ಗುರುಪ್ರಸಾದ್ ಅವರ ಮೊದಲ ಹೆಸರು ರಾಮಚಂದ್ರ ಶರ್ಮಾ. ಮೂಲತಃ ಕನಕಪುರದ ಕೋಟೆಯವರಾದ ಗುರುಪ್ರಸಾದ್, ವಿಜ್ಞಾನ ಪದವಿ ಮುಗಿಸಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಟಿ.ಎನ್.ಸೀತಾರಾಮ್ ಅವರ ಬಳಿ ‘ಮನ್ವಂತರ’ ಧಾರವಾಹಿಗೆ ಸಂಭಾಷಣೆಕಾರರಾಗಿ ಸೇರಿಕೊಂಡರು. ಅಲ್ಲಿಯೇ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ, ನಂತರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನ ತಂಡ ಸೇರಿದರು.
2006ರಲ್ಲಿ ತೆರೆಕಂಡ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ ‘ಮಠ’ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು ಗುರುಪ್ರಸಾದ್. ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರ ಜನಪ್ರಿಯವಾಯಿತು. ಆ ಬಳಿಕ ಅವರು ಮಠ ಗುರುಪ್ರಸಾದ್ ಎಂದೇ ಜನಪ್ರಿಯಗೊಂಡಿದ್ದರು.
‘ನಾನು ನಿರ್ದೇಶಕನಲ್ಲ, ಹತಾಶ ಪ್ರೇಕ್ಷಕ’ ಎಂದು ಹೇಳಿಕೊಳ್ಳುತ್ತಲೇ ಸಿನಿಮಾ ನಿರ್ದೇಶನಕ್ಕಿಳಿದಿದ್ದ ಗುರುಪ್ರಸಾದ್ ಈವರೆಗೆ ಐದು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ‘ಎದ್ದೇಳು ಮಂಜುನಾಥ’ ಸೂಪರ್ ಹಿಟ್ ಚಿತ್ರ. ಈ ಸಿನಿಮಾದ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿ ಕೂಡ ಗುರುಪ್ರಸಾದ್‌ಗೆ ಲಭಿಸಿತ್ತು.
2013ರಲ್ಲಿ ಇವರ ನಿರ್ದೇಶನದ ‘ಡೈರೆಕ್ಟರ್ ಸ್ಪೆಷಲ್’, 2017ರಲ್ಲಿ ‘ಎರಡನೇ ಸಲ’ ಚಿತ್ರಗಳು ತೆರೆ ಕಂಡವು. ‘ಎರಡನೇ ಸಲ’ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾದರೂ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ.
2024ರಲ್ಲಿ ತೆರೆಕಂಡ ಇವರ ‘ರಂಗನಾಯಕ’ ಚಿತ್ರದ ಕಥೆಯ ಕುರಿತು ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗದ ಇತಿಹಾಸ ಹೇಳುವ ವಿಚಿತ್ರ ಕಥೆ ಹೊಂದಿರುವ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ‘ಎದ್ದೇಳು ಮಂಜುನಾಥ್–2’ ಸಿನಿಮಾವನ್ನು ಚಿತ್ರೀಕರಿಸುವ ಯತ್ನ ಮಾಡಿದ್ದರು. ಇದರಲ್ಲಿ ತಾವೇ ನಾಯಕನಾಗಿ ಅಭಿನಯಿಸಲು ಹೊರಟಿದ್ದರು.
ನಿರ್ದೇಶಕ ಮಾತ್ರವಲ್ಲದೇ ನಟನಾಗಿಯೂ ಗುರುತಿಸಿಕೊಂಡಿದ್ದರು. ‘ಮೈಲಾರಿ’, ‘ಹುಡುಗರು’, ‘ಕುಷ್ಕ’, ‘ಮಠ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ತೀರ್ಪುಗಾರನಾಗಿ ಕಾಣಿಸಿಕೊಂಡಿದ್ದರು.
ಕೊರೊನಾ ಸಂದರ್ಭದಲ್ಲಿ ಇವರು ಬದುಕಿನ ಹತಾಶೆ ಕುರಿತು ವಿಡಿಯೊ ಮಾಡಿ ಹಾಕಿದ್ದು ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಕೃತಿಗಳನ್ನು ರಚಿಸಿದ್ದಾರೆ. ಅರ್ಧಕ್ಕೆ ನಿಂತ ಇವರ ಸಿನಿಮಾಗಳು ಕೆಲವು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.