ಬೆಂಗಳೂರು: ‘ನನ್ನ ತಂದೆಯ ಸಾವಿನ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನನಗೆ ಭಾವನಾತ್ಮಕವಾಗಿ ಬೆಂಬಲ ನೀಡಿದ್ದರು’ ಎಂದು ನಟಿ ರಮ್ಯಾ ಹೇಳಿದ್ದಾರೆ.
ಕನ್ನಡ ಟಾಕ್ ಶೋ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ವೀಕೆಂಡ್ ವಿತ್ ರಮೇಶ್’ ಸೀಸನ್ –5ರ ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ್ದ ರಮ್ಯಾ, ಹಲವು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
‘ನಾನು ನನ್ನ ತಂದೆಯನ್ನು ಕಳೆದುಕೊಂಡ ಎರಡು ವಾರಗಳ ನಂತರ ನಾನು ಸಂಸತ್ತಿನಲ್ಲಿದ್ದೆ. ಸಂಸತ್ತಿನ ಕಲಾಪಗಳ ಬಗ್ಗೆಯೂ ಏನೂ ತಿಳಿದಿರಲಿಲ್ಲ. ಕ್ರಮೇಣ ಹಿರಿಯರು ಕಲಾಪದ ಬಗ್ಗೆ ಎಲ್ಲವನ್ನೂ ಹೇಳಿಕೊಟ್ಟರು. ದುಃಖವನ್ನು ಮರೆತು ಕೆಲಸದ ಕಡೆಗೆ ಗಮನ ಹರಿಸಲು ಸಹಾಯ ಮಾಡಿದ್ದರು. ಜತೆಗೆ, ಮಂಡ್ಯದ ಜನರು ನನಗೆ ಆತ್ಮವಿಶ್ವಾಸವನ್ನು ತುಂಬಿದ್ದರು’ ಎಂದು ರಮ್ಯಾ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
‘ತಂದೆಯ ಸಾವಿನ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಜತೆಗೆ, ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೆ. ಆ ಸಮಯದಲ್ಲಿ ರಾಹುಲ್ ಗಾಂಧಿ ಅವರು ನನಗೆ ಭಾವನಾತ್ಮಕವಾಗಿ ಬೆಂಬಲ ನೀಡುವ ಮೂಲಕ ತಾಯಿ –ತಂದೆಯ ಬಳಿಕ ನನ್ನ ಜೀವನದಲ್ಲಿ ದೊಡ್ಡ ಪ್ರಭಾವ ಬೀರಿದ ವ್ಯಕ್ತಿಯಾಗಿದ್ದಾರೆ’ ಎಂದು ರಮ್ಯಾ ಹೇಳಿಕೊಂಡಿದ್ದಾರೆ.
2013ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ರಮ್ಯಾ ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದೀಗ ಚಿತ್ರರಂಗಕ್ಕೆ ಮರಳುವುದಾಗಿ ಘೋಷಿಸಿರುವ ಅವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.