪಘಾತಕ್ಕೆ ಈಡಾದ ಕುಟುಂಬದವರಿಗೆ ನನ್ನಿಂದ ಏನು ಸಹಾಯವಾಗುತ್ತದೆಯೋ ಅದನ್ನು ಮಾಡುತ್ತೇನೆ’ ಎಂದಿದ್ದಾರೆ.
ಆ ಘಟನೆಯಲ್ಲಿ ಎಸ್. ಪ್ರೇಮಾ (48) ಎನ್ನುವವರು ಮೃತಪಟ್ಟಿದ್ದರು. ಪ್ರೇಮಾ ಅವರ ಪತಿ ಬಿ. ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
‘ರಾಜರಾಜೇಶ್ವರಿ ನಗರ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೋಗಬೇಕಾದರೆ ಈ ಘಟನೆ ನಡೆದಿತ್ತು. ಹಲವರು ಇದು ಹಿಟ್ ಆ್ಯಂಡ್ ರನ್ ಎಂಬ ಆರೋಪ ಮಾಡುತ್ತಿದ್ದಾರೆ. ಅಪಘಾತವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಉದ್ದೇಶದಿಂದ ಸ್ವಲ್ಪ ಕಿತ್ತು ಬಂದಿದ್ದ ಬಂಪರ್ ಅನ್ನು ನಾನು ಪೂರ್ಣವಾಗಿ ಕಿತ್ತೆಸೆದೆ. ಅವರನ್ನು ಆಸ್ಪತ್ರೆಗೆ ನಾನೇ ಸೇರಿಸಿದೆ. ಕರೆದೊಯ್ಯುವಾಗಲೇ ನಾನು ಪೊಲೀಸರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದೆ. ಮಹಿಳೆ ಮೃತಪಟ್ಟ ವಿಷಯವನ್ನು ಕೇಳಿದ ಸಂದರ್ಭದಲ್ಲೇ ನಾನು ಮಾನಸಿಕವಾಗಿ ಕುಸಿದುಹೋಗಿದ್ದೆ. ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರ ಮುಂದೆಯೇ ಪೊಲೀಸರು ನಾನು ಕುಡಿದಿದ್ದೇನೆಯೇ ಎಂದು ಪರೀಕ್ಷೆ ಮಾಡಿಸಿದ್ದರು. ಅದರಲ್ಲಿ ನಾನು ಕುಡಿದಿಲ್ಲ ಎಂದು ದಾಖಲಾಗಿತ್ತು. ನಂತರ ಪೊಲೀಸರ ಸೂಚನೆಯಂತೆ ರಕ್ತ ಪರೀಕ್ಷೆಯನ್ನೂ ಮಾಡಿಸಿದೆ’ ಎನ್ನುತ್ತಾ ನಾಗಭೂಷಣ್ ಗದ್ಗದಿತರಾದರು.
‘ನಾನು ಆ ಕ್ಷಣದಲ್ಲಿ ಒಬ್ಬ ಮನುಷ್ಯನಾಗಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಿದೆ. ಓಡಿಹೋಗಲಿಲ್ಲ. ಆ ಎರಡು ಜೀವಗಳನ್ನೂ ಉಳಿಸಬೇಕು ಎನ್ನುವುದೇ ಉದ್ದೇಶವಾಗಿತ್ತು. ನನಗೆ ಆ ನೋವು ಕಾಡುತ್ತಿದೆ. ನನಗಿಂತ ಹೆಚ್ಚು ನೋವು ಅವರಿಗಿದೆ ಎಂಬ ಅರಿವೂ ಇದೆ. ನಾನು ಚಿಕ್ಕವಯಸ್ಸಿನಲ್ಲಿಯೇ ಗೌರಿ ಹಬ್ಬದ ದಿನ ಅಪಘಾತವೊಂದರಲ್ಲಿ ತಂದೆಯನ್ನು ಕಳೆದುಕೊಂಡಿದ್ದೆ. ಅಪಘಾತ ಮಾಡಿದವರು ಯಾರು ಎಂದು ನಮಗೆ ಇನ್ನೂ ತಿಳಿದಿಲ್ಲ. ನಾನು ಎಲ್ಲರನ್ನೂ ನಗಿಸಲು ಇಚ್ಛಿಸುವವನು. ದುಃಖ ಕೊಡಲು ನನಗೆ ಮನಸ್ಸಿಲ್ಲ. ದಯವಿಟ್ಟು ಹಿಟ್ ಆ್ಯಂಡ್ ರನ್ ಎಂದು ಹೇಳಬೇಡಿ’ ಎಂದು ವಿನಂತಿಸಿಕೊಂಡರು.
ಕುಟುಂಬದವರನ್ನು ಯಾಕಿನ್ನೂ ಭೇಟಿಯಾಗಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ನಾಗಭೂಷಣ್, ‘ನಾನು ಏನೆಂದು ಮಾತನಾಡಿಸಲಿ? ಅದಕ್ಕೂ ಧೈರ್ಯ ಬೇಕು. ಘಟನೆಯಿಂದ ಚೇತರಿಸಿಕೊಳ್ಳಲು ನನಗೂ ಸಮಯ ಬೇಕು. ನಮ್ಮ ಕಡೆಯಿಂದ ಸಹಾಯ ಬೇಕಿದ್ದರೆ ಕೇಳಿ ಎಂದು ಗೊತ್ತಿರುವವರ ಕಡೆಯಿಂದ ಆ ಕುಟುಂಬವನ್ನು ಸಂಪರ್ಕಿಸಿದ್ದೇನೆ. ಮಾತನಾಡಿ ತಿಳಿಸುವುದಾಗಿ ಅವರು ಹೇಳಿದ್ದಾರೆ. ಐಸಿಯುನಲ್ಲಿರುವವರ ಆರೋಗ್ಯ ವಿಚಾರಿಸುತ್ತಿದ್ದೇವೆ. ಅವರ ನೋವಿನಲ್ಲೂ ಭಾಗಿಯಾಗಿದ್ದೇನೆ. ಇದೊಂದು ಆಕಸ್ಮಿಕ ಘಟನೆ’ ಎಂದರು.
ಆರ್‌ಟಿಒ ವರದಿ ತಿಳಿದಿಲ್ಲ
‘ವೇಗಕ್ಕೆ ಸಂಬಂಧಪಟ್ಟಂತೆ ಆರ್‌ಟಿಒ ನೀಡಿದ ವರದಿ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಆ ರಸ್ತೆಯಲ್ಲಿ ಅಷ್ಟು ವೇಗವಾಗಿ ಬರಲು ಸಾಧ್ಯವಿಲ್ಲ. ಜೊತೆಗೆ ರಸ್ತೆಯಲ್ಲಿ ಒಂದು ವಾಹನವೂ ಇತ್ತು. ನನ್ನ ವಾಹನಕ್ಕೆ ಸ್ವಲ್ಪ ಜಾಗವೇ ಇತ್ತು. ಹೀಗಿರುವಾಗ ಅವರಿಬ್ಬರೂ ಏಕಾಏಕಿ ಅಡ್ಡ ಬಂದರು’ ಎಂದು ನಾಗಭೂಷಣ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.