ಚಂದನವನದ ಚಂದದ ಸಮ್ಮಾನ ಯಾರ ಮುಡಿಗೆ ಎನ್ನುವ ಪ್ರಶ್ನೆಗೆ ಉತ್ತರ ದೊರೆಯಲು ಕೆಲ ದಿನಗಳಷ್ಟೇ ಬಾಕಿ ಇದೆ. ಜೂನ್ 3ರಂದು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಸಮಾರಂಭ ನಡೆಯಲಿದೆ. 2022ನೇ ಸಾಲಿನಲ್ಲಿ ತೆರೆಕಂಡ ಚಿತ್ರಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. 23 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ನಾಮನಿರ್ದೇಶಿತರನ್ನು ಪರಿಚಯಿಸುವ ಸಮಯ. ‘ಅತ್ಯುತ್ತಮ ನಟ’, ‘ಅತ್ಯುತ್ತಮ ನಟಿ’ ಹಾಗೂ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡವರ ಕಿರುಪರಿಚಯ ಇಲ್ಲಿದೆ. ‘ಸಿನಿ ಸಮ್ಮಾನ’ದ ಕುರಿತ ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್ ನೋಡಿ. prajavani.net/cinesamman
ಅತ್ಯುತ್ತಮ ನಟ
1. ಸಂಚಾರಿ ವಿಜಯ್
ರಂಗಭೂಮಿ ಹಿನ್ನೆಲೆಯಿಂದ ಬಂದು ಚಂದನವನದಲ್ಲಿ ಮಿಂಚಿದವರು ವಿಜಯ್. ‘ಸಂಚಾರಿ’ ತಂಡದ ಸದಸ್ಯರಾಗಿ, ಬಣ್ಣದ ಲೋಕ ಪ್ರವೇಶಿಸಿದ್ದ ವಿಜಯ್, ತಮ್ಮ ನಟನಾ ಸಾಮರ್ಥ್ಯದಿಂದ ನಂತರ ‘ಸಂಚಾರಿ ವಿಜಯ್’ ಎಂದೇ ಕರೆಸಿಕೊಂಡರು. ಹೀಗೆ ರಂಗಭೂಮಿಯಲ್ಲಿ ಮಿಂಚಿದ ಇವರು ಚಂದನವನಕ್ಕೆ ಕಾಲಿಟ್ಟಿದ್ದು 2011ರಲ್ಲಿ. ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿರುವ ‘ರಂಗಪ್ಪ ಹೋಗ್ಬಿಟ್ನಾ’ ಚಿತ್ರದ ಮುಖಾಂತರ ಚಂದನವನ ಪ್ರವೇಶಿಸಿದ್ದ ಸಂಚಾರಿ ವಿಜಯ್ ಅವರು, ಮೊದಲಿಗೆ ಸಣ್ಣಪುಟ್ಟ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದರು. ‘ದಾಸ್ವಾಳ’, ‘ಒಗ್ಗರಣೆ’ ಚಿತ್ರದಲ್ಲಿನ ಅವರ ಪಾತ್ರ ಬಹಳ ಮೆಚ್ಚುಗೆ ಪಡೆದಿತ್ತು. ಇದಾದ ನಂತರದಲ್ಲಿ ಬಿ.ಎಸ್.ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ, ಅವಳು’ ಚಿತ್ರ ವಿಜಯ್ ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಚಿತ್ರದಲ್ಲಿನ ಪಾತ್ರಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆಯಿತು. 2021 ಜೂನ್‌ನಲ್ಲಿ ರಸ್ತೆ ಅಪಘಾತದಲ್ಲಿ ವಿಜಯ್ ಅವರು ನಿಧನರಾದರು. ಅವರ ಅಂಗಾಂಗಗಳನ್ನು ಕುಟುಂಬದ ಸದಸ್ಯರು ದಾನ ಮಾಡಿದ್ದರು. 2022ರಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ತಲೆದಂಡ’ (ನಿರ್ದೇಶನ: ಪ್ರವೀಣ್ ಕೃಪಾಕರ್) ಚಿತ್ರ ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡಿತ್ತು.
2.ರಕ್ಷಿತ್ ಶೆಟ್ಟಿ
ಕರಾವಳಿಯಿಂದ ಗಾಂಧಿನಗರಕ್ಕೆ ‘ಸಿಂಪಲ್’ ಆಗಿ ಬಂದು ‘ನಮ್ ಏರಿಯಾಲ್ ಒಂದ್ ದಿನ’ ಇದ್ದು ‘ತುಗ್ಲಕ್’ ಆದವರು ಇವರು. ನಂತರದಲ್ಲಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಹೇಳಿದ್ದ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದವರು. ‘ಕಿರಿಕ್ ಪಾರ್ಟಿ’ ಇವರ ಸಿನಿಪಯಣಕ್ಕೆ ತಿರುವು ನೀಡಿದ ಮತ್ತೊಂದು ಸಿನಿಮಾ. ಕೇವಲ ನಟನಾಗಿಯಷ್ಟೇ ಅಲ್ಲದೆ ನಿರ್ದೇಶನದ ಸಾಮರ್ಥ್ಯವನ್ನು ‘ಉಳಿದವರು ಕಂಡಂತೆ’ ಸಿನಿಮಾ ಮೂಲಕ ತೋರ್ಪಡಿಸಿ, ‘ಪರಂವಃ ಸ್ಟುಡಿಯೋಸ್’ ಮೂಲಕ ನಿರ್ಮಾಪಕರಾಗಿಯೂ ಮಿಂಚಿದರು. ‘ರಿಕ್ಕಿ’, ‘ವಾಸ್ತು ಪ್ರಕಾರ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಅವನೇ ಶ್ರೀಮನ್ನಾರಾಯಣ’ ಇವು ರಕ್ಷಿತ್ ಅವರ ಖಾತೆಯಲ್ಲಿರುವ ಸಿನಿಮಾಗಳು. ಸದ್ಯ ‘ರಿಚರ್ಡ್ ಆಂಟನಿ’ಯನ್ನು ಬೆನ್ನತ್ತಿ ‘ಸಪ್ತ ಸಾರಗದಾಚೆ ಎಲ್ಲೋ’ ಹೋಗಿದ್ದಾರೆ ರಕ್ಷಿತ್. ಇವರ ಮಾತು ಹೈಸ್ಪೀಡ್, ಎರಡು ಮೂರು ವರ್ಷಕ್ಕೆ ಒಂದು ಸಿನಿಮಾ ಇವರ ಗುರುತು.
3.ಶರಣ್
ಇವರು ಸ್ಯಾಂಡಲ್‌ವುಡ್‌ನ ‘ಅಧ್ಯಕ್ಷ’. ತೆರೆಯ ಮೇಲೆ ಹಾಸ್ಯದೌತಣ ಬಡಿಸುವ ಬಾಣಸಿಗ. ಹಾಸ್ಯ ಪಾತ್ರಗಳು, ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಾ ಬಂದ ಶರಣ್ ಅವರನ್ನು ‘ಅಧ್ಯಕ್ಷ’ ಸಿನಿಮಾ ನಾಯಕ ನಟನಾಗಿ ಗಟ್ಟಿಯಾಗಿ ಸ್ಥಿರಗೊಳಿಸಿತು. ಸಂಗೀತದ ಬಗೆಗೆ ವಿಶೇಷ ಒಲವಿಟ್ಟುಕೊಂಡಿದ್ದ ಶರಣ್ ಆರ್ಕೆಸ್ಟ್ರಾಗಳಲ್ಲಿ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ಸಿನಿಮಾದಲ್ಲಿ ಅವರ ಮೊದಲ ಹೆಜ್ಜೆ ‘ಪ್ರೇಮ ಪ್ರೇಮ ಪ್ರೇಮ’ ಚಿತ್ರ. ಅಲ್ಲಿಂದ ಸತತವಾಗಿ ಹಾಸ್ಯ ನಟನಾಗಿ ನಟಿಸುತ್ತಾ ನೂರನೇ ಚಿತ್ರದ ಮೂಲಕ ನಾಯಕ ನಟನಾಗಿ ಚಂದನವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದವರು ಶರಣ್. 2012ರಲ್ಲಿ ತಾವೇ ನಿರ್ಮಸಿದ ‘ರ‍್ಯಾಂಬೋ' ಚಿತ್ರದ ಮೂಲಕ ನಾಯಕನಟನಾಗಿ ಮಿಂಚಿದರು. ನಂತರ ಬಂದ ‘ವಿಕ್ಟರಿ’, ‘ಅಧ್ಯಕ್ಷ’, ‘ರಾಜರಾಜೇಂದ್ರ’, ‘ಜೈ ಮಾರುತಿ 800’, ‘ರ್‍ಯಾಂಬೋ–2’ ಮುಂತಾದ ಚಿತ್ರಗಳು ಒಂದರ ಮೇಲೊಂದರಂತೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದವು. ‘ಗುರು ಶಿಷ್ಯರು’ ಸಿನಿಮಾ ಮೂಲಕ ತನ್ನೊಳಗಿನ ಮತ್ತೋರ್ವ ‘ಶರಣ’ನನ್ನು ಶರಣ್ ಪರಿಚಯಿಸಿದರು. ‘ಅವತಾರ ಪುರುಷ’ನಾಗಿ ಕಾಣಿಸಿಕೊಂಡು ಅಷ್ಟದಿಗ್ಬಂಧನ ಮಂಡಲಕ ಭೇದಿಸಿ ಸದ್ಯ ‘ಛೂ ಮಂತರ್’ ಆಗಿದ್ದಾರೆ.
4.ಅಚ್ಯುತ್ ಕುಮಾರ್
ತಿಪಟೂರು ತಾಲೂಕಿನವರಾದ ಅಚ್ಯುತ್ ಕುಮಾರ್ ಸದ್ಯ ಚಂದನವನದ ನಾಯಕೇತರ ಪ್ರಮುಖ ಪಾತ್ರಗಳಿಗೆ ಜೀವ ತುಂಬುವ ನಟರಲ್ಲಿ ಒಬ್ಬರು. ರಂಗಭೂಮಿಯ ನಂಟಿನಿಂದ ಕಿರುತೆರೆಗೆ ಹೆಜ್ಜೆ ಇಟ್ಟವರು. ‘ಗೃಹಭಂಗ’ ಧಾರಾವಾಹಿಯ ಮುಖ್ಯಪಾತ್ರದ ಮೂಲಕ ಗುರುತಿಸಿಕೊಂಡ ಅಚ್ಯುತ್ ಅವರು ನಂತರ ಬೆಳ್ಳಿತೆರೆಗೆ ಜಿಗಿದರು. ಕಿರುತೆರೆಯಲ್ಲೂ ಅನಂತನಾಗ್ ತರಹದ ಹಿರಿಯ ನಟರ ಸಮಕ್ಕೂ ಅಭಿನಯದ ಸಾಣೆಗೆ ಒಡ್ಡಿಕೊಂಡವರು. ಜನಪ್ರಿಯ, ಕಲಾತ್ಮಕ ಎರಡೂ ಬಗೆಯ ಚಿತ್ರಗಳಲ್ಲಿ ಅಚ್ಯುತ್ ನಟಿಸಲು ಹಿಂಜರಿದವರಲ್ಲ. ಪ್ರಯೋಗಶೀಲತೆಗೆ ಸದಾ ಸಾಥ್ ನೀಡುತ್ತಾ ಬಂದವರು. ಇದಕ್ಕೆ ‘ಫೋರ್ ವಾಲ್ಸ್’ ಸಿನಿಮಾ ಒಂದು ಸಾಕ್ಷ್ಯ. ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ ತಮಿಳು ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ಅವರ ಅಭಿನಯ ಪ್ರತಿಭೆ ಈಗ ರಾಷ್ಟ್ರಮಟ್ಟದಲ್ಲಿ ಗುರುತಾಗಲು ‘ಕಾಂತಾರ’ ಚಿತ್ರವೂ ಕಾರಣವಾಗಿದೆ.
5. ಯಶ್
ಬಣ್ಣದ ಲೋಕದ ಕನಸು ಹೊತ್ತು ಹಳ್ಳಿಯಿಂದ ಗಾಂಧಿನಗರಕ್ಕೆ ಹೆಜ್ಜೆ ಇಟ್ಟು, ಕಿರುತೆರೆ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದವರು ಯಶ್. ‘ಜಂಬದ ಹುಡುಗಿ’ ಚಿತ್ರದ ಮೂಲಕ ಚಂದನವನದಲ್ಲಿ ಪಯಣ ಆರಂಭಿಸಿದ ಯಶ್ ಸದ್ಯ ‘ರಾಕಿ ಭಾಯ್’ ಆಗಿ ವಿಶ್ವದೆಲ್ಲೆಡೆ ಪರಿಚಿತರು. ಯಶ್ ಸಿನಿ ಬದುಕಿಗೆ ತಿರುವು ಕೊಟ್ಟ ಸಿನಿಮಾ ಶಶಾಂಕ್ ಅವರ ನಿರ್ದೇಶನದ ‘ಮೊಗ್ಗಿನ ಮನಸು’. ಇದಾದ ಬಳಿಕ ಬಿಡುಗಡೆಗೊಂಡ ‘ಮೊದಲಸಲ’ ಸಿನಿಮಾ ಯಶ್ ಅವರ ಸಿನಿಪಯಣಕ್ಕೆ ಕಿಕ್‌ಸ್ಟಾರ್ಟ್ ನೀಡಿತು. ‘ಕಿರಾತಕ’, ‘ಲಕ್ಕಿ’, ‘ಡ್ರಾಮ’, ‘ಗೂಗ್ಲಿ’ ‘ರಾಜಾಹುಲಿ’, ‘ಗಜಕೇಸರಿ’, ‘ಮಿ.ಆ್ಯಂಡ್ ಮಿಸಸ್ ರಾಮಚಾರಿ’ ಹೀಗೆ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಗೆದ್ದವು. 2018ರಲ್ಲಿ ತೆರೆಗೆ ಬಂದ ‘ಕೆ.ಜಿ.ಎಫ್’ ಹಾಗೂ 2022ರಲ್ಲಿ ಬಂದ ‘ಕೆ.ಜಿ.ಎಫ್. ಚಾಪ್ಟರ್–2’ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು. ಇದೇ ಸರಣಿ ಯಶ್ ಅವರಿಗೆ ಸಿನಿಮಾ ಜಗತ್ತಿನಲ್ಲಿ ಹೊಸ ಛಾಪು ತಂದಿತು.
******
ಅತ್ಯುತ್ತಮ ನಟಿ
1.ಹಿತಾ ಚಂದ್ರಶೇಖರ್
ಸಿಹಿ-ಕಹಿ ಚಂದ್ರು ಮತ್ತು ಸಿಹಿ-ಕಹಿ ಗೀತಾ ಎಂದೇ ಪರಿಚಿತರಾದ ಚಂದ್ರಶೇಖರ್ ಮತ್ತು ಗೀತಾ ಅವರ ಮಗಳು ಹಿತಾ ಚಂದ್ರಶೇಖರ್. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಿಂದ ಬಿಬಿಎಮ್ ಪದವಿ ಪಡೆದು, ರಂಗಭೂಮಿಯ ನಂಟು ಹೊಂದಿ ಬೆಳ್ಳಿತೆರೆಯತ್ತ ಹೆಜ್ಜೆ ಇಟ್ಟವರು ಇವರು. ರೋಶನ್ ತನೇಜಾ ಸ್ಕೂಲ್ ಆಫ್ ಆ್ಯಕ್ಟಿಂಗ್‌ನಲ್ಲಿ ಡಿಪ್ಲೊಮಾ ಕೋರ್ಸ್ ಬಳಿಕ, 2014ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. 2015ರಲ್ಲಿ ‘1/4 ಕೆಜಿ ಪ್ರೀತಿ’ಯಲ್ಲಿ ನಾಯಕಿ ನಟಿಸಿದ ಹಿತಾ, ಬಳಿಕ ‘ಯೋಗಿ ದುನಿಯಾ’ದಲ್ಲೂ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ನಂತರ ‘ಒಂಥರಾ ಬಣ್ಣಗಳು’, ‘ಪ್ರಿಮೀಯರ್ ಪದ್ಮಿನಿ’, ‘ಶುಭಮಂಗಳ’, ‘ತುರ್ತು ನಿರ್ಗಮನ’ದಲ್ಲಿ ಗಮನಸೆಳೆದರು.
2.ಲಕ್ಷ್ಮಿ ಚಂದ್ರಶೇಖರ್
ಶಾಲಾ ದಿನಗಳಿಂದ ನಾಟಕಗಳಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಲಕ್ಷ್ಮಿ ಚಂದ್ರಶೇಖರ್ ಅವರಿಗೆ ಅಭಿನಯದಲ್ಲಿ ಐದು ದಶಕಗಳ ಅನುಭವವಿದೆ. ‘ಮಾಯಾಮೃಗ’ ಧಾರಾವಾಹಿಯಲ್ಲಿ ‘ಕಮಲು’ ಪಾತ್ರದಿಂದ ಜನಪ್ರಿಯರಾಗಿರುವ ಇವರು ‘ಗೃಹಭಂಗ’, ‘ಚುಕ್ಕಿ’, ‘ಮಂಥನ’ ಸೇರಿದಂತೆ 20ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಪ್ರೀತಿಯಿಂದ’, ‘ಜ್ಯೋತಿ ಅಲಿಯಾಸ್ ಕೋತಿರಾಜ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿಯವರೆಗೂ ಸುಮಾರು 15–20 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಒಂಬತ್ತು ಸುಳ್ಳು ಕಥೆಗಳು’ ಚಿತ್ರದ ಒಂದು ಕಥೆಯಲ್ಲಿ ಮುಖ್ಯ ಪಾತ್ರಧಾರಿ ಇವರು.
3.ಸಿರಿ ರವಿಕುಮಾರ್
ನಟ ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಸಕುಟುಂಬ ಸಮೇತ’ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಟಿ ಸಿರಿ. ಮೂಲತಃ ಆರ್‌ಜೆ, ರೂಪದರ್ಶಿ, ನಿರೂಪಕಿಯಾಗಿರುವ ಸಿರಿ ಸದ್ಯ ನಟ ರಾಜ್ ಬಿ.ಶೆಟ್ಟಿ ನಾಯಕರಾಗಿ ನಟಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್‌ನ ಮೊದಲ ಚಿತ್ರ ಇದಾಗಿದೆ. ಈ ಚಿತ್ರದ ಜೊತೆಗೆ ‘ಆಬ್ರಕಡಾಬ್ರ’ ಹಾಗೂ ಅಭಿಜಿತ್ ಮಹೇಶ್ ನಿರ್ದೇಶನದ, ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲೂ ಸಿರಿ ಬಣ್ಣಹಚ್ಚಿದ್ದಾರೆ.
4.ಗಾನವಿ ಲಕ್ಷ್ಮಣ್
ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ಮಿಂಚುತ್ತಿರುವ ನಟಿಯರ ಪೈಕಿ ಗಾನವಿ ಕೂಡಾ ಒಬ್ಬರು. ಟಿ.ಎನ್.ಸೀತಾರಾಂ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಮನೆಮಾತಾಗಿರುವ ಗಾನವಿ ಚಿಕ್ಕಮಗಳೂರಿನವರು. ‘ಜಾನಕಿ’ ಪಾತ್ರ ಅವರ ಮನಸ್ಸಿಗೆ ತೃಪ್ತಿ ಕೊಟ್ಟ ಪಾತ್ರವಂತೆ. ರಂಗಭೂಮಿಯ ನಂಟೂ ಇವರಿಗಿದೆ. ಇವರು ತಮ್ಮ ವೃತ್ತಿಜೀವನವನ್ನು ಮೊದಲು ಆರಂಭಿಸಿದ್ದು ವಸತಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ. ನಟ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು, ನಟ ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾ ‘ವೇದ’ದಲ್ಲಿ ‘ಪುಷ್ಪ’ ಪಾತ್ರದಲ್ಲಿ ಮಿಂಚಿದವರು. ‘ಭಾವಚಿತ್ರ’ ಇವರ ಮತ್ತೊಂದು ಸಿನಿಮಾ. ಅವರ ತೆಲುಗಿನ ಮೊದಲ ಚಿತ್ರ, ಅಜಯ್ ಸಾಮ್ರಾಟ್ ನಿರ್ದೇಶನದ ಜಗಪತಿ ಬಾಬು, ಆಶಿಶ್ ಗಾಂಧಿ ಅವರು ನಟಿಸಿರುವ ‘ರುದ್ರಾಂಗಿ’ ಚಿತ್ರೀಕರಣ ಪೂರ್ಣಗೊಂಡಿದ್ದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಸೈಕಾಲಜಿ ಹಾಗೂ ಕ್ರಿಮಿನಾಲಜಿ ಓದಿರುವ ಇವರು ನಟನೆ ಅವಕಾಶ ಸಿಕ್ಕಿಲ್ಲವಾಗಿದ್ದರೆ ಫೊರೆನ್ಸಿಕ್ (ವಿಧಿವಿಜ್ಞಾನ) ವಿಭಾಗದಲ್ಲಿ ಕೆಲಸ ಮಾಡಿದವರು.
5. ಅದಿತಿ ಪ್ರಭುದೇವ
ನಗುವೇ ಇವರ ಆಭರಣ. ಮಾತಿನ ಬೆನ್ನೇರಿ ವೇದಿಕೆ ಏರಿದವರು ಅದಿತಿ. ಕಿರುತೆರೆಗೆ ಮೊದಲ ಹೆಜ್ಜೆ ಇಟ್ಟು, ‘ನಾಗಕನ್ನಿಕೆ’ಯಾಗಿ ಗಾಂಧಿನಗರದ ಗಮನ ಸೆಳೆದವರು. ‘ಧೈರ್ಯಂ’ ಸಿನಿಮಾ ಮೂಲಕ ಹಿರಿತೆರೆಗೆ ಜಿಗಿದರು. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಂಕ್ ಹೊಂದಿರುವ ನಟಿಯರ ಪೈಕಿ ಅದಿತಿ ಕೂಡಾ ಒಬ್ಬರು. ಯಾವುದೂ ಸೂಪರ್‌ಡ್ಯೂಪರ್ ಹಿಟ್ ಎಂದೆನಿಸಿಕೊಳ್ಳದಿದ್ದರೂ, ಅದಿತಿ ಅವರಿಗೆ ಅವಕಾಶ ಕಡಿಮೆಯಾಗಿಲ್ಲ. ದಾವಣಗೆರೆ ಇವರ ಊರು. ವಿಜಯ್ ಪ್ರಸಾದ್ ನಿರ್ದೇಶನದ ‘ತೋತಾಪುರಿ’ ಸರಣಿ, ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’, ಗೋಲ್ಡರ್ ಸ್ಟಾರ್ ಗಣೇಶ್ ಅವರ ಜೊತೆ ‘ತ್ರಿಬಲ್ ರೈಡಿಂಗ್’ನಲ್ಲೂ ಅವರು ಪಯಣಿಸಿದ್ದಾರೆ. ‘ಆನ’ದಂಥ ನಾಯಕಿಪ್ರಧಾನ ಸಿನಿಮಾದಲ್ಲೂ ಬಣ್ಣಹಚ್ಚಿದ್ದಾರೆ. ‘Once upon a time in ಜಮಾಲಿಗುಡ್ಡ’ ಸಿನಿಮಾದಲ್ಲಿ ಅದಿತಿ ಪಾತ್ರ ಮೆಚ್ಚುಗೆ ಪಡೆದಿತ್ತು. ಇವರ ನಟನೆಯ ‘ತೋತಾಪುರಿ–2’, ‘ಅದೊಂದಿತ್ತು ಕಾಲ’, ‘5ಡಿ’, ‘ಮಾಫಿಯಾ’, ‘ಮ್ಯಾಟ್ನಿ’ ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. ಸಿನಿಮಾವಷ್ಟೇ ಅಲ್ಲದೆ ವೆಬ್ ಸರಣಿಗೂ ಅದಿತಿ ಹೆಜ್ಜೆ ಇಟ್ಟಿದ್ದು, ‘ಲವ್ ಯು ಅಭಿ’ ಇತ್ತೀಚೆಗೆ ತೆರೆಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.