ADVERTISEMENT

ಸಾರ್ವಜನಿಕರಿಗೆ ರಿಷಿ ಸಂದೇಶ

ಕೆ.ಎಚ್.ಓಬಳೇಶ್
Published 5 ಸೆಪ್ಟೆಂಬರ್ 2019, 19:30 IST
Last Updated 5 ಸೆಪ್ಟೆಂಬರ್ 2019, 19:30 IST
‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲಿ ರಿಷಿ
‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲಿ ರಿಷಿ   

‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದವರು ನಟ ರಿಷಿ. ಅವರು ನಾಯಕ ನಟನಾಗಿ ಗಟ್ಟಿಯಾಗಿ ನೆಲೆಯೂರಲು ಅವಕಾಶ ಕಲ್ಪಿಸಿದ ಚಿತ್ರ ‘ಕವಲುದಾರಿ’. ಈಗ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
‘ಸಿನಿಮಾ ನಿರ್ಮಾಣ ಮಾಡುವುದು ಮುಖ್ಯವಲ್ಲ. ಜನರಿಗೆ ಅದನ್ನು ತಲುಪಿಸುವುದೇ ದೊಡ್ಡ ಸವಾಲು’

–ಹೀಗೆಂದು ಸ್ಪಷ್ಟವಾಗಿ ಹೇಳಿದರು ನಟ ರಿಷಿ. ‘ಕವಲುದಾರಿ’ ಚಿತ್ರದ ಯಶಸ್ಸಿನ ಬಳಿಕ ಸಿನಿಮಾಗಳ ಆಯ್ಕೆಯಲ್ಲಿ ನೀವು ಸಾಕಷ್ಟು ಚ್ಯೂಸಿಯಾಗಿದ್ದೀರಾ? ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.

‘ವಾರವೊಂದಕ್ಕೆ ಹಲವು ಸಿನಿಮಾಗಳು ತೆರೆಕಾಣುತ್ತಿವೆ. ಹಾಗಾಗಿ, ಒಂದು ಸಿನಿಮಾದತ್ತ ಪ್ರೇಕ್ಷಕರ ಚಿತ್ತ ಸೆಳೆಯಲು ಹರಸಾಹಸ ಪಡಬೇಕಿದೆ. ಜಾಸ್ತಿ ಸಿನಿಮಾ ಒಪ್ಪಿಕೊಂಡು ಓವರ್‌ ಎಕ್ಸ್‌ಪೋಸ್‌ ಆಗಲು ನನಗಿಷ್ಟವಿಲ್ಲ. ಹಾಗೆ ಮಾಡಿದರೆ ಜನರಿಗೆ ನನ್ನ ಸಿನಿಮಾಗಳ ಮೇಲೆ ಆಸಕ್ತಿ ಇರುವುದಿಲ್ಲ’ ಎಂದು ಇನ್ನಷ್ಟು ವಿಸ್ತರಿಸಿ ಹೇಳಿದರು.

ADVERTISEMENT

ರಿಷಿ ನಟನೆಯ ಅನೂಪ್‌ ರಾಮಸ್ವಾಮಿ ಕಶ್ಯಪ್‌ ನಿರ್ದೇಶನದ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗಿವೆ. ಶೀಘ್ರವೇ, ಜನರು ಮುಂದೆ ಬರುವ ಆಲೋಚನೆ ಅವರದ್ದು.
‘ಆಪರೇಷನ್‌ ಅಲಮೇಲಮ್ಮ’ ರಿಷಿ ನಟನೆಯ ಮೊದಲ ಚಿತ್ರ. ಕಾಮಿಡಿ ಜಾನರ್‌ನಿಂದ ‘ಕವಲುದಾರಿ’ಯ ಸಸ್ಪೆನ್ಸ್‌ ಹಾದಿಗೆ ಹೊರಳಿದ್ದ ಅವರು ಮತ್ತೆ ಸಸ್ಪೆನ್ಸ್‌ ಮತ್ತು ಕಾಮಿಡಿ ಉಣಬಡಿಸುವ ತವಕದಲ್ಲಿದ್ದಾರೆ.

‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಮನರಂಜನಾತ್ಮಕ ಚಿತ್ರ. ನನ್ನ ಪಾತ್ರದ ಹೆಸರು ವೇದಾಂತ. ಆತ ಮತ್ತು ಅವನ ಗೆಳತಿ ಒಮ್ಮೆ ಹೊರಗೆ ಹೋಗುತ್ತಾರೆ. ಅಲ್ಲಿ ಚಿನ್ನದ ಸರ ಕಳೆದುಹೋಗುತ್ತದೆ. ಸಿನಿಮಾ ಶುರುವಾಗುವುದು ಅಲ್ಲಿಂದಲೇ. ಸರ ಹುಡುಕಿಕೊಂಡು ಎಲ್ಲೆಲ್ಲಿ ಹೋಗುತ್ತಾರೆ, ಅದನ್ನು ಪಡೆಯಲು ಏನೆಲ್ಲಾ ಹರಸಾಹಸ ಮಾಡುತ್ತಾರೆ. ಕೊನೆಗೆ ಯಾವ ಅನಾಹುತಕ್ಕೆ ಸಿಲುಕುತ್ತಾರೆ ಎನ್ನುವುದೇ ಇದರ ಹೂರಣ’ ಎಂದು ವಿವರಿಸುತ್ತಾರೆ.‌

‘ವೇದಾಂತ ಎಂಬಿಎ ವಿದ್ಯಾರ್ಥಿ. ನಾನು ಈ ಹಿಂದೆ ಮ್ಯಾನೇಜ್‌ಮೆಂಟ್‌ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸಿದ್ದೆ. ಇದು ಈ ಪಾತ್ರದ ನಿರ್ವಹಣೆಗೆ ಸಹಕಾರಿಯಾಯಿತು. ನನ್ನ ಹಿಂದಿನ ಚಿತ್ರಗಳಲ್ಲಿ ನೃತ್ಯಗಳಿದ್ದ ಹಾಡುಗಳು ಇರಲಿಲ್ಲ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಯಾವುದೇ ನೃತ್ಯ ಶಾಲೆಗೆ ಹೋಗಿ ತರಬೇತಿ ಪಡೆದಿಲ್ಲ. ಎಂಜಾಯ್‌ ಮಾಡಿ ಡಾನ್ಸ್‌ ಮಾಡಿರುವೆ. ಅದು ಜನರಿಗೆ ಇಷ್ಟವಾಗಬೇಕು ಅಷ್ಟೆ’ ಎಂದು ನಕ್ಕರು.

‘ಆಪರೇಷನ್‌ ಅಲಮೇಲಮ್ಮ’ದಲ್ಲಿ ಹಾಸ್ಯ ಮೇಳೈಸಿತ್ತು. ಚಿತ್ರ ನೋಡಿದ ಎಲ್ಲರೂ ನನ್ನ ಕಾಮಿಡಿ ಟೈಮಿಂಗ್‌ ಚೆನ್ನಾಗಿದೆ ಎಂದು ಕೇಳುತ್ತಿದ್ದರು. ‘ಕವಲುದಾರಿ’ಯಲ್ಲಿ ಸೀರಿಯಸ್‌ ಆದ ಪಾತ್ರ ಮಾಡಿದ್ದೆ. ಇದರ ಯಶಸ್ಸಿನ ಬಳಿಕ ವಿಭಿನ್ನ ರೀತಿಯ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ’ ಎನ್ನುತ್ತಾರೆ.

ಪುನೀತ್‌ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ’ ಪ್ರೊಡಕ್ಷನ್‌ನ ಮೊದಲ ಚಿತ್ರ ‘ಕವಲುದಾರಿ’ ಚಿತ್ರದಲ್ಲಿ ನಟಿಸಿದ್ದು ಅವರಿಗೆ ಖುಷಿ ನೀಡಿದೆಯಂತೆ. ‘ಪಿಆರ್‌ಕೆ ಪ್ರೊಡಕ್ಷನ್‌ನಡಿ ಮತ್ತೊಂದು ಸಿನಿಮಾ ಮಾಡುವ ಆಸೆಯಂತೂ ಇದೆ. ಸದ್ಯಕ್ಕೆ ಅಂತಹ ಯಾವುದೇ ಯೋಜನೆ ಇಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ.

ಹಳೆಯ ಇಂಗ್ಲಿಷ್‌ ಮತ್ತು ಕನ್ನಡ ಸಾಹಿತ್ಯದಲ್ಲಿನ ಕ್ಲಾಸಿಕ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅವರಿಗೆ ಇಷ್ಟವಂತೆ. ‘ಜೂಲಿಯಸ್‌ ಸೀಸರ್ ನಾಟಕದಲ್ಲಿ ಬ್ರೂಟಸ್‌ ಪಾತ್ರ ಮಾಡಲು ಇಷ್ಟ. ಪೌರಾಣಿಕ ಪಾತ್ರದಲ್ಲಿ ಕರ್ಣನ ಪಾತ್ರ ಮಾಡಬೇಕೆಂಬ ಆಸೆ ಇದೆ. ಮುಂದೊಂದು ದಿನ ಅವಕಾಶ ಸಿಕ್ಕಿದರೆ ಖಂಡಿತ ಆ ಪಾತ್ರ ನಿರ್ವಹಿಸುತ್ತಾನೆ’ ಎನ್ನುತ್ತಾರೆ.

ರಿಷಿ ನಾಯಕ ನಟನಾಗಿರುವ ಇನ್ನೂ ಶೀರ್ಷಿಕೆ ಅಂತಿಮಗೊಂಡಿಲ್ಲದೆ ಸಿನಿಮಾವೊಂದರ ಶೂಟಿಂಗ್‌ ಪೂರ್ಣಗೊಂಡಿದೆಯಂತೆ. ಜೊತೆಗೆ, ಜೇಕಬ್‌ ವರ್ಗೀಸ್‌ ನಿರ್ದೇಶನದ ‘ಸಕಲ ಕಲಾವಲ್ಲಭ’ ಚಿತ್ರದ ಶೂಟಿಂಗ್‌ ಕೂಡ ಮುಗಿದಿದೆ. ಯೂಟ್ಯೂಬ್‌ ಚಾನೆಲ್‌ನ ನಾಟಿ ಫ್ಯಾಕ್ಟರಿ ಹುಡುಗರು ನಿರ್ಮಿಸುತ್ತಿರುವ ‘ರಾಮನ ಅವತಾರ’ದಲ್ಲಿ ಕಾಣಿಸಿಕೊಳ್ಳಲು ಅವರು ತಯಾರಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.