ADVERTISEMENT

ಸಂದರ್ಶನ: ನೋಡಿ ಇವರೇ ಹಳ್ಳಿಮೇಷ್ಟ್ರ ‘ಸೂಜಿ’!

ಅಭಿಲಾಷ್ ಪಿ.ಎಸ್‌.
Published 1 ಜುಲೈ 2021, 19:30 IST
Last Updated 1 ಜುಲೈ 2021, 19:30 IST
ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು   

ನಟ ಶರಣ್‌ ನಾಯಕರಾಗಿ ನಟಿಸುತ್ತಿರುವ ‘ಗುರು ಶಿಷ್ಯರು’ ಚಿತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ ‘ಸೂಜಿ’ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ನಿಶ್ವಿಕಾ ನಾಯ್ಡು, ಚಿತ್ರಕ್ಕಾಗಿ ಸೈಕಲ್‌ ಸವಾರಿಯನ್ನು ಕಷ್ಟಪಟ್ಟು ಕಲಿತಿದ್ದಾರೆ. ಇನ್ನು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ‘ಸಖತ್‌’ ಚಿತ್ರದ ಚಿತ್ರೀಕರಣದಲ್ಲೂ ತಲ್ಲೀನರಾಗಿರುವ ನಿಶ್ವಿಕಾ, ತಮ್ಮ ಸಿನಿ ಪಯಣವನ್ನು ‘ಸಿನಿಮಾ ಪುರವಣಿ’ ಜೊತೆ ಹಂಚಿಕೊಂಡಿದ್ದಾರೆ.

* ಲಾಕ್‌ಡೌನ್‌ಗೂ ನಿಶ್ವಿಕಾ ಅವರಿಗೂ ಭಾರಿ ನಂಟಿದೆ ಅಲ್ಲವೇ?

2020ರಲ್ಲಿ ಮೊದಲ ಲಾಕ್‌ಡೌನ್‌ಗಿಂತ ಸ್ವಲ್ಪ ಮುಂಚೆ ನಾನು ನಟಿಸಿದ್ದ ‘ಜಂಟಲ್‌ಮನ್‌’ ಬಿಡುಗಡೆಯಾಗಿತ್ತು. ಲಾಕ್‌ಡೌನ್‌ ಸಡಿಲಗೊಂಡು ಚಿತ್ರಮಂದಿರಗಳು ತೆರೆದಾಗ ‘ರಾಮಾರ್ಜುನ’ ತೆರೆಕಂಡಿತು. ಮೊದಲಿಗೆ ಕೋವಿಡ್‌ ಏನು ಎಂಬುವುದನ್ನೇ ತಿಳಿದುಕೊಳ್ಳಲು ಸಮಯ ಹಿಡಿಯಿತು. ಎಲ್ಲರಿಗೂ ಸಂಕಷ್ಟದ ಸಮಯ ಅದಾಗಿತ್ತು. ಚಿತ್ರರಂಗಕ್ಕೆ ಕೋವಿಡ್‌ನಿಂದ ಬಹಳಷ್ಟು ಹೊಡೆತಬಿದ್ದಿದೆ. ಮೊದಲಿಗೆ ಚಿತ್ರಮಂದಿರಗಳನ್ನು ಮುಚ್ಚಲು ಆದೇಶಿಸಿದಾಗ, ಮತ್ತೆ ಇವುಗಳು ತೆರೆಯುತ್ತವೋ ಇಲ್ಲವೋ, ನಮ್ಮ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತವೆಯೇ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಮೊದಲ ಲಾಕ್‌ಡೌನ್‌ ನಿರ್ಬಂಧ ಸಡಿಲಿಸಿದಾಗ ಪ್ರೇಕ್ಷಕರ ಸಂಖ್ಯೆ ಎಷ್ಟೇ ನಿರ್ಬಂಧವಾಗಲಿ ನಾವು ಚಿತ್ರಮಂದಿರದಲ್ಲೇ ‘ರಾಮಾರ್ಜುನ’ ಚಿತ್ರ ಬಿಡುಗಡೆ ಮಾಡೋಣ ಎಂದು ಚಿತ್ರತಂಡ ನಿರ್ಧರಿಸಿತ್ತು. ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದ್ದರೂ ಚಿತ್ರದ ಮೊದಲ ಕೆಲವು ದಿನ ಪ್ರೇಕ್ಷಕರ ಸಂಖ್ಯೆಯನ್ನು ನೋಡಿದ ಮೇಲೆ ನನಗೆ ಸಮಾಧಾನವಾಯಿತು. ಒಳ್ಳೆಯ ಸಿನಿಮಾಗಳನ್ನು ಜನ ಕೈಬಿಡುವುದಿಲ್ಲ ಎಂದೆನಿಸಿತು.

ADVERTISEMENT

‘ರಾಮಾರ್ಜುನ’ ಚಿತ್ರಮಂದಿರದಲ್ಲೇ ತೆರೆಕಾಣಬೇಕಿದ್ದ ಸಿನಿಮಾ ಆಗಿದ್ದ ಕಾರಣ, ಒಟಿಟಿ ಬದಲು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಿದ್ದೆವು. ಪಕ್ಕಾ ಕಮರ್ಷಿಯಲ್‌ ಚಿತ್ರಗಳನ್ನು ಚಿತ್ರಮಂದಿರಕ್ಕೆಂದೇ ಮಾಡುತ್ತಾರೆ. ಜನ ಚಿತ್ರಮಂದಿರಕ್ಕೇ ಬಂದು ಚಿತ್ರವನ್ನು ಅನುಭವಿಸಬೇಕು. ಅದರ ಸೌಂಡ್‌, ಎಫೆಕ್ಟ್‌ಗಳನ್ನು ಆನಂದಿಸಬೇಕು ಎನ್ನುವುದು ಚಿತ್ರ ನಿರ್ಮಿಸಿದವರ ಮನಸ್ಸಲ್ಲಿ ಇರುತ್ತದೆ. ರಾಮಾರ್ಜುನ ಕೂಡಾ ಇಂತಹ ಸಿನಿಮಾ ಆಗಿತ್ತು. ಅನಿವಾರ್ಯವಾದರಷ್ಟೇ ಒಟಿಟಿಗೆ ಹೋಗುವ ನಿರ್ಧಾರವಾಗಿತ್ತು. ಇದು ಒಳ್ಳೆಯ ನಿರ್ಧಾರವಾಗಿತ್ತು.

* ಅವಕಾಶಗಳು ಕೈಚಾಚಿ ಕರೆಯುವಾಗ ಲಾಕ್‌ಡೌನ್‌ ತಡೆಯೊಡ್ಡಿತೇ?
ಖಂಡಿತವಾಗಿಯೂ. ಮೊದಲ ಲಾಕ್‌ಡೌನ್‌ ನನಗೆ ಬಹಳ ಸಂಕಷ್ಟ ತಂದಿತ್ತು. ನಾನು ಯಾವಾಗಲೂ ಒಂದರ ಮೇಲೊಂದು ಸಿನಿಮಾ ಸಹಿ ಮಾಡಿ ಮಾಡಿದವಳಲ್ಲ. ಒಂದು ಚಿತ್ರ ಪೂರ್ಣವಾದ ಬಳಿಕವಷ್ಟೇ ಮತ್ತೊಂದು ಪ್ರಾಜೆಕ್ಟ್‌ ಒಪ್ಪಿಕೊಳ್ಳುತ್ತಿದ್ದೆ. ಒಂದು ವೇಳೆ ಎರಡು ಸಿನಿಮಾ ಒಪ್ಪಿಕೊಂಡರೂ ಒಂದರ ಚಿತ್ರೀಕರಣ ಪೂರ್ಣವಾದ ಮೇಲಷ್ಟೇ ಇನ್ನೊಂದು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೆ. ಇಂತಹ ಸಂದರ್ಭದಲ್ಲಿ ಜಂಟಲ್‌ಮನ್‌, ರಾಮಾರ್ಜುನ ಮುಗಿಸಿ ಮುಂದೆ ನೋಡೋಣ ಎನ್ನುವಾಗ ಮೊದಲ ಲಾಕ್‌ಡೌನ್‌ ಆಯಿತು. ಈ ಸಂದರ್ಭದಲ್ಲಿ ನಾನು ಗೊಂದಲಕ್ಕೆ ಒಳಗಾಗಿದ್ದೆ. ಆದರೆ, ಇಡೀ ಚಿತ್ರರಂಗವೇ ಮನೆಯಲ್ಲೇ ಇದ್ದ ಕಾರಣ ಸ್ವಲ್ಪ ಸಮಾಧಾನದಲ್ಲಿದೆ.

ಆದರೆ ಇತ್ತೀಚೆಗೆ ಮತ್ತೆ ಲಾಕ್‌ಡೌನ್‌ ಘೋಷಿಸಿದಾಗ ನಾನು ಎರಡು ದೊಡ್ಡ ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ‘ಗುರು ಶಿಷ್ಯರು’ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಹೀಗಾಗಿ ಈ ಬಾರಿ ಯಾವುದೇ ಒತ್ತಡ ನನ್ನ ಮೇಲೆ ಇರಲಿಲ್ಲ. ಕೆಲವು ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಲಾಕ್‌ಡೌನ್‌ ನನಗೆ ತಾಳ್ಮೆಯನ್ನು ಕಲಿಸಿದೆ.

* ನಿಶ್ವಿಕಾ ಅವರು ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ ಹಾಗಿದೆ ಅಲ್ಲವೇ?
ಹೌದು, ಜಿಮ್‌ಗಳೆಲ್ಲವೂ ಬಂದ್‌ ಆಗಿದ್ದ ಕಾರಣ ಯೋಗ ಕಲಿತೆ. ಶರಣ್‌ ಅವರು ನಾಯಕರಾಗಿ ನಟಿಸುತ್ತಿರುವ ‘ಗುರು ಶಿಷ್ಯರು’ ಚಿತ್ರದಲ್ಲಿ ‘ಸೂಜಿ’ ಎನ್ನುವ ಪಾತ್ರ ಮಾಡುತ್ತಿದ್ದೇನೆ. 20 ವರ್ಷದ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ಇದಕ್ಕಾಗಿ ತೂಕ ಇಳಿಸಿಕೊಳ್ಳಬೇಕಾಗಿತ್ತು. ಈ ಸಂದರ್ಭದಲ್ಲಿ ಯೋಗ ಮಾಡಲು ಪ್ರಾರಂಭಿಸಿದೆ. ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಯೋಗ ತರಗತಿಗಳನ್ನು ಆರಂಭಿಸಿದೆ. ಪ್ರಾಯೋಗಿಕವಾಗಿ ಪ್ರಾರಂಭಿಸಿದ ಈ ಯೋಗ ಹವ್ಯಾಸ ಇದೀಗ ಜೀವನದ ಭಾಗವಾಗಿದೆ.

* ಸದ್ಯಕ್ಕೆ ನಿಶ್ವಿಕಾ ಅವರು ಯಾವ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ?
ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ, ಗಣೇಶ್‌ ಅವರ ಅಭಿನಯದ ‘ಸಖತ್‌’ ಚಿತ್ರದ ಚಿತ್ರೀಕರಣ ಬುಧವಾರದಿಂದ ಆರಂಭವಾಗಿದೆ. ‘ಗುರು ಶಿಷ್ಯರು’ ಚಿತ್ರದ ಚಿತ್ರೀಕರಣವೂ ಆರಂಭವಾಗಿದೆ. ಲಾಕ್‌ಡೌನ್‌ನಲ್ಲಿ ಹಲವು ದಿನಗಳನ್ನು ಕಳೆದುಕೊಂಡ ಕಾರಣ, ಇದೇ ಮೊದಲ ಬಾರಿಗೆ ಎರಡೂ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ.

* ‘ಗುರು ಶಿಷ್ಯರು’ ಹಾಗೂ ‘ಸಖತ್‌’ನಲ್ಲಿ ನಿಮ್ಮ ಪಾತ್ರದ ಬಗ್ಗೆ?
ನನ್ನ ಜನ್ಮದಿನಕ್ಕೆ ಶರಣ್‌, ಜಡೇಶ್‌ ಹಾಗೂ ತರುಣ್‌ ಸುಧೀರ್‌ ಅವರು ಸ್ಕಿಟ್‌ ಮೂಲಕ ನನ್ನನ್ನು ‘ಗುರು ಶಿಷ್ಯರು’ ಚಿತ್ರದ ನಾಯಕಿ ಎಂದು ಪರಿಚಯಿಸಿದ ಅನುಭವ ವಿಭಿನ್ನವಾಗಿತ್ತು. ನಾಯಕಿಯ ಜನ್ಮದಿನಕ್ಕೆ ಈ ರೀತಿಯ ಮೋಷನ್‌ ಪೋಸ್ಟರ್‌ ಬಿಡುಗಡೆ ಅಪರೂಪ. ‘ಜಂಟಲ್‌ಮನ್‌’ ಸಿನಿಮಾದಲ್ಲಿ ನಾನು ಜಡೇಶ್‌ ಅವರ ಜೊತೆ ಕಾರ್ಯನಿರ್ವಹಿಸಿದ್ದೆ. ಅಲ್ಲಿನ ನನ್ನ ಕೆಲಸವನ್ನು ಗುರುತಿಸಿ ಇಲ್ಲಿ ಅವಕಾಶ ನೀಡಿದ್ದಾರೆ. ಶರಣ್‌ ಹಾಗೂ ಗಣೇಶ್‌ ಅವರ ಜೊತೆ ನಟಿಸಬೇಕು ಎನ್ನುವ ಆಸೆ ಇತ್ತು. ಅದು ಈಗ ಈಡೇರಿದೆ.

‘ಗುರು ಶಿಷ್ಯರು’ ಚಿತ್ರದಲ್ಲಿ ಹಾಲು ಮಾರುವ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ರವಿಚಂದ್ರನ್‌ ಅಭಿಮಾನಿ. ಒಂದು ರೀತಿ ಫಿಲ್ಮಿ ಕ್ಯಾರೆಕ್ಟರ್‌. ಹಳ್ಳಿಮೇಷ್ಟ್ರಾಗಿ ಶರಣ್‌ ಅವರ ಪಾತ್ರವಿದೆ. ಈ ಎರಡು ಪಾತ್ರಗಳ ನಡುವಿನ ಪ್ರೇಮಕಥೆ ಇದು. ಪಾತ್ರಕ್ಕಾಗಿ ನಾನು ಸೈಕಲ್‌ ಸವಾರಿ ಅಭ್ಯಾಸ ಮಾಡಿದ್ದೆ. ಗಂಡು ಮಕ್ಕಳು ಬಿಡುವ ಸೈಕಲ್ ಅದು. ಸಿಟಿಯಲ್ಲಿ ಹುಟ್ಟಿಬೆಳೆದ ನನಗೆ ಲಂಗದಾವಣಿ ಉಟ್ಟುಕೊಂಡು ಸೈಕಲ್‌ ಸವಾರಿ ಮಾಡುವುದು ಸವಾಲಾಗಿತ್ತು. ಇದಕ್ಕಾಗಿ ಇಲ್ಲಿಗೆ ಸೈಕಲ್‌ ತರಿಸಿಕೊಂಡು ಮನೆ ಮುಂದೆಯೇ ಅಭ್ಯಾಸ ಮಾಡಿದ್ದೆ.

‘ಸಖತ್‌’ ಸಿನಿಮಾದಲ್ಲಿ ನಾನೂ ಕಣ್ಣು ಕಾಣಿಸದೇ ಇರುವ ‘ನಕ್ಷತ್ರ’ ಎನ್ನುವ ಹೆಸರಿನ ಭಾಷಣಗಾರ್ತಿಯ ಪಾತ್ರಕ್ಕೆ ಬಣ್ಣಹಚ್ಚಿದ್ದೇನೆ. ಮಕ್ಕಳಿಗೆ ಸ್ಫೂರ್ತಿಯ ಮಾತುಗಳನ್ನಾಡುವ ಭಾಷಣಗಾರ್ತಿ ನಾನು. ನನಗೂ ಈ ಪಾತ್ರ ಬಹಳ ಹೊಸದು. ಗಣೇಶ್‌ ಅವರ ಜೊತೆ ನಟಿಸಲು ಕಾತುರದಿಂದ ಕಾಯುತ್ತಿದ್ದೇನೆ.

ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.