‘ಪೆಪೆ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ವಿನಯ್ ರಾಜ್‌ಕುಮಾರ್ ‘ಗ್ರಾಮಾಯಣ’ ಸೆಟ್‌ಗೆ ಧುಮುಕಿದ್ದಾರೆ. ಇದೀಗ ಸೆಟ್‌ನಿಂದ ಹೊಸ ಸುದ್ದಿಯೊಂದು ಸಿಕ್ಕಿದ್ದು, ವಿನಯ್‌ಗೆ ‘ಜೊತೆಜೊತೆಯಲಿ’ ಖ್ಯಾತಿಯ ನಟಿ ಮೇಘಾ ಶೆಟ್ಟಿ ಜೋಡಿಯಾಗಿದ್ದಾರೆ.
ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ಮೇಘಾ ‘ತ್ರಿಬಲ್ ರೈಡಿಂಗ್’, ‘ದಿಲ್‌ಪಸಂದ್’ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದವರು. ಸದ್ಯ ಇವರ ನಟನೆಯ ‘ಕೈವ’ ಹಾಗೂ ‘After ಆಪರೇಷನ್ ಲಂಡನ್ ಕೆಫೆ’ ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. 2018ರಲ್ಲೇ ಸೆಟ್ಟೇರಿದ್ದ ‘ಗ್ರಾಮಾಯಣ’ ಸಿನಿಮಾ ಹಲವು ಕಾರಣಗಳಿಂದ ಮಧ್ಯದಲ್ಲೇ ಸ್ಥಗಿತಗೊಂಡಿದ್ದು. ದೇವನೂರು ಚಂದ್ರು ಆ್ಯಕ್ಷನ್ ಕಟ್ ಹೇಳಿದ್ದ ಈ ಸಿನಿಮಾಗೆ ಇತ್ತೀಚೆಗಷ್ಟೇ ಮರುಜೀವ ಸಿಕ್ಕಿತ್ತು. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಲಹರಿ ಫಿಲ್ಮ್ಸ್ ಮನೋಹರ್ ನಾಯ್ಡು ಜೊತೆಗೂಡಿ ಈ ಪ್ರಾಜೆಕ್ಟ್‌ಗೆ ಮರುಜೀವ ನೀಡಿದ್ದರು.
ಹಳೆಯ ಸಿನಿಮಾದ ಯಾವುದೇ ದೃಶ್ಯಾವಳಿಗಳನ್ನು ಬಳಸದೇ, ಹೊಸ ಕಥೆ ಮಾಡಿಕೊಂಡು ಮತ್ತೆ ಹೊಸದಾಗಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ಈ ಸಿನಿಮಾದಲ್ಲಿ ವಿನಯ್ ಅವರು ಹೊಸ ಲುಕ್‌ನಲ್ಲಿ ಪ್ರೇಕ್ಷಕರ ಎದುರಿಗೆ ಬರಲಿದ್ದು, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.