ADVERTISEMENT

ವೀರ ರಮಣಿ ಹಾಡು ಹುಟ್ಟಿದ ಪರಿ

ಬಿ.ಎಲ್.ವೇಣು
Published 31 ಜುಲೈ 2021, 19:30 IST
Last Updated 31 ಜುಲೈ 2021, 19:30 IST
ಜಯಂತಿ
ಜಯಂತಿ   

ಚಿತ್ರದುರ್ಗದ ಒನಕೆ ಓಬವ್ವಳ ಶೌರ್ಯ ಪರಾಕ್ರಮಗಳನ್ನು ನಾಡಿನ ಜನರ ಕಣ್ಮುಂದೆ ತಂದು ನಿಲ್ಲಿಸಿದ ನಟಿ ಜಯಂತಿ. ಎಷ್ಟೇ ಗ್ಲ್ಯಾಮರಸ್‌ ಪಾತ್ರದಲ್ಲಿ ಮಿಂಚಿದರೂ ಜನಮನದಲ್ಲಿ ಅಚ್ಚಳಿಯದೆ ಉಳಿದದ್ದು, ವೀರವನಿತೆ ಓಬವ್ವಳಾಗಿ ಎಂದರೆ ಅತಿಶಯೋಕ್ತಿಯಾಗದು.

1970-71ರಲ್ಲಿ ದುರ್ಗದಲ್ಲಿ ‘ನಾಗರಹಾವು’ ಚಿತ್ರದ ಚಿತ್ರೀಕರಣವನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು ತಮ್ಮ ತಂಡದೊಡನೆ ಆರಂಭಿಸಿದ್ದರು. ದುರ್ಗದ ಆಬಾಲವೃದ್ಧ ಮಹಿಳೆಯರಾದಿಯಾಗಿ ಚಿತ್ರೀಕರಣ ನೋಡಲು ಉತ್ಸಾಹದಿಂದ ಕೋಟೆ ಏರುತ್ತಿದ್ದುದನ್ನು ನಾನು ನೋಡಿ ಬಲ್ಲೆ. ಏಕೆಂದರೆ ನಾನೂ ಗೆಳೆಯರೊಂದಿಗೆ ಕೋಟೆ ಏರಿದವನೆ.

ಹಿರಿಯ ಸಾಹಿತಿ ತರಾಸು ಅವರ ಕಾದಂಬರಿ ಆಧಾರಿತ ಎಂಬ ಹೆಗ್ಗಳಿಕೆ ಬೇರೆ. ಆಗೆಲ್ಲ ಚಿತ್ರೀಕರಣ ವೀಕ್ಷಿಸುವವರ ಕಣ್ಣಿಗೆ ಸತ್ಯವಾಗಲೂ ಪುಟ್ಟಣ್ಣನವರೇ ‘ಗ್ರೇಟ್ ಹೀರೊ’! ನಮಗೆಲ್ಲ ವಿಷ್ಣು, ಅಂಬರೀಷ್‌, ಆರತಿ ತೀರಾ ಅಪರಿಚಿತರು. ಪುಟ್ಟಣ್ಣನವರಿಗೆ ನಾಗರಹಾವು ಚಿತ್ರದ ಯಶಸ್ಸು ಅವರ ಕೆರಿಯರ್‌ನಲ್ಲಿ ಅತಿ ಮುಖ್ಯವಾಗಿತ್ತು. ಒಂದೆರಡು ಚಿತ್ರಗಳಾಗಲೇ ಸೋತಿದ್ದವು. ಪುಟ್ಟಣ್ಣ, ಕಾದಂಬರಿಗಳನ್ನು ಓದಿ ಬದಿಗಿಟ್ಟು, ಸಿನಿಮಾಕ್ಕೆ ಸರಿಹೊಂದುವಂತೆ ಚಿತ್ರಕಥೆ ಬರೆದುಕೊಂಡಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದುಂಟು.

ADVERTISEMENT

ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದ ಪುಟ್ಟಣ್ಣ, ಕಥೆಗೆ ಅಗತ್ಯವೇ ಇಲ್ಲದ ವೀರವನಿತೆ ಒನಕೆ ಓಬವ್ವಳ ಸಾಹಸಗಾಥೆಯನ್ನು ಹಾಡಿನ ಮೂಲಕ ಸೇರಿಸಿ ಅಪಾರ ಮಹಿಳಾ ಪ್ರೇಕ್ಷಕರನ್ನು ಸೆಳೆಯುವ ತಂತ್ರಕ್ಕೆ ಶರಣಾಗಿದ್ದರು. ಅದರಲ್ಲಿ ಅವರು ಯಶಸ್ವಿಯಾಗಿದ್ದು, ಇಂದಿಗೆ ಇತಿಹಾಸ.

ಪುಟ್ಟಣ್ಣನವರಿಗೆ ಓಬವ್ವೆಯ ಇತಿಹಾಸವನ್ನು ನೆನಪಿಗೆ ತಂದ ಮಹನೀಯರು, ನವಭಾರತ ತರುಣ ಕಲಾ ಸಂಘದ ದುರ್ಗದ ಕಲಾವಿದರು. ಇವರು ಆಡುತ್ತಿದ್ದ ಅಪಾರ ಯಶಸ್ವಿ ನಾಟಕ ‘ರಾಜವೀರ ಮದಕರಿ ನಾಯಕ’. ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ತಾವಾಗಿಯೇ ಸಂಘದವರನ್ನು ಮೈಸೂರಿಗೆ ಕರೆಸಿ ಆಡಿಸಿ ನೋಡಿದ ಪ್ರಸಿದ್ಧ ನಾಟಕ.

ಈ ಬಗ್ಗೆ ಕೇಳಿದ ಪ್ರಯೋಗಶೀಲ ಪುಟ್ಟಣ್ಣ ತಾವೂ ತಂಡದವರೊಡನೆ ನಾಟಕವನ್ನು ನೋಡಿದರು. ನಾಟಕದಲ್ಲಿ ಓಬವ್ವಳ ಪಾತ್ರವನ್ನು ಕಂಡು ಪ್ರಭಾವಿತರಾಗಿ, ಸಿನಿಮಾದಲ್ಲಿ ಹಾಡಿನ ಮೂಲಕ ಸನ್ನಿವೇಶವನ್ನು ತರಲು ನಿರ್ಧರಿಸಿದರು. ಓಬವ್ವಳ ಕತೆ ಅಷ್ಟರಲ್ಲಾಗಲೇ ಆರನೇ ತರಗತಿ ಪಠ್ಯದಲ್ಲಿ ನಮಗಿತ್ತು. ಅದನ್ನೇ ಆಧರಿಸಿ ಆರ್.ಎನ್.ಜಯಗೋಪಾಲರಿಂದ ಹಾಡು ಬರೆಸಿದರು. ವೀರೋಚಿತ ರಾಗ ಹಾಕಿದ್ದು ವಿಜಯ ಭಾಸ್ಕರ್.

ಚಿತ್ರೀಕರಣದ ಬಗ್ಗೆ ನಮ್ಮ ನವಭಾರತ ತರುಣ ಕಲಾವಿದರ ಸಂಘದ ನಿರ್ದೇಶಕ ಸಿದ್ಧನಾಯಕರ ಬಳಿ ಮಾತುಕತೆಯಾಯಿತು. ಹಾಡಲ್ಲಿ ಕ್ಷಣಮಾತ್ರ ಬರುವ ‘ಮದಕರಿ’ ಪಾತ್ರಕ್ಕೆ ಈಗಾಗಲೇ ಅಭಿನಯಿಸಿ ಖ್ಯಾತರಾದ ತಿಪ್ಪಾನಾಯಕರ ಬದಲು ಬೇರೆಯವರನ್ನು ಆಯ್ಕೆ ಮಾಡಲು ಫೋಟೋಜೆನಿಕ್ ಕಾರಣಗಳನ್ನು ಹೇಳಿ, ನಿಜಲಿಂಗಪ್ಪನೆಂಬ ಯುವ ಕಲಾವಿದನಿಗೆ ವೇಷ ತೊಡಿಸಿದಾಗ ನಮಗೆಲ್ಲ ಅಸಮಾಧಾನ (ನಾವೆಲ್ಲಾ ಆಗ ಪೋರ್ಕಿಗಳೆನ್ನಿ). ಗದ್ದಲವೆಬ್ಬಿಸಿದ್ದುಂಟು. ಆಗ ಸಿ.ಟಿ.ಎಸ್.ನಾಯಕರು ಹೈದರಾಲಿಯ ಪಾತ್ರಕ್ಕೆ ಈಗಾಗಲೇ ನಾಟಕದಲ್ಲಿ ಅಭಿನಯಿಸುತ್ತಿದ್ದ ಸಂಘದ ಕಲಾವಿದ ಮಹಾಲಿಂಗಪ್ಪ (ಅಜ್ಜಣ್ಣ) ಅವರನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿ ನಮ್ಮ ಮನ ತಣಿಸಿದರು.

ನವಭಾರತ ತರುಣ ಕಲಾವಿದರ ಸಂಘದ ಕಲಾವಿದರ ಜೊತೆ ಪುಟ್ಟಣ್ಣ ಕಣಗಾಲ

ಪುಟ್ಟಣ್ಣ ತಮ್ಮ ನೆಚ್ಚಿನ ನಟಿ ಕಲ್ಪನಾರನ್ನೇ ಓಬವ್ವಳ ಪಾತ್ರಕ್ಕೆ ಆಯ್ಕೆ ಮಾಡಿದ್ದರಾದರೂ ತುಂಬ ಪ್ರಸಿದ್ಧಳಾಗಿದ್ದ ಆಕೆ ಒಂದು ಹಾಡಿನಲ್ಲಿ ಬಂದು ಹೋಗೋದು ಆಗೋಲ್ಲವೆಂದರೆಂದು ಸುದ್ದಿಯಾಯಿತು. ನಂತರ ಜಯಂತಿಯವರನ್ನು ಆರಿಸಿಕೊಂಡರು ಪುಟ್ಟಣ್ಣ. ನಮ್ಮೂರಿನ ಹುಡುಗರೇ ಓಬವ್ವಳ ಒನಕೆಗೆ ತಲೆ ಕೊಡುವ ಸೈನಿಕರಾದರು. ಅದರಲ್ಲಿ ನನ್ನ ಗೆಳೆಯರೂ ಇದ್ದರೆನ್ನಿ.

ಈ ಹಾಡಿನ ಚಿತ್ರೀಕರಣವನ್ನು ನಟ ವಿಷ್ಣುವರ್ಧನ್ ಮತ್ತು ದುರ್ಗದ ಸೇಂಟ್ ಜೋಸೆಫ್ ಕಾನ್ವೆಂಟ್ ವಿದ್ಯಾರ್ಥಿಗಳೊಂದಿಗೆ ಕೋಟೆಯಲ್ಲಿ ಚಿತ್ರೀಕರಿಸಲಾಯಿತು. ನಟಿ ಜಯಂತಿ ಭಾಗವಹಿಸಿದರು. ‘ನಾಗರಹಾವು’ ಚಿತ್ರದಷ್ಟೇ ‘ಕನ್ನಡ ನಾಡಿನ ವೀರ ರಮಣಿಯ ಗಂಡುಭೂಮಿಯ ವೀರ ನಾರಿಯ.. ಚಿತ್ರದುರ್ಗದಾ ಕಲ್ಲಿನ ಕೋಟೆ... ಅಮರಳಾದಳು ಓಬವ್ವ’ ಗೀತೆಯೂ ಜನಮನ್ನಣೆ ಪಡೆಯಿತು. ನಾಡಿನ ಮನೆ ಮಾತಾಗಿದ್ದ ಜಯಂತಿ, ಓಬವ್ವೆಯಾಗಿ ಜನಮಾನಸದಲ್ಲಿ ಪ್ರತಿಷ್ಠಾಪಿತರಾದರು. ದುರ್ಗದವರ ಮನದಂಗಳದಲ್ಲೂ ಅಜರಾಮರರಾದರು.

ನಮ್ಮವರು ಅನೇಕ ಸಲ ದುರ್ಗೋತ್ಸವ ನಡೆದಾಗ ಆಕೆಯನ್ನು ಗೌರವಿಸಿದ್ದುಂಟು. ನಾಗರಹಾವಿನ ನಂಟಸ್ತನವೇ ಪುಟ್ಟಣ್ಣನವರ ಮುಂದಿನ ಯಶಸ್ವಿ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಕಥಾನಾಯಕಿ ಸ್ಥಾನವನ್ನು ಜಯಂತಿ ಗಳಿಸಲು ಹಾಗೂ ರಾಜ್ಯಪ್ರಶಸ್ತಿ ಭಾಜನರಾಗಲೂ ನಾಂದಿ ಹಾಡಿದ್ದು ಸವಿನೆನಪು. ಹೆಸರಾಂತ ನಟಿಯಾದರೂ ಪುಟ್ಟಣ್ಣನವರ ಕರೆಯನ್ನು ಮನ್ನಿಸಿ ನಮ್ರಳಾಗಿ ಮಾಡಿದ ಪುಟ್ಟ ಪಾತ್ರದಿಂದಾಗಿ ಜಯಂತಿ ಪಡೆದ ಕೀರ್ತಿ ಎಣೆಯಿಲ್ಲದ್ದು.

ದುರ್ಗದಲ್ಲಿ ಕೋಟೆಯ ಮೇಲೆ, ರಂಗಯ್ಯನ ಬಾಗಿಲು, ಗಲ್ಲಿಗಲ್ಲಿಗಳಲ್ಲಿ ಚಿತ್ರೀಕರಣ ನಡೆವಾಗ ನಾನೂ ಎಲ್ಲರಂತೆ ನಿಂತು ನೋಡಿ ದಬ್ಬಿಸಿಕೊಂಡವನೆ. ನಾನಾಗ ಇನ್ನೂ ಬರಹಗಾರನಾಗಿ ಚಿಗುರೊಡೆದಿರಲಿಲ್ಲ. ನಂತರದ ದಿನದಲ್ಲಿ ನಾನು ಪುಟ್ಟಣ್ಣನವರ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದು, ಕಲಾವಿದರಾದ ವಿಷ್ಣು, ಅಂಬಿ, ಜಯಂತಿ, ಆರತಿ ಚಿತ್ರಗಳಿಗೆ ಕತೆ, ಸಂಭಾಷಣೆ ಒದಗಿಸಿದ್ದು ಸಹ ನನ್ನ ಪಾಲಿನ ಸವಿಸವಿ ನೆನಪು.

ಕನ್ನಡ ಚಿತ್ರರಂಗದ ಎಲ್ಲ ನಾಯಕ ನಟರೊಂದಿಗೆ, ಅದರಲ್ಲೂ ಡಾ.ರಾಜ್ ಜತೆಗೆ ಹೆಚ್ಚು ಚಿತ್ರದಲ್ಲಿ ನಟಿಸಿದ ಖ್ಯಾತಿಯೂ ಜಯಂತಿಯವರಿಗೆ ಸಲ್ಲುತ್ತದೆ. ದೀರ್ಘಕಾಲ ಬದುಕಿದ ಅವರು ನಮ್ಮನ್ನೆಲ್ಲ ಅಗಲಿದರೂ ಅಭಿನಯ ಶಾರದೆಯ ಅಭಿನಯ ಮಾತ್ರ ಪ್ರೇಕ್ಷಕರ ಹೃದಯದಲ್ಲಿ ಚಿರಸ್ಥಾಯಿ. ಇವತ್ತಂತೂ ದುರ್ಗದ ಮನೆ ಮನೆಗಳಲ್ಲಿ ಜಯಂತಿಯವರ (ಓಬವ್ವೆಯ) ಸಾವಿನ ನೋವು ಮಡುಗಟ್ಟಿದೆ. ಹಳೆಯ ತಲೆಯವರಂತೂ ಕೂತಕಟ್ಟೆಯ ಮೇಲೆ, ಮರದ ನೆರಳಡಿ, ಕೋಟೆ ಸಾಲಲ್ಲಿ ಹೋಟೆಲ್ ಚಹದೊಡನೆ ಜಯಂತಿಯನ್ನೇ ಚಪ್ಪರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.