ನಟನೆಯ ಹಂಬಲದಿಂದ ಎಂಜಿನಿಯರಿಂಗ್ ಓದುವುದನ್ನೇ ಬಿಟ್ಟು, ಬಣ್ಣ ಬೆಳಕಿಗೆ ಒಡ್ಡಿಕೊಂಡವರು ನಟಪವನ್ ಕುಮಾರ್. ನಿರ್ದೇಶಕನಾಗಿ ಮಿಂಚಿ ಯೋಗರಾಜ್ ಭಟ್ ಜೊತೆಗೂಡಿ ಮತ್ತೊಮ್ಮೆ ಬಣ್ಣಹಚ್ಚಿ ‘ಗಾಳಿಪಟ’ ಹಾರಿಸಲು ಸಜ್ಜಾದ ಹೊತ್ತಿನಲ್ಲಿ ಅವರ ಜೊತೆ ಒಂದು ಮಾತುಕತೆ...
ಬರಹ, ಬಣ್ಣದ ಬದುಕನ್ನು ಅವಲೋಕಿಸಿದರೆ, ಏನು ಕಾಣಿಸುತ್ತಿದೆ...
20 ವರ್ಷಗಳ ಹಿಂದೆ ನಾನೇನು ಬಯಸಿದ್ದೆನೋ, ಅದು ಈಗ ಸಿಗುತ್ತಿದೆ. ಅದ್ಯಾವುದೋ ಜೋಶ್‌ನಲ್ಲಿ 2002ರಲ್ಲಿ ಎಂಜಿನಿಯರಿಂಗ್ ಓದಿಗೆ ಗುಡ್‌ಬೈ ಹೇಳಿ ಬಂದವನು ನಾನು. ಆ ಬಳಿಕ ಅಲೆದಾಟ ಶುರು. ಸಿನಿಮಾ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ರಂಗಪ್ರಯೋಗಗಳಿಗೆ ಒಡ್ಡಿಕೊಂಡಾಗ, ಟಿಪಿಕಲ್ ಭಾರತೀಯ ಸಿನಿಮಾಗಳಾಚೆಗಿನ ವಿಶ್ವ ಸಿನಿಮಾಗಳ ಬಗ್ಗೆ ತಿಳಿಯುತ್ತಾ ಹೋಯಿತು. ಈಗಲೂ ರಂಗಭೂಮಿಯ ಮೇಲಿನ ಪ್ರೀತಿ, ತುಡಿತ, ಪ್ರಯೋಗಗಳು ಹಾಗೇ ಮುಂದುವರಿದಿವೆ. ಈಗ ಹೆಚ್ಚಾಗಿ ಬರವಣಿಗೆ, ನಿರ್ದೇಶನದತ್ತ ಗಮನವಿದೆ. ಸಣ್ಣ ಪುಟ್ಟ ಅವಕಾಶಗಳು ಬಂದಾಗ ನಟನೆಗೂ ಹೋಗುತ್ತೇನೆ.
ಸಿನಿಮಾ ಕಡೆ ಹೊರಳಿದ್ದು?
ನಾಟಕಗಳಲ್ಲಿ ತೋರಿಸಲಾಗದ್ದನ್ನು ಸಿನಿಮಾದ ಮೂಲಕ ಅಗಾಧವಾಗಿ ತೋರಿಸಬಹುದು ಎಂದು ಗೊತ್ತಾಯಿತು. ಆಗ ಸ್ವಲ್ಪ ಅಧ್ಯಯನ ಮಾಡಿದೆ. ರಂಗಭೂಮಿಯಲ್ಲೇ ಬದುಕು ಹುಡುಕಿಕೊಂಡು ಮುಂಬೈಗೆ ಹೋದೆ. ಅಲ್ಲಿ ತಿಂಗಳುಗಳ ಕಾಲ ಕೆಲಸವಿಲ್ಲದೇ ಕೂತದ್ದು, ತೆರೆಯ ಹಿಂದಿನ ಕೆಲಸಗಳನ್ನಷ್ಟೇ ಮಾಡಿದ್ದೂ ನಡೆದಿದೆ. ಹಾಗಿರುವ ಒಂದು ದಿನ ನಿರ್ದೇಶಕ ಸೂರಿ ಅವರು ‘ಇಂತಿ ನಿನ್ನ ಪ್ರೀತಿಯ’ ಚಿತ್ರ ಮಾಡುತ್ತಿದ್ದರು. ಅದರಲ್ಲಿ ನನಗೆ ವಾಸ್ನೆ ಬಾಬು ಎಂಬ ಪಾತ್ರ ಕೊಟ್ಟರು. ನಿಜವಾಗಿ ಹೇಳಬೇಕೆಂದರೆ ಆ ಪಾತ್ರ ನನಗೆ ಸಂಬಂಧಪಡುತ್ತಲೇ ಇರಲಿಲ್ಲ. ಹಾಗಿದ್ದರೂ ಅನಿವಾರ್ಯವಾಗಿ ಮಾಡಿದೆ. ಪಾತ್ರ ತುಂಬಾ ಕ್ಲಿಕ್ ಆಯಿತು. ಆ ವೇಳೆ ನಿರ್ದೇಶಕ ಯೋಗರಾಜ್ ಭಟ್ಟರು ಸೂರಿ ಅವರ ಕಚೇರಿಯಲ್ಲೇ ಸಿಕ್ಕಿದರು. ಅದೂ ಇದೂ ಮಾತನಾಡಿ ಅವರ ಜೊತೆ ನನ್ನನ್ನು ಬರವಣಿಗೆಗೆ ಸೇರಿಸಿಕೊಂಡರು. ಅವರಿಂದ ಕಲಿತದ್ದು ತುಂಬಾ ಇದೆ. ‘ಮನಸಾರೆ’, ‘ಪಂಚರಂಗಿ’ ಚಿತ್ರಗಳಿಗೆ ನಾನು ಬರೆದೆ. ಈ ಚಿತ್ರಗಳಲ್ಲಿ ನಟನೆಯ ಅವಕಾಶವೂ ಸಿಕ್ಕಿತು. ಹಾಗೆ ಮುಂದುವರಿದು ನಿರ್ದೇಶನದತ್ತ ಹೊರಳಿದೆ. ಆ ಶ್ರಮದ ಫಲವೇ ‘ಲೈಫು ಇಷ್ಟೇನೇ’, ‘ಯೂ ಟರ್ನ್’, ‘ಲೂಸಿಯಾ’ ಇತ್ಯಾದಿ...
ಗಾಳಿಪಟ – 2ರಲ್ಲಿ ನಿಮ್ಮ ಪ್ರವೇಶವೇ ಹೆಚ್ಚು ಸದ್ದು ಮಾಡುತ್ತಿದೆಯಲ್ಲಾ?
ಹೌದು, ‘ಗಾಳಿಪಟ–2’ರಲ್ಲಿ ನಾನು ನಟಿಸುತ್ತೇನೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. 2018ರಲ್ಲಿ ಮಾತುಕತೆ ಹಂತದಲ್ಲಿದ್ದ ಸಿನಿಮಾ ಅದು. ಆಗ ಇನ್ನೂ ಹೆಸರಿಟ್ಟಿರಲಿಲ್ಲ. ಈ ನಡುವೆ ನಾನು ತೆಲುಗಿನಲ್ಲಿ ‘ಯೂ ಟರ್ನ್’ ಸಿನಿಮಾ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆಯೇ ಯೋಗರಾಜ್ ಭಟ್ಟರು ಕರೆ ಮಾಡಿ, ನನ್ನದೊಂದು ಫೋಟೊ ಕೇಳಿದರು. ಆಗ ಹೇಗ್ಹೇಗೋ ಇದ್ದೆ. ಅದೇ ರೀತಿ ಸೆಲ್ಫಿ ತೆಗೆದು ಕಳುಹಿಸಿದೆ. ಅವರು ಇಂಥ ವ್ಯಕ್ತಿಗೇ ಹುಡುಕುತ್ತಿದ್ದರಂತೆ. ಈ ಪಾತ್ರಕ್ಕಾಗಿ ನಾನು ಥಾಯ್ಲೆಂಡ್‌ಗೆ ಹೋಗಿ ಮೊಯ್‌ಥಾಯ್ ಬಾಕ್ಸಿಂಗ್ ಕಲಿತೆ. 6 ವಾರಗಳಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡೆ. ನಾನು ಇಪ್ಪತ್ತು ವರ್ಷಗಳ ಹಿಂದೆ ಹೇಗಿದ್ದೆನೋ ಈಗ ಹಾಗೆ ಕಾಣುತ್ತಿದ್ದೇನೆ. ಏಕೆಂದರೆ ಈ ಪಾತ್ರಕ್ಕೂ ನನ್ನ ವಯಸ್ಸಿಗೂ ಸುಮಾರು ಹತ್ತು ವರ್ಷಗಳ ಅಂತರ ಇದೆ.
ಹೆಚ್ಚು ರೊಮ್ಯಾಂಟಿಕ್ ಸನ್ನಿವೇಶ ಇದ್ದ ಹಾಗಿದೆ?
ಈ ಚಿತ್ರದಲ್ಲಿ ತೋರಿಸಿರುವ ರೊಮ್ಯಾನ್ಸ್, ಕ್ರಿಯೇಟಿವಿಟಿ ಎಲ್ಲವೂ ಭಟ್ಟರದ್ದೇ. ಚಿತ್ರದ ಪ್ರಮೋಷನ್‌ಗಾಗಿ ಚಿತ್ರರಂಗದ ಗೆಳೆಯರಲ್ಲಿ ಒಂದು ಪುಟ್ಟ ವಿಡಿಯೊಗಾಗಿ ಕೋರಿದೆ. ಎಲ್ಲರೂ ಕಳುಹಿಸಿದರು. ಅದು ಇಷ್ಟೊಂದು ಪ್ರಸಿದ್ಧವಾಗುತ್ತದೆ ಎಂದು ಊಹಿಸಿರಲಿಲ್ಲ. ನಾನು ಮತ್ತು ಗಣೇಶ್ ಅವರು ಈ ಹಿಂದೆ ಕೂಡಾ ಒಟ್ಟಿಗೇ ಕೆಲಸ ಮಾಡಿದವರು. ಹಾಗಾಗಿ ತುಂಬಾ ಚೆನ್ನಾಗಿ ಹೊಂದಾಣಿಕೆ ಆಯಿತು. ದಿಗಂತ್ ಕೂಡಾ ಇದ್ದಾರೆ. ಮೂವರ ಪಾತ್ರಗಳಿಗೂ ಸಮಾನವಾದ ಆದ್ಯತೆ ಮತ್ತು ತೂಕ ಇದೆ. ಮೂವರದ್ದೂ ಒಂದೊಂದು ಕಥೆ ಇಲ್ಲಿದೆ.
ನಟನೆ, ನಿರ್ದೇಶನ ಯಾವುದು ಹೆಚ್ಚು ಇಷ್ಟ?
ಆಯಾ ಸಂದರ್ಭಕ್ಕೆ ಯಾವುದು ಬರುತ್ತದೋ ಅದೇ ಇಷ್ಟ. ಎಲ್ಲದರಲ್ಲೂ ತೊಡಗಿಕೊಳ್ಳಬೇಕು ಅಷ್ಟೆ.
ನಟನೆ ಆಯ್ಕೆಗೆ ಮನೆಯಲ್ಲಿ ಬೆಂಬಲ ಇತ್ತೇ?
ಇರಲಿಲ್ಲ. ಅಪ್ಪ, ಅಮ್ಮ ಇಬ್ಬರಿಗೂ ಇಷ್ಟವಿರಲಿಲ್ಲ. ನಾನು ಎಂಜಿನಿಯರಿಂಗ್ ಬಿಟ್ಟು ಬಂದದ್ದಕ್ಕೆ ಅಮ್ಮನಿಗೆ ಈಗಲೂ ಬೇಸರವಿದೆ. ಆದರೆ, ಇಷ್ಟು ವರ್ಷ ಕಾದ, ಪರಿಶ್ರಮದ ಫಲ ಈಗ ಸಿಗುತ್ತಿದೆ ಎಂಬ ತೃಪ್ತಿ ನನಗಿದೆ.
ಸಿನಿ ಕ್ಷೇತ್ರದ ಕನಸು ಕಾಣುವವರಿಗೆ ಏನು ಹೇಳುತ್ತೀರಿ?
ತಾಳ್ಮೆ ಇರಲಿ. ಈಗ ನಾನೇ 20 ವರ್ಷ ಕಾಯಬೇಕಾಯಿತು. ನಿಮ್ಮಲ್ಲಿ ಪ್ರತಿಭೆ ಇದೆಯೇ ಪರೀಕ್ಷಿಸಿಕೊಳ್ಳಿ. ಇದೆ ಎಂದಾದರೆ ಅದನ್ನೇ ಸಾಣೆಗೆ ಒಡ್ಡುತ್ತಾ ಮುಂದುವರಿಯಿರಿ. ಪರಿಶ್ರಮಕ್ಕೆ ಖಂಡಿತಾ ಪ್ರತಿಫಲ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.