ADVERTISEMENT

ಸಂದರ್ಶನ: ರ‍್ಯಾಪ್‌ ‘ಸೂತ್ರಧಾರಿ’ ಚಂದನ್‌ ಶೆಟ್ಟಿ

ಶರತ್‌ ಹೆಗ್ಡೆ
Published 13 ಅಕ್ಟೋಬರ್ 2022, 22:15 IST
Last Updated 13 ಅಕ್ಟೋಬರ್ 2022, 22:15 IST
ಅಪೂರ್ವ ಹಾಗೂ ಚಂದನ್‌ ಶೆಟ್ಟಿ
ಅಪೂರ್ವ ಹಾಗೂ ಚಂದನ್‌ ಶೆಟ್ಟಿ   

ಸ್ವತಂತ್ರ ಕಲಾವಿದನಾಗುವ ಹಂಬಲದಿಂದ ಸುಮಾರು 11 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಅಲೆದಾಡಿ ಗಾಯಕನಾಗಿ ಗುರುತಿಸಿಕೊಂಡ ಚಂದನ್‌ ಶೆಟ್ಟಿ ಅವರಿಗೀಗ ಬಿಡುವಿಲ್ಲದಷ್ಟು ಅವಕಾಶಗಳು. ಕನ್ನಡದಲ್ಲಿ ರ‍್ಯಾಪ್‌ ಗಾಯನ ಪ್ರಯೋಗ ಮಾಡಿ ಯಶಸ್ವಿಯಾದವರು. ಈಗ ಅವರ ಎರಡನೇ ಚಿತ್ರ ‘ಸೂತ್ರಧಾರಿ’ ಚಿತ್ರೀಕರಣ ನಡೆದಿರುವ ಹೊತ್ತಿನಲ್ಲಿ ಅವರ ಮಾತು.

ಸಂಗೀತದ ಪ್ರಯೋಗಶೀಲತೆ ಬೆಳೆದದ್ದು ಹೇಗೆ?

ನಾನು ಸಂಗೀತ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕವಾಗಿ. ಶಾಸ್ತ್ರೀಯವಾಗಿ ಕಲಿತವನೂ ನಾನಲ್ಲ. ಒಂದು ದಿನ ಕಾಲೇಜು ಗೆಳೆಯರು ಹಾಡಬೇಕು ಎಂದು ತಮಾಷೆಗಾಗಿ ವೇದಿಕೆಗೆ ದಬ್ಬಿದರು. ಆ ಹಾಡಿಗೇ ಪ್ರಥಮ ಬಹುಮಾನ ಬರುತ್ತದೆ ಎಂದು ಊಹಿಸಿರಲಿಲ್ಲ. ಅಲ್ಲಿಂದ ಹಾಡುವುದು, ಬರೆಯುವುದು ಶುರು ಮಾಡಿದೆ. ಕಾಲೇಜು ದಿನಗಳಲ್ಲಿ ಹಿಂದಿ ಹಾಗೂ ಪಾಶ್ಚಾತ್ಯ ಭಾಷೆಗಳ ರ‍್ಯಾಪ್‌ ಹಾಡುಗಳನ್ನು ನೋಡುತ್ತಿದ್ದೆ.ಹಾಗಿದ್ದರೆ ನಮ್ಮ ಭಾಷೆಯಲ್ಲಿ ಇದೇ ಶೈಲಿಯ ಹಾಡು ಏಕೆ ಇಲ್ಲ? ಅಂಥದ್ದೊಂದು ಪ್ರಯೋಗ ಮಾಡಲೇಬೇಕು ಎಂದು ಅನಿಸಿತು. ಆ ಪ್ರಯೋಗವನ್ನು ಜನ ಸ್ವೀಕರಿಸಿದ್ದಾರೆ. ಬೇರೆ ಭಾಷೆಗಳಿಗೂ ಡಬ್‌ ಆಗಿವೆ. ಈಗ ನನ್ನ ಎಲ್ಲ ಆಲ್ಬಂಗಳ ಒಟ್ಟು ವೀಕ್ಷಣೆ ಸುಮಾರು 80 ಕೋಟಿಗೂ ದಾಟಿದೆ.

ADVERTISEMENT

ಕುಟುಂಬದ ಪ್ರೋತ್ಸಾಹ ಇತ್ತೇ?

ಅಪ್ಪ ಅಮ್ಮ ಹಾಡುತ್ತಿದ್ದರು. ಅಮ್ಮ ಜನಪದ ಹಾಡುಗಳನ್ನು ತಾಳಬದ್ಧವಾಗಿ ಹಾಡುತ್ತಿದ್ದರು. ಆದರೆ, ನಾನು ಈ ಕ್ಷೇತ್ರವನ್ನು ಆಯ್ದುಕೊಂಡದ್ದು ಅಮ್ಮನಿಗೇಕೋ ಆತಂಕ ತಂದಿತ್ತು. ಬೇರೆ ನೌಕರಿ ಮಾಡುವಂತೆ ಹೇಳುತ್ತಿದ್ದರು. ಅಪ್ಪನಂತೂ ನನ್ನ ಮೇಲೆ ವಿಶ್ವಾಸ ಇಟ್ಟಿದ್ದರು. ಹಾಗಾಗಿ ಮುಂದುವರಿಯಲು ಪ್ರೋತ್ಸಾಹ ಸಿಕ್ಕಿತು. 2011 –12ರಲ್ಲಿ ಬೆಂಗಳೂರಿಗೆ ಬಂದೆ. ವಿಪರೀತ ಆರ್ಥಿಕ ಅತಂತ್ರತೆ ಇತ್ತು. ಈ ವೇಳೆ ನಟರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಅವರ ಪರಿಚಯವಾಯಿತು. ಅರ್ಜುನ್‌ ಜನ್ಯ ಅವರಂಥ ಗುರುಗಳು ಸಿಕ್ಕಿದರು. ಮೊದಮೊದಲು ಉಚಿತವಾಗಿಯೇ ಹಾಡಿದ್ದುಂಟು. ಕೆಲವು ನಿರ್ದೇಶಕರು ಹಾಡಿಸಿ, ಊಟ ಹಾಕಿ ಕಳುಹಿಸಿದ್ದುಂಟು. ಹಾಗೂ ಹೀಗೂ ಕಾಲ ಸರಿಯುತ್ತಿತ್ತು.

ಬ್ರೇಕ್‌ ಕೊಟ್ಟ ಹಾಡು?

ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ‘ಪವರ್‌’ ಚಿತ್ರದಲ್ಲಿ ಒಂದು ಹಾಡಿಗೆ ಅವಕಾಶ ಕೊಟ್ಟರು. ಅದು ನನ್ನ 25ನೇ ಹಾಡು. ಅದು ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು.

ಈ ನಡುವೆ ದಿನಿ ಕ್ರಿಯೇಷನ್ಸ್‌ ಸಹಯೋಗದಲ್ಲಿ ‘ಹಾಳಾಗೋದೇ’ ಅನ್ನುವ ಆಲ್ಬಂ ಮಾಡಿದೆ. ಅದನ್ನು ಕೊನೆಯ ಪ್ರಯತ್ನ ಎಂಬಂತೆ ಮಾಡಿದ್ದೆ. ಆದರೆ ಅದು ನಿರೀಕ್ಷೆಗೆ ಮೀರಿ ಯಶಸ್ವಿಯಾಯಿತು. ಕೊನೆಗೆ ಈ ಕ್ಷೇತ್ರದಲ್ಲೇ ಉಳಿಯಲು ನಿರ್ಧರಿಸಿದೆ.

ಸಿನಿಮಾ ಪ್ರವೇಶಕ್ಕೆ ತರಬೇತಿ?

ಸುಜಯ್‌ ಶಾಸ್ತ್ರಿ ಅವರ ತಂಡದಲ್ಲಿ ‘ಎಲ್ಲರ ಕಾಲೆಳೆಯುತ್ತೆ ಕಾಲ’ ಅನ್ನುವ ಚಿತ್ರದಲ್ಲಿ ಪಾತ್ರ ಮಾಡಿದೆ. ಅದೊಂದು ಒಳ್ಳೆಯ ಕಲಿಕೆ. ಅಲ್ಲಿ ಎಲ್ಲರೂ ಸಿಕ್ಕಿದರು. ಅದೊಂದು ತರಹ ಸಾಂದರ್ಭಿಕ ಹಾಸ್ಯ ಕತೆ. ಅದಾದ ಮೇಲೆ ಈ ಅವಕಾಶ ಬಂದಿದೆ. ಸಂಗೀತ ಮತ್ತು ಸಿನಿಮಾದ ಪ್ರಪಂಚಗಳೇ ಬೇರೆ. ಸಂಗೀತಕ್ಕೆ ಒಂದು ಸಿದ್ಧತೆ ಬೇಕು. ಸಿನಿಮಾಕ್ಕೆ ಮೈ, ಮನಸ್ಸು, ಫಿಟ್‌ನೆಸ್‌ ಎಲ್ಲವೂ ಬೇಕು. ಸಾಕಷ್ಟು ಸಮಯವನ್ನೂ ಕೊಡಬೇಕು. ಸದ್ಯ ಸಿನಿಮಾ ಮುಗಿಯುವವರೆಗೆ ಸಂಗೀತಕ್ಕೆ ಬ್ರೇಕ್‌ ಕೊಟ್ಟಿದ್ದೇನೆ. ನವೆಂಬರ್‌ನಿಂದ ಮತ್ತೆ ಸಂಗೀತ ಯಾನ ಮುಂದುವರಿಯಲಿದೆ.

‘ಪ್ರವಾಹ’ಗಳ ಮಧ್ಯೆ ಚಂದನ್‌ ಅವರಿಗೆ ಚಂದನವನದ ಸ್ವಾಗತ ಹೇಗಿದೆ?

ಈವರೆಗೆ ಚೆನ್ನಾಗಿದೆ. ಎಲ್ಲರೂ ಪ್ಯಾನ್‌ ಇಂಡಿಯಾ ಅನ್ನುತ್ತಾ ಸಿನಿಮಾ ಮಾಡುತ್ತಿದ್ದಾರೆ. ಆಯಾ ಭಾಷೆಗಳಲ್ಲಿ ಕಂಟೆಂಟ್‌ ಸಿಗುತ್ತಿದೆ. ಆದರೆ, ಹಿಂದಿ ಅಥವಾ ಬೇರೆ ಭಾಷೆಗಳ ಕಂಟೆಂಟ್‌ ಕನ್ನಡದಲ್ಲಿ ಸಿಕ್ಕಿದರೂ ನಮ್ಮ ಜನ ಅದೇ ಭಾಷೆಗಳಲ್ಲಿ ನೋಡುತ್ತಾರೆಯೇ ವಿನಾ ಅದರ ಕನ್ನಡ ಆವೃತ್ತಿಯನ್ನು ನೋಡುವುದಿಲ್ಲ. ಹಾಗೆಯೇ ಕನ್ನಡ ಚಿತ್ರಗಳು ಬೇರೆ ಭಾಷೆಗೆ ಡಬ್‌ ಆದಾಗ ಆ ಭಾಷೆಯಲ್ಲಿ ನೋಡುತ್ತಾರೆ. ಆದರೆ, ಮೂಲ ಕನ್ನಡ ಆವೃತ್ತಿಯನ್ನು ನೋಡುವುದಿಲ್ಲ. ಈ ಬೇಸರ ನನಗಿದೆ. ಪಬ್‌ಗಳಲ್ಲಿ ಅದ್ಯಾವುದೋ ಅರ್ಥವಾಗದ ಭಾಷೆಯ ಪಾಪ್‌, ರ‍್ಯಾಪ್‌ ಹಾಡುಗಳನ್ನು ಹಾಕುತ್ತಾರೆ. ಆದರೆ, ಕನ್ನಡ ಅನ್ನುವ ಕಾರಣಕ್ಕೆ ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನು ನುಡಿಸುವುದಿಲ್ಲ. ಸಂಗೀತ, ಕಲೆಗೆ ಭಾಷೆಯ ಹಣೆಪಟ್ಟಿ ಯಾಕೆ ಕಟ್ಟುತ್ತಾರೋ ಗೊತ್ತಿಲ್ಲ. ಈ ಟ್ರೆಂಡ್‌ ಪೂರ್ಣ ಬದಲಾಗಬೇಕು. ಕೆಲವೆಡೆಯಷ್ಟೇ ಕನ್ನಡ ಹಾಡು ಕೇಳಿಬರುತ್ತಿವೆ.

ಏನಿದು ‘ಸೂತ್ರಧಾರಿ’?

‘ಸೂತ್ರಧಾರಿ’ ಕ್ರೈಮ್‌ ಥ್ರಿಲ್ಲರ್‌ ಚಿತ್ರ. ಎರಡೂವರೆ ಗಂಟೆ ಕಾಲ ನಿಮ್ಮನ್ನು ಕೂರಿಸುತ್ತದೆ. ಪ್ರತಿ 10ರಿಂದ 15 ನಿಮಿಷಗಳಿಗೊಮ್ಮೆ ಕಥೆ ತಿರುವು ಪಡೆದುಕೊಳ್ಳುತ್ತದೆ. ಚಿತ್ರದಲ್ಲಿ ಅಂಡರ್‌ಕವರ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರಕ್ಕಾಗಿ ನಾನು ಹನ್ನೆರಡು ಕೆ.ಜಿ. ತೂಕ ಇಳಿಸಿಕೊಂಡಿದ್ದೀನಿ. ಅಕ್ಟೋಬರ್‌ ಕೊನೆಗೆ ಚಿತ್ರೀಕರಣ ಮುಕ್ತಾಯವಾಗಬಹುದು.

ಅಭಿಮಾನಿಗಳಿಗೆ ಏನು ಹೇಳುತ್ತೀರಿ?

ಅಭಿಮಾನಿಗಳು ಈವರೆಗೆ ಕೈ ಹಿಡಿದಿದ್ದಾರೆ. ಒಂದು ನೆನಪಿಡಿ. ಒಂದು ಚಿತ್ರ, ಆಲ್ಬಂ ಹಾಡು ಏನೇ ಕೃತಿ ನಿರ್ಮಾಣವಾಗಬೇಕಾದರೂ ನೂರಾರು ಜನರ ಶ್ರಮ, ಹಣ ವ್ಯಯವಾಗಿರುತ್ತದೆ. ಜಾಲತಾಣಗಳಲ್ಲಿ ಅದನ್ನು ಹೀನಾಯವಾಗಿ ಕಾಣಬೇಡಿ. ಯಾವುದೇ ವಿಮರ್ಶೆ, ಚರ್ಚೆ ಆರೋಗ್ಯಕರವಾಗಿರಲಿ ಎಂಬುದೇ ನನ್ನ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.