ರಂಗಭೂಮಿಯಲ್ಲಿ ಪುಟ್ಟಪುಟ್ಟ ಹೆಜ್ಜೆಯಿಟ್ಟು ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ದಿಶಾ ರಮೇಶ್ ಇದೀಗ ‘ಎಸ್‌ಎಲ್‌ವಿ’ಯಲ್ಲಿ ನಾಯಕಿ. ರಂಗಕರ್ಮಿ ಮಂಡ್ಯ ರಮೇಶ್ ಪುತ್ರಿಯಾಗಿರುವ ಅವರಿಗೆ ತಂದೆ ಕಟ್ಟಿದ ‘ನಟನ’ವೇ ಗರಡಿಮನೆ. ಎಷ್ಟೇ ಬೆಳೆದರೂ ರಂಗಭೂಮಿಯೇ ನನ್ನ ತಾಯಿಬೇರು ಅನ್ನುತ್ತಿದ್ದಾರೆ ದಿಶಾ.
ನಿಮ್ಮ ಸಿನಿಪಯಣದ ಹಾದಿ ಹೇಗಿದೆ?
ಒಳ್ಳೆಯ ಕಥೆ, ಸ್ಕ್ರಿಪ್ಟ್‌ಗೆ ಕಾಯುತ್ತಿದ್ದೆ. ಅವಕಾಶ ಬೇಕು ಎಂದು ಜಿದ್ದಿಗೆ ಬಿದ್ದು ಹೋದವಳಲ್ಲ. ಪದವಿ ಓದುತ್ತಿದ್ದಾಗಲೇ ಆ ನಿರೀಕ್ಷೆ ಇತ್ತು. ಆದರೆ ನನ್ನ ಆದ್ಯತೆ ಶಿಕ್ಷಣಕ್ಕೆ ಇತ್ತು. ರಂಗಭೂಮಿ ವಿಷಯದಲ್ಲೇ ಸ್ನಾತಕೋತ್ತರ ಪದವಿ ಮುಗಿಸಿದೆ. ಅಲ್ಲಲ್ಲಿ ನಾಟಕ ಪ್ರದರ್ಶನಗಳು, ಪ್ರಯೋಗಗಳು ನಡೆಯುತ್ತಲೇ ಇದ್ದವು. ಹೀಗಾಗಿ ದೇವರಕಾಡು ಚಿತ್ರದ ಬಳಿಕ ಹಿರಿತೆರೆ ಮಟ್ಟಿಗೆ ಕೊಂಚ ಅಂತರ ಉಂಟಾಯಿತು. ಎಸ್‌ಎಲ್‌ವಿ ಕಥೆ ಎಲ್ಲ ರೀತಿಯಿಂದಲೂ ಇಷ್ಟವಾಯಿತು. ಹಾಗಾಗಿ ಒಪ್ಪಿಕೊಂಡೆ.
‘ದೇವರ ಕಾಡು, ‘ಡಿ’ , ‘ಎಸ್‌ಎಲ್‌ವಿ’ ಹೀಗೆ ಅಕ್ಷರಪ್ರಧಾನ ಶೀರ್ಷಿಕೆಗಳೆ ಇವೆಯಲ್ಲಾ?
ಹೌದು ನನಗೂ ಅದು ಗೊತ್ತಾಗಿಲ್ಲ. ಕಾಕತಾಳೀಯ ಇರಬಹುದು. ‘ಡಿ’ ಅನ್ನುವುದು ಒಂದು ಡಾಲರ್ ಹಾಗೂ ದಿವ್ಯಾ– ದೀಪಕ್ ಎಂಬ ಎರಡು ಪಾತ್ರಗಳ ಸುತ್ತ ನಡೆಯುವ ಕಥೆ, ‘ಎಸ್‌ಎಲ್‌ವಿ’ ಅನ್ನುವುದು ಸಿರಿ ಲಂಬೋದರ ವಿವಾಹ. ಶೀರ್ಷಿಕೆಯೂ ಜನರನ್ನು ಸೆಳೆಯಬೇಕಲ್ಲಾ.
ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುವುದು ಹೇಗೆನಿಸಿತು?
ಅವರು (ಸೌರಭ್ ಕುಲಕರ್ಣಿ) ಮೂಲತಃ ರಂಗಭೂಮಿ, ಕಿರುತೆರೆಯಿಂದ ಬಂದವರು. ತುಂಬಾ ಬದ್ಧತೆ ಅವರಲ್ಲಿದೆ. ಸಿನಿಮಾ ನಿರ್ದೇಶನ ಮಾಡುತ್ತಾರೆ ಅಂದಾಗ ನನಗೂ ಸಣ್ಣ ಆತಂಕವಿತ್ತು. ಆದರೆ, ಅಬುಧಾಬಿಯಲ್ಲಿ ಪ್ರದರ್ಶನವಾದಾಗ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದೆವು. ಸೌರಭ್ ಅವರು ತಮ್ಮ ಯೋಜನೆಯನ್ನು ಅವರು ಅಂದುಕೊಂಡಂತೇ ನಡೆಸಿದ್ದಾರೆ. ಅತ್ಯುತ್ತಮವಾಗಿ ಮೂಡಿಬಂದಿದೆ. ಅವರ ಪರಿಶ್ರಮವಂತೂ ತುಂಬಾ ಇದೆ.
‘ಎಸ್‌ಎಲ್‌ವಿ’ಯನ್ನು ಯಾಕೆ ನೋಡಬೇಕು?
ಹೊಸ ಅಲೆಯ ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ಜನರು ಅವುಗಳನ್ನು ಸ್ವೀಕರಿಸುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಈ ಸಂದರ್ಭದಲ್ಲಿ ನವಿರಾದ ಹಾಸ್ಯ, ಭಾವನಾತ್ಮಕ ಸನ್ನಿವೇಶ, ಒಂದಿಷ್ಟು ಮನೋರಂಜನಾತ್ಮಕ ವಿಷಯಗಳನ್ನಿಟ್ಟುಕೊಂಡು ‘ಎಸ್‌ಎಲ್‌ವಿ’ ಬಂದಿದೆ. ರಂಗಭೂಮಿ ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ಇದು ಪೂರ್ಣ ಪೈಸಾ ವಸೂಲ್ ಸಿನಿಮಾ. ಎರಡು ಗಂಟೆ ಕಳೆದ ಬಳಿಕ ಪ್ರೇಕ್ಷಕ ನಿರಾಳನಾಗಿ ಬರುತ್ತಾನೆ. ಹೀಗಾಗಿ ನೀವು ಈ ಚಿತ್ರವನ್ನು ನೋಡಬೇಕು. ಇದರಲ್ಲಿ ನನ್ನದು ಲೀಲಾ ಹೆಸರಿನ ಪಾತ್ರ. ನಾಯಕ ಅಂಜನ್ ಅವರದ್ದು ಸಂಜಯ್ ಹೆಸರಿನ ಪಾತ್ರ. ಇಬ್ಬರೂ ಸಹೋದ್ಯೋಗಿಗಳೂ ಹೌದು, ಸ್ಪರ್ಧಿಗಳೂ ಹೌದು. ಮುಂದೇನು ಅನ್ನುವುದನ್ನು ಚಿತ್ರದಲ್ಲಿ ನೋಡಿ.
ರಂಗಭೂಮಿಯ ತುಡಿತ ಇನ್ನೂ ಎಷ್ಟಿದೆ?
ಖಂಡಿತಾ. ಅದೇ ನನ್ನ ತಾಯಿಬೇರು. ಅಪ್ಪ ಅಮ್ಮ ಇಬ್ಬರೂ ಕಲಾಕ್ಷೇತ್ರದವರೇ ಆಗಿರುವುದರಿಂದ ಸಹಜವಾಗಿ ಬೆಂಬಲ ಇದ್ದೇ ಇದೆ. ನನ್ನ ಮನೆಯ ಮುಂದೆಯೇ ‘ನಟನ’ ಶಾಲೆ ಇದೆ. ಎದ್ದರೂ ಬಿದ್ದರೂ ಅಲ್ಲಿಯೇ ಇರಬೇಕು. ಅಪ್ಪ ಅಮ್ಮ ಇಬ್ಬರೂ ಮುಕ್ತವಾದ ವಾತಾವರಣ ಕಲ್ಪಿಸಿದ್ದಾರೆ. ಆದರೆ ಯಾವುದೇ ಹೆಜ್ಜೆ ಇಡುವ ಮುನ್ನ ಯೋಚಿಸಿ ಇಡು ಎಂದೂ ಎಚ್ಚರಿಸುತ್ತಾರೆ. ನನಗೆ ರಂಗಭೂಮಿಯಲ್ಲಿ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಬೇಕು. ಹಳ್ಳಿಗಳಲ್ಲಿ ಹೋಗಿ ನಾಟಕ ಆಡಬೇಕು. ಹೀಗೆ ಹತ್ತಾರು ಕನಸುಗಳಿವೆ.
ಸಂಜಯನಾದ ಅಂಜನ್...
ರಂಗಭೂಮಿಯಲ್ಲಿ ಸುಮಾರು 11 ವರ್ಷಗಳಿಂದ ಸಕ್ರಿಯರಾಗಿದ್ದಾರೆ ‘ಎಸ್‌ಎಲ್‌ವಿ’ ಚಿತ್ರದ ನಾಯಕ ಸಂಜಯ್ ಪಾತ್ರಧಾರಿ ಅಂಜನ್ ಎ. ಭಾರದ್ವಾಜ್. ಅವರು 100ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದವರು. ಗಿರೀಶ್ ಕಾರ್ನಾಡರ ‘ತುಘಲಕ್’ ನಾಟಕದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅನುಭವ ಅವರದ್ದು. ಮುಂಬೈನ ಅನುಪಮ್ ಖೇರ್ ಅಭಿನಯ ಶಾಲೆಯಲ್ಲಿ ಡಿಪ್ಲೊಮಾ, ಪಾಂಡಿಚೆರಿಯ ಆದಿಶಕ್ತಿ ಸಮೂಹದ ತಂಡದಲ್ಲಿ ಮತ್ತು ನೀನಾಸಂನಲ್ಲಿ ತರಬೇತಿ ಪಡೆದವರು. ಸುಮಾರು 6 ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ರಾಜ್ ಬಿ. ಶೆಟ್ಟಿ ಅವರ ‘ರೂಪಾಂತರ’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ‘ರೂಪಾಂತರ’ಕ್ಕಾಗಿ ತೂಕ ಇಳಿಸಿಕೊಂಡಿದ್ದ ಅವರು ಎಸ್‌ಎಲ್‌ವಿಗಾಗಿ 12 ಕೆಜಿಗಳಷ್ಟು ಹೆಚ್ಚಿಸಿಕೊಂಡಿದ್ದಾರಂತೆ. ಈ ಚಿತ್ರಕ್ಕಾಗಿ ಸಾಕಷ್ಟು ಪೂರ್ವತಯಾರಿ ನಡೆಸಿದ್ದರಂತೆ ಅಂಜನ್.
ರೋಮಾಂಚಕ ಪಯಣ
ಈ ಹಿಂದೆ ಕಿರು ಚಿತ್ರಗಳನ್ನು ನಿರ್ದೇಶಿಸಿದ್ದೆ, ಆದರೆ ಒಂದು ಪೂರ್ಣ ಪ್ರಮಾಣದ ಚಲನಚಿತ್ರ ನಿರ್ದೇಶನ ಇದೇ ಮೊದಲು ಇದೊಂದು ರೋಮಾಂಚನಕಾರಿ ಪಯಣ ಮತ್ತು ಅನುಭವ. ಈ ಪಯಣದಲ್ಲಿ ಹಲವಾರು ತಂತ್ರಜ್ಞರು, ಹಿರಿಯ ಕಲಾವಿದರು ನನ್ನ ನಂಬಿ ಕೆಲಸ ಮಾಡಿದ್ದಾರೆ ಹಾಗೂ ಅನೇಕ ಹಿತೈಷಿಗಳು ಬಂಡವಾಳ ಹೂಡಿದ್ದಾರೆ, ಅವರೆಲ್ಲರಿಗೂ ನಾನು ಆಭಾರಿ. ಈಗಾಗಲೇ ವಿದೇಶದಲ್ಲಿ ಪ್ರದರ್ಶನ ಕಂಡಾಗ ಅಲ್ಲಿನ ಕನ್ನಡಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಈಗ ನಮ್ಮ ತಾಯ್ನಾಡಿನಲ್ಲೂ ನಮ್ಮ ಕನ್ನಡಿಗರು ಈ ಚಿತ್ರ ನೋಡಿ ಹರಸುತ್ತಾರೆಂಬ ನಂಬಿಕೆಯಿದೆ.
– ಸೌರಭ್ ಕುಲಕರ್ಣಿ, ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.