ನಟಿ ಪೂಜಾ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ಜಿಲೇಬಿ’, ‘ದಂಡುಪಾಳ್ಯ 1’ ಮತ್ತು ‘ದಂಡುಪಾಳ್ಯ 2’ ಸಿನಿಮಾಗಳು ತೆರೆಕಂಡ ನಂತರ ಮತ್ತೊಂದು ನಾಯಕಿ ಪ್ರಧಾನ ಚಿತ್ರವಾದ ‘ಸಂಹಾರಿಣಿ’ಯಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಚಿತ್ರ ಇದು. ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಅವರು ಮತ್ತೊಂದು ವಿಭಿನ್ನ ಕಥಾಹಂದರ ‘ಬೀದಿ ದೀಪ’ ಎಂಬ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕಂಟೆಂಟ್ ಪ್ರಧಾನವಾದ ಇದಕ್ಕೆ ಸ್ಯಾಮುಯೆಲ್ ಟೋನಿಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅವರೇ ನಿಭಾಯಿಸಿದ್ದಾರೆ.ಈ ಹಿಂದೆ ಅವರು ಅಕ್ಷಯ್ ಮತ್ತು ದೀಪಿಕಾ ದಾಸ್ ನಟಿಸಿದ್ದ ‘ದೂಧ್ ಸಾಗರ್’ ಚಿತ್ರ ನಿರ್ದೇಶಿಸಿದ್ದರು. ‘ನೀವು ಕರೆ ಮಾಡಿದ ಚಂದಾದಾರರು ಈಗ ಬ್ಯುಸಿಯಾಗಿದ್ದಾರೆ’ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದು, ಲಾಕ್‌ಡೌನ್ ಪರಿಣಾಮ ಇದು ಅರ್ಧಕ್ಕೆ ನಿಂತಿದೆ.
‘ಬೀದಿ ದೀಪ’ ಚಿತ್ರೀಕರಣ ಶೇಕಡ 60ರಷ್ಟು ಮುಗಿದಿದೆ. ಇನ್ನು 25 ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಲಾಕ್‌ಡೌನ್ ತೆರವಾದ ತಕ್ಷಣ ಶೂಟಿಂಗ್ ಆರಂಭಿಸಲು ಚಿತ್ರತಂಡ ತೀರ್ಮಾನಿಸಿದೆ.
ಪೂಜಾ ಗಾಂಧಿಯ ಜೊತೆಗೆ ‘ತಿಥಿ’ ಚಿತ್ರದ ಖ್ಯಾತಿಯ ಪೂಜಾ, ಹಾಸ್ಯನಟ ಮಿತ್ರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೊಸ ಪ್ರತಿಭೆ ರಾಮ್‌ಚೇತನ್, ಪೂಜಾ ಅವರ ಪ್ರಿಯತಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ರಾತ್ರಿ ಜಗತ್ತಿನಲ್ಲೂ ನಮ್ಮ ಕಣ್ಣಿಗೆ ಕಾಣದ ಬದುಕಿದೆ. ಹಿಂದೆ ಬೀದಿ ದೀಪದ ಕೆಳಗೆ ಓದುವವರಿಗೆ ಹೆಚ್ಚು ಬೆಲೆ ಕೊಡುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಬೀದಿ ದೀಪದ ಕೆಳಗೆ ನಿಲ್ಲುವವರಿಗೆ ಗೌರವ ಇಲ್ಲದಂತಾಗಿದೆ. ಆದರೆ, ಎಷ್ಟೋ ಜನರ ಬದುಕು ಈ ಬೀದಿ ದೀಪದ ಬೆಳಕನ್ನು ಅವಲಂಬಿಸಿದೆ. ಚಿತ್ರದಶೀರ್ಷಿಕೆಯೇ ಹೇಳುವಂತೆ ಯಾರೆಲ್ಲರ ಬದುಕಿಗೆ ಇದು ಬೆಳಕು ನೀಡುತ್ತದೆ ಎನ್ನುವುದೇ ಚಿತ್ರದ ಕಥಾಹಂದರ.ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ’ ಎಂದು ವಿವರಿಸುತ್ತಾರೆ ಟೋನಿ.
ವಾನರ ಸಿನಿ ವರ್ಲ್ಡ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯವಿದೆ. ಗೌತಮ ಶ್ರೀವಾಸ್ತವ ಸಂಗೀತ ನೀಡಲಿದ್ದಾರೆ. ನಾಗೇಶ ಆಚಾರ್ಯ ಅವರ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.