ಬೆಂಗಳೂರು: ಕನ್ನಡ ಚಿತ್ರರಂಗದ ‘ಅಪ್ಪು’ ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ..
ಶುಕ್ರವಾರ ಅ.29ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ರಮಣಶ್ರೀ ಕ್ಲಿನಿಕ್‌ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು.
ಹೃದಯಾಘಾತಕ್ಕೆ ಒಳಗಾಗಿದ್ದ ಪುನೀತ್‌ರನ್ನು ತಕ್ಷಣವೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುನೀತ್ ಅವರಿಗೆ ತಜ್ಞ ವೈದ್ಯರ ತಂಡ ತೀವ್ರ ನಿಗಾ ಘಟಕದಲ್ಲಿ ತುರ್ತು ಚಿಕಿತ್ಸೆ ನೀಡಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಅಲ್ಲದೆ, ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಪುನೀತ್ ನಿಧನದ ಸುದ್ದಿ ಖಚಿತವಾಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು, ಸಚಿವರು ಮತ್ತು ಅಧಿಕಾರಿ ವರ್ಗ ಮತ್ತು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಬಾಲನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ್ದ ಪುನೀತ್, 2002ರಲ್ಲಿ ‘ಅಪ್ಪು’ ಸಿನಿಮಾ ಮುಖಾಂತರ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ‘ಬೆಟ್ಟದ ಹೂವು’ ಚಿತ್ರದ ರಾಮು ಪಾತ್ರಕ್ಕಾಗಿ ಪುನೀತ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದ ಪುನೀತ್ ‘ಪಿಆರ್‌ಕೆ ಪ್ರೊಡಕ್ಷನ್’ ಹೆಸರಿನ ಸಂಸ್ಥೆಯಡಿಯಲ್ಲಿ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು.
ಬಾಲನಟನಾಗಿ ‘ವಸಂತ ಗೀತಾ’, ‘ಚಲಿಸುವ ಮೋಡಗಳು, ‘ಎರಡು ನಕ್ಷತ್ರ’, ‘ಬೆಟ್ಟದ ಹೂವು’, ‘ಭಕ್ತ ಪ್ರಹ್ಲಾದ’ ಸಿನಿಮಾಗಳಲ್ಲಿ ಬಾಲ ನಟನಾಗಿ ಪುನೀತ್ ನಟಿಸಿದ್ದರು.
ಅಪ್ಪನ ಜೊತೆ ಕಳೆದ ಮಧುರ ಕ್ಷಣಗಳನ್ನು ಇತ್ತೀಚೆಗಷ್ಟೇ ಪುನೀತ್ ಟ್ವೀಟ್ ಮೂಲಕ ಹಂಚಿಕೊಂಡಿದ್ದರು
ಇವುಗಳನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.